ಶಾಂತರಾಜು 
ಚಾಮರಾಜನಗರ

ಸೇವಾಲಾಲ್ ಜಯಂತ್ಸುತ್ಸವ ಯಶಸ್ವಿಗೆ ಕೈ ಜೋಡಿಸಿ

ಹನೂರು: ಪಟ್ಟಣದಲ್ಲಿ ಫೆ.28 ರಂದು ಆಚರಿಸುವ ವಿಭಾಗೀಯ ಮಟ್ಟದ ಸೇವಾಲಾಲ್ ಜಯಂತ್ಯುತ್ಸವದ ಯಶಸ್ವಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಜಿಲ್ಲಾ ಬಂಜಾರ ಸೇವಾ ಸಂಘದ ಗೌರವಾಧ್ಯಕ್ಷ ಶಾಂತರಾಜು ತಿಳಿಸಿದರು.
ಬಂಜಾರ ಸಮುದಾಯವು ರಾಜ್ಯದಲ್ಲಿ ಕಡಿಮೆ ಪ್ರಮಾಣದಲ್ಲಿದ್ದು, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾನದಲ್ಲಿದೆ. ಆದರೆ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದ ಸಮಾಜದಲ್ಲಿ ಹಿಂದುಳಿದಿದ್ದು, ಜನರು ಸಮಸ್ಯೆಗಳ ನಡುವೆಯೇ ಕಷ್ಟದಲ್ಲಿ ಜೀವನ ಸಾಗಿಸಬೇಕಾದ ಸ್ಥಿತಿ ಇದೆ. ಹಾಗಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರ ಮೂಲಕ ಹಕ್ಕುಗಳನ್ನು ಪಡೆಯಲು ಸಲುವಾಗಿ ಇದೇ ಮೊದಲ ಬಾರಿಗೆ ಹನೂರಿನಲ್ಲಿ ವಿಭಾಗೀಯ ಮಟ್ಟದಲ್ಲಿ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಲಾಗುತ್ತಿದ್ದು, 3 ಜಿಲ್ಲೆಗಳ 69 ತಾಂಡಗಳಿಂದ ಸಮುದಾಯದ ಜನತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಟ್ಟಣದ ಆರ್‌ಎಂಸಿ ಆವರಣಲ್ಲಿ ಬೆಳಗ್ಗೆ 9 ಗಂಟೆಗೆ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ವೇದಿಕೆ ಕಾರ್ಯಕ್ರಮವು ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ನೆರವೇರಿಸಲಿದ್ದಾರೆ. ಶಾಸಕ ಎಂ.ಆರ್.ಮಂಜುನಾಥ್ ಅದ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಅವರು ಸೇವಾಲಾಲರ ಭಾವಚಿತ್ರವನ್ನು ಅನಾವರಣ ಮಾಡಲಿದ್ದಾರೆ. ಸಂಸದ ಸುನೀಲ್ ಬೋಸ್ ಅವರು ನಾಯಕರನ್ನು ಸನ್ಮಾನಿಸಲಿದ್ದಾರೆ. ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಅಧಿಕಾರಿಗಳು ಹಾಗೂ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಆದ್ದರಿಂದ ವಿವಿಧ ಸಮುದಾಯದ ಜತೆಗೆ ಇತರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಕುಮಾರನಾಯ್ಕ, ಮುಖಂಡರಾದ ಶಿವಾಜಿನಾಯ್ಕ, ಮುನಿಯನಾಯ್ಕ, ಗೋಪಾಲನಾಯ್ಕ, ಮಹದೇವನಾಯ್ಕ, ಗುರು, ನಾಗೇಶ್ ಹಾಗೂ ಇನ್ನಿತರರು ಇದ್ದರು.