ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಚಾಮರಾಜನಗರ ತಾಲೂಕು ನೂತನ ಘಟಕ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಸಮಾಜ ಸೇವಕ ಶ್ರೀನಿಧಿ ಕುದರ್ ಉದ್ಘಾಟಿಸಿದರು. ರಾಜೇಂದ್ರ ರಾಮಸಮುದ್ರ, ಎಂ.ಜಿ.ಮಹೇಶ್ ಕುಮಾರ್, ದೇವರಾಜ್, ಪಿ.ಶಿವಸುಂದರ್ ಇತರರು ಇದ್ದರು.
- ಯುವ ಉದ್ಯಮಿ ಶ್ರೀನಿಧಿ ಕುದರ್ ಅಭಿಪ್ರಾಯ
- ಕನ್ನಡ ನೆಲ, ಜಲ, ಭಾಷೆ ಸಂರಕ್ಷಣೆಯಲ್ಲಿ ಕನ್ನಡ ಸಂಘಟನೆಗಳ ಪಾತ್ರ ಅಪಾರ
ಕನ್ನಡ ನೆಲ, ಜಲ, ಭಾಷೆ ಸಂರಕ್ಷಣೆಯಲ್ಲಿ ಕನ್ನಡ ಸಂಘಟನೆಗಳ ಪಾತ್ರ ಅಪಾರವಾಗಿದೆ ಎಂದು ಸಮಾಜ ಸೇವಕ ಶ್ರೀನಿಧಿ ಕುದರ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಚಾಮರಾಜನಗರ ತಾಲೂಕು ನೂತನ ಘಟಕ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ದೇಶವನ್ನು ರಕ್ಷಣೆ ಮಾಡುವಲ್ಲಿ ಯೋಧರ ಅಗತ್ಯ ಎಷ್ಟಿದೆಯೋ, ರಾಜ್ಯದ ನಾಡು, ನುಡಿ, ಜಲ ಸಂರಕ್ಷಣೆಗೆ ಕನ್ನಡ ಸಂಘಟನೆಗಳ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಭಾಷೆ, ನಾಡು, ನುಡಿ, ಜಲದ ವಿಚಾರದ ಬಂದಾಗ ಮೊಟ್ಟಮೊದಲು ದನಿ ಎತ್ತಲಾಗುತ್ತಿದೆ. ಇಲ್ಲಿರುವ ಕನ್ನಡಪರ ಸಂಘಟನೆಗಳು ಹಾಗೂ ಹೋರಾಟಗಾರರು ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ ಎಂದರು.
ವಕೀಲ ರಾಜೇಂದ್ರ ರಾಮಸಮುದ್ರ ಮಾತನಾಡಿ, ಕನ್ನಡ ಭಾಷೆ ನಾವು ಬಳಕೆ ಮಾಡಿದಷ್ಟು ಉಳಿಯುತ್ತದೆ. ಕನ್ನಡಪರ ಸಂಘಟನೆಗಳು ನಾಡು, ನುಡಿಯ ವಿಚಾರದಲ್ಲಿ ಪ್ರಾಮಾಣಿಕವಾಗಿ ಹೋರಾಟ ರೂಪಿಸಬೇಕು. ಪರಿಭಾಷೆಗಳು ಹಾವಳಿಯಿಂದ ನಾಡನ್ನು ರಕ್ಷಣೆ ಮಾಡಲು ಕನ್ನಡಪರ ಸಂಘಟನೆಗಳು ಧ್ವನಿಯಾಗಬೇಕಿದೆ ಎಂದರು.
ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಂ.ಜಿ.ಮಹೇಶ್ ಕುಮಾರ್ ಮಾತನಾಡಿ, ಪ್ರಸ್ತುತ ನಮ್ಮ ಹಕ್ಕನ್ನು ನಾವು ಹೋರಾಟದಿಂದಲೇ ಪಡೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಯುವಕರು ಸಂಘಟನೆಯನ್ನು ಸದೃಢಗೊಳಿಸುವ ಮೂಲಕ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪುವಂತೆ ಸೇವೆ ಸಲ್ಲಿಸಬೇಕು. ನಾಡು, ನುಡಿ, ಜಲ, ನೆಲದ ವಿಚಾರದಲ್ಲಿ ಯಾವುದೇ ಧಕ್ಕೆ ಬಂದಾಗ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಧ್ವನಿ ಎತ್ತಬೇಕು ಎಂದರು.
ಈ ಸಂದಂರ್ಭದಲ್ಲಿ ಚಾಮರಾಜನಗರ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಕನ್ನಡದ ಶಾಲು ಹೊದಿಸುವ ಮೂಲಕ ಸಂಘಟನೆಯ ವಿವಿಧ ಜವಾಬ್ದಾರಿ ವಹಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ಉಪಾಧ್ಯಕ್ಷ ದೇವರಾಜ್, ಜಿಲ್ಲಾಧ್ಯಕ್ಷ ಪಿ.ಶಿವಸುಂದರ್, ಉಪಾಧ್ಯಕ್ಷ ಆನಂದ್, ತಾಲೂಕು ಘಟಕದ ಅಧ್ಯಕ್ಷ ಎಂ.ಕಿರಣ್‌ರಾಜ್, ಉಪಾಧ್ಯಕ್ಷ ಅರುಣ್ ಕುಮಾರ್, ಪೂರ್ವಿತ್ ಹಾಗೂ ಇತರರು ಹಾಜರಿದ್ದರು.