ಚಾಮರಾಜನಗರದಲ್ಲಿ ಉದ್ಘಾಟನೆಯಾಗದ ನೂತನ ಜಿಲ್ಲಾ ಗ್ರಂಥಾಲಯದ ಎದುರು ಉದ್ಯೋಗಾಕಾಂಕ್ಷಿಗಳು ಓದುತ್ತಾ ಕುಳಿತಿರುವುದು.
- ಜಿಲ್ಲಾ ಕೇಂದ್ರ ಗ್ರಂಥಾಲಯ ಉದ್ಘಾಟನೆಗೆ ಪಟ್ಟು
- ಡಿಸಿ ಶ್ರೀರೂಪಾ ಭರವಸೆ ಬಳಿಕ ನಿರ್ಧಾರ ಬದಲು
ಚಾಮರಾಜನಗರ: ಜಿಲ್ಲಾ ಕೇಂದ್ರ ಗ್ರಂಥಾಲಯ ನಿರ್ಮಾಣವಾಗಿ ವರ್ಷವೇ ಕಳೆಯುತ್ತಿದ್ದರೂ ಉದ್ಘಾಟನೆಯಾಗದೆ ಇರುವುದನ್ನು ವಿರೋಧಿಸಿ ಲೈಬ್ರರಿ ಎದುರು ಉದ್ಯೋಗಾಕಾಂಕ್ಷಿಗಳು ಬುಧವಾರ ಕುಳಿತು ಓದಿ ಆಡಳಿತ ವ್ಯವಸ್ಥೆಗೆ ಮುಖಭಂಗ ಮಾಡಿದರು.
ನಗರದ ಬಿಇಒ ಕಚೇರಿ ಮುಂಭಾಗ ಇರುವ ಹಳೆಯ ಲೈಬ್ರರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳು ಪಕ್ಕದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ಓದು ಆರಂಭಿಸಿದರು.
ಸ್ಥಳಕ್ಕೆ ಜಿಲ್ಲಾ ಗ್ರಂಥಾಲಯ ಅಧಿಕಾರಿ ಶಿವಸ್ವಾಮಿ ಆಗಮಿಸಿ ಶೀಘ್ರದಲ್ಲೇ ಗ್ರಂಥಾಲಯ ಉದ್ಘಾಟನೆಯಾಗಲಿದೆ ಎಂದು ಮನವೊಲಿಕೆಗೆ ಪ್ರಯತ್ನಿಸಿದರು. ಈ ವೇಳೆ ಇವರಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ ಉದ್ಯೋಗಾಕಾಂಕ್ಷಿಗಳು, ಇನ್ನೆಷ್ಟು ದಿನಗಳವರೆಗೆ ನೂತನ ಲೈಬ್ರರಿಯನ್ನು ಉದ್ಘಾಟನೆ ಮಾಡದೆ ಕಾಲಹರಣ ಮಾಡುತ್ತೀರಾ, ಹಳೆಯ ಲೈಬ್ರರಿಯಲ್ಲಿರುವ ಶೌಚಗೃಹ ಸ್ವಚ್ಛವಾಗಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಸಕಾಲಕ್ಕೆ ದೊರೆಯುತ್ತಿಲ್ಲ ಎಂದು ದೂರಿದರು.
ಹೊಸ ಲೈಬ್ರರಿಯ ಬಾಗಿಲು ತೆಗೆಯಿರಿ. ಒಳಗೆ ಇನ್ನೂ ಏನು ಕೆಲಸ ಬಾಕಿ ಇದೆ ಎಂದು ನಾವೂ ನೋಡುತ್ತೇವೆ ಎಂದರು. ಪೇಚಿಗೆ ಸಿಲುಕಿದ ಅಧಿಕಾರಿ ಶಿವಸ್ವಾಮಿ ಜಿಲ್ಲಾಧಿಕಾರಿ ಶ್ರೀರೂಪಾ ಅವರ ಕಚೇರಿಗೆ ಕರೆ ಮಾಡಿ ಎಐಡಿವೈಒ ರಾಜ್ಯ ಸಮಿತಿ ಸದಸ್ಯ ಟಿ.ಆರ್.ಸುನೀಲ್ ಅವರೊಂದಿಗೆ ಮಾತನಾಡಿ ಓದಲು ಕುಳಿತಿರುವ ಸ್ಥಳದಿಂದ ತೆರಳಲು ತಿಳಿಸಿದರು. ಇದಕ್ಕೆ ಟಿ.ಆರ್.ಸುನೀಲ್ ಒಪ್ಪದೆ ಉಳಿದವರ ಅಭಿಪ್ರಾಯವೇ ಮುಖ್ಯ. ನಾನೊಬ್ಬನೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಲೈಬ್ರರಿ ಬಾಗಿಲು ತೆರೆಸಲೇಬೇಕು ಎಂದು ಒತ್ತಾಯಿಸಿದರು. ನಂತರ ಡಿಸಿ ಕಚೇರಿಯಲ್ಲಿ ಶ್ರೀರೂಪಾ ಅವರನ್ನು ಟಿ.ಆರ್.ಸುನೀಲ್ ಭೇಟಿ ಮಾಡಿ ಸೋಮವಾರ ನೂತನ ಲೈಬ್ರರಿ ಬಾಗಿಲು ತೆಗೆಸಲಾಗುವುದು ಎಂಬ ಭರವಸೆ ಪಡೆದುಕೊಂಡರು. ನೂತನ ಲೈಬ್ರರಿ ಮುಂದೆ ಕುಳಿತು ಓದುತ್ತಿದ್ದವರು ತೆರಳಿರು. ಈ ವೇಳೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳು ಇದ್ದರು.