ಚಾಮರಾಜನಗರದ ಜೆಎಸ್‌ಎಸ್ ಆಸ್ಪತ್ರೆ ರಸ್ತೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಭೇಟಿ ಮಾಡಿ ಮಾತನಾಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ರೈತ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮತ್ತು ಇತರರು ಇದ್ದರು.
- ವಿಪಕ್ಷ ನಾಯಕ ಆರ್.ಆಶೋಕ್ ಟೀಕೆ
- ರಾಜ್ಯ ಸರ್ಕಾರದ ನಿರ್ಧಾರವನ್ನು ರದ್ದು ಮಾಡಬೇಕೆಂದು ಆಗ್ರಹ
ಚಾಮರಾಜನಗರ: ರಾಜ್ಯ ಸರ್ಕಾರ ವಾಸ ಪ್ರಮಾಣ ಪತ್ರವಿಲ್ಲದವರಿಗೆ ಪ್ರಮಾಣ ಪತ್ರ ನೀಡಿದರೆ ಎಸ್‌ಐಆರ್ ನಡೆಸಿ ಬಾಂಗ್ಲಾ ವಲಸಿಗರನ್ನು ಅವರ ದೇಶಕ್ಕೆ ಕಳುಹಿಸುವುದು ಹೇಗೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದರು.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗಾಗಿ ವಾಸ ಪ್ರಮಾಣ ಪತ್ರವಿಲ್ಲದವರಿಗೆ ಪ್ರಮಾಣ ಪತ್ರ ವಿತರಣೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವು ಮತ ಬ್ಯಾಂಕ್ ಉಳಿಸಿಕೊಳ್ಳುವ ಕುತಂತ್ರವಾಗಿದೆ ಎಂದು ಸೋಮವಾರ ಸುದ್ದಿಗೋಷ್ಟಿಯಲ್ಲಿ ದೂರಿದರು. ಈ ದೇಶದ ಪ್ರಜೆ ಯಾರು ಎಂದು ಗುರುತಿಸುವುದು ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಸಂವಿಧಾನದತ್ತವಾಗಿ ಬಂದಿಯೇ ಹೊರತು ರಾಜ್ಯ ಸರ್ಕಾರಗಳಿಗಿಲ್ಲ. ಬಾಂಗ್ಲಾದವರು ದೇಶದಲ್ಲಿ ನುಸುಳುವಾಗ ಕೇಂದ್ರ ಸರ್ಕಾರ ಏನು ಮಾಡುತ್ತಿತ್ತು ಎಂದು ಕಾಂಗ್ರೆಸ್‌ನವರು ಪ್ರಶ್ನಿಸುತ್ತಾರಲ್ಲ, ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಕ್ಸಲಿಸಂ ಶುರುವಾಯಿತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಕ್ಸಲ್ ಮುಕ್ತ ಭಾರತವಾಯಿತು. ಈಗ ಎಸ್‌ಐಆರ್‌ಗೆ ಕೌಂಟರ್ ಕೊಡಲು ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತಿದೆ. ದೇಶದ್ರೋಹಿಗಳು ಮತಹಾಕುವುದನ್ನು ತಡೆಯಲು ಎಸ್‌ಐಆರ್ ನಡೆಯುತ್ತಿದೆ. ಪಿಎ್ಐನಂತ ಸಂಘಟನೆಗಳ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆದುಕೊಂಡು ಮತ ಬ್ಯಾಂಕ್ ಮಾಡುತ್ತಿರುವ ಕಾಂಗ್ರೆಸ್ ಎಸ್‌ಆರ್ ವಿಚಾರದಲ್ಲೂ ಇದನ್ನೇ ಮಾಡುತ್ತಿದೆ ಎಂದು ಟೀಕಿಸಿದರು.
ಹಳೇ ಮೈಸೂರು ಭಾಗದಲ್ಲಿ ಬರದ ಛಾಯೆ ಮೂಡಿದೆ. ಇದರತ್ತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಮನಹರಿಸಿ ಸಭೆ ನಡೆಸಿ ಬರ ೋಷಣೆ ಮಾಡಿಲ್ಲ. ಸಮೀಕ್ಷೆ ಮಾಡದೆ ಸುಖಾಸುಮ್ಮನೆ ಕೇಂದ್ರ ಸರ್ಕಾರಕ್ಕೆ 10 ಸಾವಿರ ಕೋಟಿ ರೂ.ಕೊಡಬೇಕು ಎನ್ನುತ್ತಿದ್ದಾರೆ. ಎಸ್‌ಡಿಆರ್‌ಎ್ಗೆ 4 ತಿಂಗಳಿಗೆ 1 ಸಲ ಕೇಂದ್ರ ಸರ್ಕಾರ ಹಣ ಕೊಡುತ್ತದೆ. ಈ ಹಣವನ್ನು ರಾಜ್ಯ ಸರ್ಕಾರ ಏನು ಮಾಡುತ್ತಿದೆ ಎಂದು ಲೆಕ್ಕ ಕೊಡಲಿ. ಇದನ್ನು ಬಿಟ್ಟು ಬರದ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುವುದನ್ನು ಬಿಡಲಿ ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾನು ಹಿಂದೂ ಎಂದು ಒತ್ತಿ ಒತ್ತಿ ಹೇಳುತ್ತಾ, ದೇವಸ್ಥಾನಗಳ ಭೇಟಿ, ಸ್ವಾಮೀಜಿಗಳ ಕಾಲಿಗೆ ಬೀಳುತ್ತಿದ್ದಾರೆ. ಇದನ್ನು ಬಿಟ್ಟು ರೈತರ ಕಷ್ಟವನ್ನು ಕೇಳಲು ಬರಬೇಕು. ರೈತರಿಗೆ ಬೆಳೆಗೆ ಬೆಳೆಯಲು ನೀರಿಲ್ಲ. ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ರೈತರಿಗೆ ಬೆಳೆ ಬೆಳೆಯಬೇಡಿ ಎನ್ನುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 30 ಲಕ್ಷ ಪಡಿತರ ಕಾರ್ಡ್, 20 ಲಕ್ಷ ಜನರ ಪಿಂಚಣಿಗೆ ಕತ್ತರಿ ಬಿದ್ದಿದೆ. 7 ತಿಂಗಳಿನಿಂದ ಮೈಸೂರು ದಸರಾ ಪೈಲ್ವಾನ್‌ಗಳ ಗೌರವಧನ ಬಂದಿಲ್ಲ. ಗೃಹಲಕ್ಷ್ಮಿಯ ಹಣ ಸುಮಾರು 5 ಸಾವಿರ ಕೋಟಿ ರೂ. ಬಾಕಿ ಉಳಿದಿದೆ. ಗೃಹಜ್ಯೋತಿ ಸಮೀಕ್ಷೆ ಮಾಡುತ್ತಿದ್ದಾರೆ. ಯುವ ನಿಧಿ ಯಾರಿಗೂ ಸಿಗುತ್ತಿಲ್ಲ. ಜಿಎಸ್‌ಟಿ, ತೆರಿಗೆ ಕಟ್ಟಿಲ್ಲವೆಂದು ಯೋಜನೆಯಿಂದ ಕೈಬಿಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುತ್ತಿದೆ. ಕಾಂಗ್ರೆಸ್ ಪಾರ್ಟಿ ದೋಖಾ ಪಾರ್ಟಿಯಾಗಿದೆ ಎಂದರು.
ಅಧಿಕಾರವನ್ನು 3 ವರ್ಷ ಸಿದ್ದರಾಮಯ್ಯ, 2 ವರ್ಷ ಡಿ.ಕೆ.ಶಿವಕುಮಾರ್ ಟೆಂಡರ್ ತೆಗೆದುಕೊಂಡಿದ್ದಾರೆ. ಮಂತ್ರಿಮಂಡಲ ರಚನೆಯಾಗಿಲ್ಲ. ತೀರ್ಮಾನ ಕೈಗೊಳ್ಳುವ ರಾಹುಲ್ ಗಾಂಧಿ ಕಾಣೆಯಾಗಿದ್ದಾರಂತೆ. ವ್ಯಕ್ತಿಯ ದೇಹದ ತೂಕದ ಆಧಾರದ ಮೇಲ ಮಂತ್ರಿಗಿರಿ ಪಡೆಯಲು ಹಣ ನಿಗದಿ ಮಾಡಲಾಗುತ್ತಿದೆ. ಕೇಂದ್ರ ಕಾಂಗ್ರೆಸ್‌ಗೆ ರಾಜ್ಯ ಸರ್ಕಾರ ಒಂದೇ ಎಟಿಎಂ ಆಗಿದೆ. ಅನಾಥ ಮಕ್ಕಳು, ಭಿಕ್ಷುಕರಿಗೆ ಕೊಡಲು ಹಣವಿಲ್ಲ. ಕರ್ನಾಟಕವನ್ನು ಕಾಂಗ್ರೆಸ್ ದಿವಾಳಿ ಮಾಡಿದೆ. ಮುಂದಿನ ಬಜೆಟ್‌ನಲ್ಲಿ 1 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಸಾಲ ಮಾಡಬೇಕಾಗುತ್ತದೆ ಎಂದು ಹೇಳಿದರು
ಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್, ಕಾರ್ಯದರ್ಶಿ ಡಾ.ಲಕ್ಷ್ಮೀ ಅಶ್ವಿನ್‌ಗೌಡ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್, ಮಾಜಿ ಅಧ್ಯಕ್ಷ ನಾರಾಯಣ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ವಕ್ತಾರ ಮನೋಜ್ ಪಟೇಲ್ ಇದ್ದರು.