ಹನೂರು ತಾಲೂಕಿನ ಕಗ್ಗಲಿಗುಂದಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಆರ್.ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಮಾದೇಗೌಡ, ಮಂಜೇಶ್, ರಮೇಶ್, ಕ್ಯಾತೇಗೌಡ ಇತರರು ಇದ್ದರು.  
ಚಾಮರಾಜನಗರ

40 ಲಕ್ಷ ರೂ.ವೆಚ್ಚದಲ್ಲಿ ಕಗ್ಗಲಿಗುಂದಿ ರಸ್ತೆ ಅಭಿವೃದ್ಧಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ಆರ್.ಮಂಜುನಾಥ್ ಮಾಹಿತಿ
  • ಕಾಮಗಾರಿಗೆ ಭೂಮಿಪೂಜೆ

ಹನೂರು:

ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ಶೀಘ್ರ ಪೂರ್ಣಗೊಳಿಸಿ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಸೂಚನೆ ನೀಡಿದರು.

ತಾಲೂಕಿನ ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲಿಗುಂದಿ-ದೊಡ್ಡಮಾಲಾಪುರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಹಲವು ವರ್ಷಗಳ ಜನರ ಬೇಡಿಕೆ ಬಂಡಳ್ಳಿ-ಹನೂರು ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ರಾಮಾಪುರ, ನಾಲ್‌ರೋಡ್, ಮ.ಬೆಟ್ಟ, ಅಂಬಿಕಾಪುರ ಹಾಗೂ ಇನ್ನಿತರ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕೆಲವು ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಮಳೆ ಬಂದ ವೇಳೆ ಗಿರಿಜನರು ಸಂಚರಿಸಲು ಹಲವು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದ ಕಗ್ಗಲಿಗುಂದಿ ಗ್ರಾಮದ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಇದೀಗ ಟಿಎಸ್ಪಿ ಯೋಜನೆಯಡಿ 40 ಲಕ್ಷ ರೂ.ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಜನರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮುಖಂಡರಾದ ಕ್ಯಾತೇಗೌಡ, ಸಿದ್ದೇಗೌಡ, ಮಾದೇಗೌಡ, ಮಲ್ಲೇಶ್, ಮಲ್ಲೇಗೌಡ, ಶಿವಮಲ್ಲೇಗೌಡ, ರಮೇಶ್, ಮಂಜೇಶ್, ರಾಚೇಗೌಡ, ಶಿವಕುಮಾರ್ ಇತರರು ಇದ್ದರು.
ಕಾಮಗಾರಿ ಪರಿಶೀಲನೆ: ಬಳಿಕ ಅಜ್ಜೀಪುರದಿಂದ ಎಲ್ಲೇಮಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 7 ಕೋಟಿ ರೂ.ವೆಚ್ಚದಲ್ಲಿ ಪ್ರಗತಿಯಲ್ಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಎಂ.ಆರ್.ಮಂಜುನಾಥ್ ಪರಿಶೀಲಿಸಿದರು. ಸಂಬಂಧಪಟ್ಟವರಿಗೆ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದರು. ಇದೇ ವೇಳೆ ಕುರಟ್ಟಿ ಹೊಸೂರಿನಲ್ಲಿ ಪ್ರಗತಿಯಲ್ಲಿರುವ ರಸ್ತೆ ವಿಸ್ತರಣೆ ಕಾಮಗಾರಿಗೆ ಗ್ರಾಮಸ್ಥರು ಸಹಕಾರ ನೀಡಬೇಕು. ಇದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಪಿಡಬ್ಲ್ಯುಡಿ ಎಇಇ ಚಿನ್ನಣ್ಣನ್, ಮುಖಂಡ ಮಂಜೇಶ್, ಗೋವಿಂದ, ಚಿನ್ನಸ್ವಾಮಿ, ಲೋಕೇಶ್, ಶ್ರೀನಿವಾಸ್, ಸತ್ಯರಾಜು ಇತರರು ಇದ್ದರು.