ಹನೂರು ತಾಲೂಕಿನ ಕಣ್ಣೂರು ಗ್ರಾಮದ ಬಡಾವಣೆಯೊಂದರ ಹೊರನೋಟ.
- ದೈವಾನುಗ್ರಹದ ಫಲದಿಂದ ಮರಳಿದ ನೇತ್ರ
- ಪೌರಾಣಿಕ ಹಿನ್ನೆಲೆ ಹೊಂದಿರುವ ಗ್ರಾಮ
- ಮೋಡಹಳ್ಳಿ ಜನರು ಸ್ಥಳಾಂತರ
ಮನೆಯಲ್ಲಿ ಹಾಲು ನೀಡದೆ ಕಾಡಿನಲ್ಲಿದ್ದ ಲಿಂಗಕ್ಕೆ ಹಾಲುಣಿಸುತ್ತಿದ್ದ ಹಸುಗೆ ಮಚ್ಚಿನಿಂದ ಹೊಡೆಯಲು ಹೋಗಿ ಲಿಂಗಕ್ಕೆ ಬಿದ್ದ ಏಟಿನ ಪ್ರಾಯಶ್ಚಿತದ ಫಲ ಹಾಗೂ ದೈವಾನುಗ್ರಹದಿಂದ ಮತ್ತೆ ಕಣ್ಣು ಪಡೆದುಕೊಂಡ ಗೋಪಾಲಕನಿಂದ ನಾಮಕರಣಗೊಂಡ ಊರೇ ಹನೂರು ತಾಲೂಕಿನ ಕಣ್ಣೂರು.
ಹನುಮಪುರಿ ಎಂದೇ ಕರೆಯುತ್ತಿದ್ದ ಇಂದಿನ ಹನೂರು ಭಾಗ ಹಿಂದೆ ದಟ್ಟಾರಣ್ಯವಾಗಿದ್ದು, ಕಾಡು ಪ್ರಾಣಿಗಳ ಆವಾಸ ಸ್ಥಾನವಾಗಿತ್ತು. ನೀರಿನ ಆಸರೆ ಇರುವ ಹಳ್ಳ ಕೊಳ್ಳದ ಕಡೆಗಳಲ್ಲಿ ವಲಸೆಯ ಜನರು ವಾಸಿಸುತ್ತಿದ್ದರು. ಜೀವನೋಪಾಯಕ್ಕೆ ಅಲ್ಲಲ್ಲಿ ಬೆಳೆ ಬೆಳೆದುಕೊಳ್ಳುತ್ತಿದ್ದರು. ಜತೆಗೆ ಹಸುಗಳನ್ನು ಸಾಕುತ್ತಿದ್ದರು. ಇದರಲ್ಲಿ ಅಲ್ಲಲ್ಲಿ ಶಾಶ್ವತವಾಗಿ ನೆಲೆನಿಂತ ಜನರು ದನದ ದೊಡ್ಡಿಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆಯಾ ಪ್ರದೇಶಕ್ಕೆ ತಕ್ಕಂತೆ ಹೆಸರನ್ನು ಇಟ್ಟುಕೊಂಡು ವಾಸಿಸ ತೊಡಗಿದರು. ಇನ್ನು ಕೆಲ ಗ್ರಾಮಗಳು ನಾಯಕತ್ವ ಹೊಂದಿದವರ ಹೆಸರಿನಲ್ಲಿ ರೂಪುಗೊಂಡವು. ಹಾಗಾಗಿ ಹನೂರು ಭಾಗದಲ್ಲಿನ ಗ್ರಾಮಗಳು ರೂಪುಗೊಂಡ ಬಗ್ಗೆ ತನ್ನದೇಯಾದ ಪೌರಾಣಿಕ ಹಿನ್ನೆಲೆಯನ್ನು ಒಳಗೊಂಡಿದೆ. ಆದರೆ ಗೋಪಾಲಕನೊಬ್ಬನ ಅನಾಕರಿಕತೆಯ ಅಚಾತುರ್ಯದ ಕೆಲಸದಿಂದ ದೇವರ ಶಾಪದಿಂದ ಕಣ್ಣು ಕಳೆದುಕೊಂಡು ಪಶ್ಚಾತ್ತಾಪಕ್ಕೆ ಒಳಗಾಗಿ ಅನುಗ್ರಹದಿಂದ ಮತ್ತೆ ಕಣ್ಣನ್ನು ಪಡೆದಾತನ ಸ್ಥಳಕ್ಕೆ ಇಟ್ಟ ಹೆಸರು ಕಣ್ಣೂರು ಗ್ರಾಮವಾಗಿ ರೂಪುಗೊಂಡಿದೆ.
ಶ್ರೀ ಶಿವಲಂಕಾರೇಶ್ವರ ಗುಡಿ, ಕೊಳ ನಿರ್ಮಾಣ
ಈಗಿನ ಕಣ್ಣೂರು ಗ್ರಾಮ ಹಿಂದೆ ಅರಣ್ಯ ಪ್ರದೇಶದಿಂದ ಕೂಡಿತ್ತು. ಸಮೀಪದಲ್ಲಿ ಹರಿಯುತ್ತಿದ್ದ ದೊಡ್ಡ ಹಳ್ಳದ ಬಳಿ (ಈಗಿನ ಗುಂಡಾಲ್ ಜಲಾಶಯ) ಜನರು ವಾಸಕ್ಕೆ ಯೋಗ್ಯವಾದ ಸ್ಥಳವೆಂದು ದನದ ದೊಡ್ಡಿಗಳನ್ನು ಹಾಕಿಕೊಂಡು ನೆಲೆ ನಿಂತರು. ಈ ಭಾಗದಲ್ಲಿ ಹೆಚ್ಚು ಮಳೆ ಹಾಗೂ ಮೋಡ ಕವಿದ ವಾತಾವರಣ ಇರುತ್ತಿದ್ದ ಕಾರಣ ಜನರು ಈ ಸ್ಥಳಕ್ಕೆ ಮೋಡಹಳ್ಳಿ ಎಂದು ಹೆಸರಿಟ್ಟುಕೊಂಡರು. ಈಗಿರುವಾಗ ಗೋಪಾಲಕನೊಬ್ಬನ ಹಸುವೊಂದು ನಿತ್ಯ ಅರಣ್ಯ ಪ್ರದೇಶಕ್ಕೆ ತೆರಳಿ ಮೇವು ಮೇಯ್ದು ಬರುತ್ತಿತ್ತು. ಆದರೆ ದೊಡ್ಡಿಯಲ್ಲಿ ಹಾಲನ್ನು ನೀಡುತ್ತಿರಲಿಲ್ಲ. ಈ ಬಗ್ಗೆ ಅನುಮಾನಗೊಂಡ ಗೋಪಾಲಕ ಒಂದು ದಿನ ಹಿಂಬಾಲಿಸಿದಾಗ ಹಸು ಸೀಗೆ ಮೆಳೆಯಲ್ಲಿ ಉದ್ಭವವಾಗಿದ್ದ ಶಿವನ ಸ್ವರೂಪಿ ಲಿಂಗಕ್ಕೆ ಹಾಲನ್ನು ನೀಡುತ್ತಿತ್ತು. ಇದರಿಂದ ಕುಪಿತಗೊಂಡ ಗೋಪಾಲಕ ಮಚ್ಚಿನಿಂದ ಹಸುವಿನ ಕಾಲಿಗೆ ಹೊಡೆಯಲು ಹೋದಾಗ ಇದರ ಏಟು ಲಿಂಗಕ್ಕೆ ಬಿತ್ತು. ದೇವರ ಶಾಪದಿಂದ ಗೋಪಾಲಕ ಕಣ್ಣಿನ ದೃಷಿಯನ್ನು ಕಳೆದುಕೊಂಡನು ಎಂದು ಪುರಾಣ ಹೇಳುತ್ತದೆ.
ಮನೆಗೆ ಬಾರದಿರುವುದನ್ನು ತಿಳಿದ ಈತನ ಮನೆಯವರು ಅರಣ್ಯ ಪ್ರದೇಶಕ್ಕೆ ಹುಡುಕಿಕೊಂಡು ಹೋದಾಗ ಗೋಪಾಲಕ ಘಟನೆಯ ಬಗ್ಗೆ ತಿಳಿಸಿದ. ಆದ ಪ್ರಾಯಶ್ಚಿತಕ್ಕೆ ಪಶ್ಚಾತ್ತಾಪಪಟ್ಟು ದೇವರ ಮೊರೆ ಹೋಗಿ ಮಾಡಿದ ತಪ್ಪಿಗೆ ಸಮೀಪದಲ್ಲಿಯೇ ಕೊಳವನ್ನು ನಿರ್ಮಿಸಿ, ಗುಡಿಯನ್ನು ಕಟ್ಟಿಸಿ ಪೂಜೆ ಸಲ್ಲಿಸುವುದಾಗಿ ಗೋಪಾಲಕ ಬೇಡಿಕೊಂಡನು. ದೇವರು ಅದೃಶ್ಯದ ರೂಪದಲ್ಲಿ ಕಾಣಿಸಿಕೊಂಡು ಕೃಪೆ ತೋರಿದಾಗ ಕಳೆದುಕೊಂಡಿದ್ದ ಕಣ್ಣಿನ ದೃಷ್ಟಿ ಮತ್ತೆ ಬಂತು. ಗೋಪಾಲಕ ಕೊಳ ಹಾಗೂ ಪುಟ್ಟ ಗುಡಿಯನ್ನು ಕಟ್ಟಿಸಿ ಶಿವಾಲಂಕಾರೇಶ್ವರ ದೇವಸ್ಥಾನ ಹಾಗೂ ಈ ಪ್ರದೇಶಕ್ಕೆ ಕಣ್ಣೂರು ಎಂದು ಹೆಸರಿಟ್ಟನು. ಈತನನ್ನು ಜನರು ಕಣ್ಣೂರಪ್ಪ ಎಂದೇ ಕರೆಯುತ್ತಿದ್ದರು. ಮೋಡಹಳ್ಳಿಯಲ್ಲಿ ಇದ್ದಂತಹ ಜನರು ಕಣ್ಣೂರಿಗೆ ಬಂದು ನೆಲೆಸಿದರು ಎಂದು ಪೌರಾಣಿಕ ಹಿನ್ನೆಲೆಯಿಂದ ತಿಳಿದುಬರುತ್ತದೆ. ಪ್ರಸ್ತುತ ಕಣ್ಣೂರು ಗ್ರಾಮಸ್ಥರು ಮೂಲತಃ ಮೋಡಹಳ್ಳಿ ಗ್ರಾಮದವರು.
ಅಂದಿನ ಕಾಲಘಟ್ಟದಲ್ಲಿ ಈ ಪ್ರದೇಶ ತಮಿಳುನಾಡಿನ ಚೋಳರ ಆಳ್ವಿಕೆಗೆ ಒಳಪಟ್ಟಿತ್ತು. ರಾಜ್ಯವನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ರಾಜರು ಹಾಗೂ ಸೈನಿಕರು ಈ ಭಾಗಕ್ಕೆ ಆಗಾಗ್ಗೆ ದಂಡೆತ್ತಿ ಬರುತ್ತಿದ್ದರು. ದಿಗ್ವಿಜಯದ ನೆನಪಿಗಾಗಿ ಅಲ್ಲಲ್ಲಿ ದೇಗುಲಗಳನ್ನು ನಿರ್ಮಿಸಿದ್ದಾರೆ. ಇದರಲ್ಲಿ ಲಿಂಗ ಒಳಗೊಂಡ ಶಿವಲಂಕಾರೇಶ್ವರ ಪುಟ್ಟ ಗುಡಿಯನ್ನು ದೊಡ್ಡದಾಗಿ ನಿರ್ಮಿಸಿದರು. ಜತೆಗೆ ಬೀರೇಶ್ವರ, ವಿಘ್ನೇಶ್ವರ ದೇಗುಲದ ನಿರ್ಮಾಣಕ್ಕೂ ಕಾರಣಕರ್ತರಾದರು. ಇದಕ್ಕೆ ಕುರುಹಾಗಿ ದೇಗುಲದ ಆವರಣದಲ್ಲಿಯೇ ಶಿಲಾಶಾಸನವನ್ನು ಕಾಣಬಹುದು. ಅಂದು ಗುಡಿಯ ಪಕ್ಕದಲ್ಲೇ ನಿರ್ಮಾಣವಾದ ಕೊಳ ಇಂದು ಗ್ರಾಮದ ದೊಡ್ಡಕೆರೆಯಾಗಿ ರೂಪುಗೊಂಡಿದ್ದು, ನೀರಿನ ಆಸರೆಯಾಗಿದೆ.
ಕಣ್ಣೂರಪ್ಪನ ವಂಶಸ್ಥರಿಂದ ಪೂಜೆ
ಗ್ರಾಮದ ಹೆಸರಿಗೆ ಪೌರಾಣಿಕ ಇತಿಹಾಸವನ್ನು ಒದಗಿಸುವ ಶಿವಲಂಕಾರೇಶ್ವರ ದೇಗುಲದಲ್ಲಿ ಕಣ್ಣೂರಪ್ಪನ ಮನೆತನದವರು ಕಳೆದ 3 ತಲೆಮಾರಿನಿಂದ ಪೂಜೆ ಸಲ್ಲಿಸುತ್ತಿದ್ದಾರೆ. ಈ ದೇಗುಲದಲ್ಲಿ ಹಬ್ಬ ಹರಿದಿನ ಹಾಗೂ ಅಮಾವಾಸ್ಯೆಯಂದು ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಗೌರಿ ಹಬ್ಬದ ವೇಳೆ ಸೀಗೆ ಸೊಪ್ಪಿನ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಈ ದೇಗುಲ ಗ್ರಾಮದ ಪುರಾತನ ಹಾಗೂ ಪ್ರಥಮ ದೇಗುಲವಾಗಿದೆ. ಗ್ರಾಮದಲ್ಲಿ ಜಡೇಸ್ವಾಮಿ, ವಿಘ್ನೇಶ್ವರ, ಬೀರೇಶ್ವರ, ಸಿದ್ದಪ್ಪಾಜಿ, ಮಾರಮ್ಮ, ಮಹದೇಶ್ವರ ಹಾಗೂ ಶನೈಶ್ಚರಸ್ವಾಮಿ ದೇಗುಲಗಳಿವೆ.
ತಾಲೂಕು ಕೇಂದ್ರದಿಂದ 8 ಕಿ.ಮೀ. ಅಂತರವನ್ನು ಹೊಂದಿರುವ ಈ ಗ್ರಾಮವು ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಗೆ ಸೇರಿದ್ದು, ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದೆ. 728 ಕುಟುಂಬಗಳಿದ್ದು, 3,152 ಜನಸಂಖ್ಯೆ ಇದೆ. ಇಲ್ಲಿ ಲಿಂಗಾಯತ, ಕುರುಬ, ನಾಯಕ, ಪರಿಶಿಷ್ಟ ಜಾತಿ, ಮುಸ್ಲಿಮರು, ಮಡಿವಾಳ, ವಿಶ್ವಕರ್ಮ ಹಾಗೂ ಸವಿತಾ ಸಮಾಜದ ಜನರು ವಾಸಿಸುತ್ತಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆ, ಆರೋಗ್ಯ ಉಪ ಕೇಂದ್ರವಿದೆ. ಬಸ್ ಸೌಕರ್ಯವಿದೆ. ರಸ್ತೆ, ಚರಂಡಿ ಹಾಗೂ ಇನ್ನಿತರ ಅಗತ್ಯ ಮೂಲ ಸೌಕರ್ಯದ ಕೊರತೆ ಇದೆ.
ದೇವರಿಂದ ಕಣ್ಣಿನ ದೃಷ್ಟಿಯನ್ನು ಮತ್ತೆ ಪಡೆದ ಗೋಪಾಲಕನಿಂದ ಗ್ರಾಮಕ್ಕೆ ಕಣ್ಣೂರು ಎಂದು ಹೆಸರು ಬಂದಿದೆ. ಪೌರಾಣಿಕ ಹಿನ್ನೆಲೆ ಇದೆ. ಶಿವಲಂಕಾರೇಶ್ವರ ದೇಗುಲದಲ್ಲಿ ಕಣ್ಣೂರಪ್ಪನ ವಂಶಸ್ಥರು ಪೂಜಾ ಕಾರ್ಯ ಮಾಡುತ್ತಿದ್ದಾರೆ. ಚೋಳರ ಕಾಲದಲ್ಲಿ ನಿರ್ಮಿತವಾದ ದೇಗುಲಗಳ ಜತೆಗೆ ಇನ್ನು ಕೆಲ ದೇಗುಲಗಳಿವೆ. ವಿವಿಧ ಸಮುದಾಯದ ಜನರು ನೆಲೆಸಿರುವ ಗ್ರಾಮವಾಗಿದೆ.
ಪ್ರಕಾಶ್ ಕಣ್ಣೂರು ಗ್ರಾಮದ ಹಿರಿಯ