ಗುಂಡ್ಲುಪೇಟೆಯಲ್ಲಿ ಡಿಪ್ಲೊಮಾ ಕೋರ್ಸ್‌ಗಳ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ತಹಸೀಲ್ದಾರ್ ಎಂ.ಎಸ್.ತನ್ಮಯ್ ಉದ್ಘಾಟಿಸಿದರು. ಎಸ್.ವಿನಯ ಇತರರು ಇದ್ದರು.  
ಚಾಮರಾಜನಗರ

ಜಿಟಿಟಿಸಿ ತರಬೇತಿಯಿಂದ ಉದ್ಯೋಗಾವಕಾಶ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಎಂ.ಎಸ್.ತನ್ಮಯ್ ವಿಶ್ವಾಸ
  • ಡಿಪ್ಲೊಮಾ ಕೋರ್ಸ್‌ಗಳ ಪ್ರಾರಂಭೋತ್ಸವ
ಗುಂಡ್ಲುಪೇಟೆ: ವಿದ್ಯಾರ್ಥಿಗಳು ಪ್ರಸ್ತುತ ಕಾಲಘಟ್ಟದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಜಿಟಿಟಿಸಿ ತರಬೇತಿ ಸಂಸ್ಥೆಯು ಉತ್ತಮ ಅವಕಾಶ ಕಲ್ಪಿಸುತ್ತಿದೆ ಎಂದು ತಹಸೀಲ್ದಾರ್ ಎಂ.ಎಸ್.ತನ್ಮಯ್ ಹೇಳಿದರು.
ಪಟ್ಟಣದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ಕೋರ್ಸ್‌ಗಳ ಪ್ರಾರಂಭೋತ್ಸವ ಮತ್ತು ಪೋಷಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕೆಗಳಲ್ಲಿ ಅಗತ್ಯವಿರುವ ನುರಿತ ಕಾರ್ಮಿಕರ ಪೂರೈಕೆಯಲ್ಲಿ ಉಪಕರಣಗಾರ ಮತ್ತು ತರಬೇತಿ ಕೇಂದ್ರವು ಪ್ರಮುಖ ಪಾತ್ರ ವಹಿಸುತ್ತಿದೆ. ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಿಗಿಂತ ಉನ್ನತ ಮಟ್ಟದ ಯಂತ್ರೋಪಕರಣ ಮತ್ತು ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಲಭ್ಯವಿರುವ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯದೆ ನೇರವಾಗಿ ಕೈಗಾರಿಕೆಯಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗಿದೆ. ಅಲ್ಲದೆ ವಿದ್ಯಾರ್ಥಿಗಳು ಸ್ವಯಂ ಉದ್ಯೋಗ ಪಡೆಯಲು ಕೇಂದ್ರವು ಪೂರಕವಾಗಿದೆ. ಈ ವಿಷಯವನ್ನು ತಿಳಿದು ವಿದ್ಯಾರ್ಥಿಗಳು ಮತ್ತು ಪೋಷಕರು ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಟಿಟಿಸಿ ತರಬೇತಿ ಕೇಂದ್ರದ ಪ್ರಾಂಶುಪಾಲ ಎಸ್.ವಿನಯ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ 2007ರಲ್ಲಿ ಶಾಸಕರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರು ಗುಂಡ್ಲುಪೇಟೆಯಲ್ಲಿ ಸ್ಥಾಪಿಸಿದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರವು ಕರ್ನಾಟಕ ಸರ್ಕಾರ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಯ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್, ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಡಿಪ್ಲೊಮಾ ಇನ್ ಮೆಕ್ರೋನಿಕ್ಸ್ ತರಬೇತಿ ನೀಡುತ್ತಿದೆ. 3 ವರ್ಷದ ತರಬೇತಿ ಮತ್ತು 1 ವರ್ಷದ ಕಡ್ಡಾಯ ಕೈಗಾರಿಕಾ ತರಬೇತಿಯನ್ನು ಒಳಗೊಂಡಿರುವ ಈ ತರಬೇತಿ ಕೋರ್ಸ್‌ಗಳು ನೂರರಷ್ಟು ಉದ್ಯೋಗ ಅವಕಾಶ ಕಲ್ಪಿಸುತ್ತಿವೆ ಎಂದು ಮಾಹಿತಿ ನೀಡಿದರು.
ಈವರೆಗೆ ಸುಮಾರು 750ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪೂರ್ಣಗೊಳಿಸಿದ್ದು, ರಾಜ್ಯ ದೇಶ ವಿದೇಶಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಇನ್ನು ಕೆಲವರು ಉನ್ನತ ಶಿಕ್ಷಣವನ್ನು ನಡೆಸುತ್ತಿದ್ದಾರೆ. 2026-27ನೇ ಸಾಲಿನ ಪ್ರವೇಶಾತಿಯು ಪ್ರಾರಂಭಗೊಂಡಿದ್ದು, ಎಸ್ಸೆಸ್ಸೆಲ್ಸಿ ಮತ್ತು ಪಿಯು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರು, ತರಬೇತಿ ಅಧಿಕಾರಿಗಳು ಮತ್ತು ಪೋಷಕರು ಹಾಜರಿದ್ದರು.