ಗೋಪಿಶೆಟ್ಟಿಯೂರು ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಗುರುಸ್ವಾಮೀಜಿ ಅವರ 27ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಕೃತಿಯನ್ನು ಬಿಡುಗಡೆ ಮಾಡಿದರು. ಡಾ. ಶರತ್‌ಚಂದ್ರ ಸ್ವಾಮೀಜಿ, ಡಾ.ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀಕಂಠ ಸ್ವಾಮೀಜಿ ಇತರರು ಇದ್ದರು.  
ಚಾಮರಾಜನಗರ

ಗೋಪಿಶೆಟ್ಟಿಯೂರು ಸುತ್ತೂರು ಶಾಖಾ ಮಠದಲ್ಲಿ ಕಲಶಾರೋಹಣ

ಪ್ರಮುಖ ಮುಖ್ಯಾಂಶಗಳು

  • ಗೋಪುರದ ಉದ್ಘಾಟನೆ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಾಗಿ
  • ಲಿಂಗೈಕ್ಯ ಶ್ರೀ ಗುರುಸ್ವಾಮೀಜಿ 27ನೇ ವರ್ಷದ ಸ್ಮರಣೋತ್ಸವ
ಹನೂರು: ತಾಲೂಕಿನ ರಾಮಾಪುರ ಸಮೀಪದ ಗೋಪಿಶೆಟ್ಟಿಯೂರು ಸುತ್ತೂರು ಶಾಖಾ ಮಠದಲ್ಲಿ ಭಾನುವಾರ ಲಿಂಗೈಕ್ಯ ಶ್ರೀ ಗುರುಸ್ವಾಮೀಜಿ ಅವರ 27ನೇ ವರ್ಷದ ಸ್ಮರಣೋತ್ಸವ, ಗೋಪುರದ ಉದ್ಘಾಟನೆ ಹಾಗೂ ಕಲಶಾರೋಹಣ ನೆರವೇರಿಸಲಾಯಿತು.
ಶ್ರೀಗಳ ಸ್ಮರಣೋತ್ಸವದ ಅಂಗವಾಗಿ ಮಠವನ್ನು ತಳಿರು, ತೋರಣದಿಂದ ಸಿಂಗರಿಸಲಾಗಿತ್ತು. ಗದ್ದುಗೆಯನ್ನು ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಶ್ರೀ ಬಸವಣ್ಣ ಸ್ವಾಮೀಜಿ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ವಿವಿಧ ಮಠದ ಶ್ರೀಗಳ ಸಮ್ಮುಖದಲ್ಲಿ ನೂತನವಾಗಿ ನಿರ್ಮಿಸಿದ್ದ ಗೋಪುರ ಉದ್ಘಾಟಿಸಿ ಕಲಶಾರೋಹಣ ನೆರವೇರಿಸಲಾಯಿತು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗೆ ಹರಗುರು ಚರಮೂರ್ತಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಪಾದಪೂಜೆ ನೆರವೇರಿಸಲಾಯಿತು. ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಿಳಾ ತಂಡದ ಸದಸ್ಯರು ಕೋಲಾಟ ನೃತ್ಯ ಪ್ರದರ್ಶಿಸಿದರು. ತಾಲೂಕಿನ ವಿವಿಧೆಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರೀಮಠದಿಂದ ಪ್ರಸಾದ ವಿನಿಯೋಗಿಸಲಾಯಿತು.
ಇದಕ್ಕೂ ಮೊದಲು ಲಿಂ.ಗುರುಸ್ವಾಮೀಜಿ ಅವರ ಜೀವನ ಚರಿತ್ರೆ ಹಾಗೂ ಮಠದ ಇತಿಹಾಸ ಹೊಂದಿರುವ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಮೈಸೂರು ಕುಂದೂರು ಮಠದ ಡಾ. ಶ್ರೀ ಶರತ್‌ಚಂದ್ರ ಸ್ವಾಮೀಜಿ, ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮುಡಿಗುಂಡ ಮಠದ ಶ್ರೀಕಂಠಸ್ವಾಮೀಜಿ, ಗುಂಡೇಗಾಲದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ವಿವಿಧ ಮಠದ ಶ್ರೀಗಳು ಇದ್ದರು.