ಕೊಳ್ಳೇಗಾಲ ಪಟ್ಟಣದ ಕಾರ್ನರ್ ಸ್ಟೋನ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಅಪರ ಸಿವಿಲ್ ನ್ಯಾಯಾಧೀಶ ಎಂ.ರಂಜಿತ್ ಕುಮಾರ್ ಚಾಲನೆ ನೀಡಿದರು. ಬಸವರಾಜು, ರೋಷನ್ ಪ್ರಿನ್ಸ್ ಇದ್ದರು.
ಕೊಳ್ಳೇಗಾಲ: ಯುವಕರು ಕಾನೂನು ಅರಿವು ಪಡೆಯಬೇಕು ಎಂದು ಅಪರ ಸಿವಿಲ್ ನ್ಯಾಯಾಧೀಶ ಎಂ.ರಂಜಿತ್ ಕುಮಾರ್ ಹೇಳಿದರು.
ಪಟ್ಟಣದ ಕಾರ್ನರ್ ಸ್ಟೋನ್ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಕೊಳ್ಳೇಗಾಲ ತಾಲೂಕು ವಕೀಲರ ಸಂಘದಿಂದ ಆಯೋಜಿಸಿದ್ದ ಪೋಕ್ಸೋ, ಬಾಲ್ಯ ವಿವಾಹ, ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಕಾನೂನು ಪಾಲಿಸಬೇಕು. ಯಾವುದೇ ವ್ಯಾಮೋಹಕ್ಕೆ ಒಳಗಾಗಿ ಕಾನೂನು ವಿರುದ್ಧವಾಗಿ ನಡೆಯಬಾರದು. ಕಾನೂನುಬಾಹಿರ ಚಟುವಟಿಕೆಗೆಳಲ್ಲಿ ಭಾಗವಹಿಸದೆ ಎಚ್ಚರಿಕೆಯಿಂದ ಇರಬೇಕು ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಎನ್.ಬಸವರಾಜು, ಬಾಲ್ಯ ವಿವಾಹದಿಂದ ಆಗಬಹುದಾದ ಪರಿಣಾಮಗಳು, ಬಾಲ್ಯ ವಿವಾಹ ಕಾಯ್ದೆ ಕುರಿತಿ ಮಾಹಿತಿ ನೀಡಿದರು.
ಹಿರಿಯ ವಕೀಲ ನಾಗರಾಜು ಮಾತನಾಡಿ, ಇಂದಿನ ಯುವಪೀಳಿಗೆ ಮಾದಕ ವಸ್ತುಗಳಿಗೆ ಬಲಿಯಾಗಿ ಅನುಭವಿಸುತ್ತಿರುವ ಪ್ರಸಂಗಗಳನ್ನು ವಿವರಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಡಿ.ಕೆಂಪಯ್ಯ, ಕಾಲೇಜಿನ ಪ್ರಾಂಶುಪಾಲ ಡಾ.ರೋಷನ್ ಪ್ರಿನ್ಸ್, ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಿಚಾರಕಿ ಶಿವಲೀಲಾ, ಮಹಿಳಾ ಸಹಾಯವಾಣಿಯ ಪೊಲೀಸ್ ಸಿಬ್ಬಂದಿ, ಉಪನ್ಯಾಸಕರು ಇದ್ದರು.