ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಭಕ್ತರು
- ಮಹದೇಶ್ವರ ಬೆಟ್ಟದಲ್ಲಿ ಭಕ್ತನ ಮೇಲೆ ದಾಳಿ
- ಸಾರ್ವಜನಿಕರಲ್ಲಿ ಮೂಡಿರುವ ಅನುಮಾನ
- ಆರೋಪ ತಳ್ಳಿ ಹಾಕಿದ ಅರಣ್ಯ ಇಲಾಖೆ
ಹನೂರು: ಮಾದಪ್ಪನ ಭಕ್ತನ ಮೇಲೆ ದಾಳಿ ಮಾಡಿದ ಚಿರತೆ ಎಲ್ಲೋ ಉಪಟಳ ನೀಡುತ್ತಿದ್ದತ್ತು. ಅದನ್ನು ಸೆರೆ ಹಿಡಿದು ಮಲೆ ಮಹದೇಶ್ವರ ಬೆಟ್ಟಕ್ಕೆ ತಂದು ಬಿಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿರುವ ಬೆನ್ನನ್ನಲೇ ಇದನ್ನು ಅರಣ್ಯ ಇಲಾಖೆ ಸಾರಸಗಟಾಗಿ ತಳ್ಳಿಹಾಕಿದೆ.
ತಾಲೂಕಿನ ಮಲೆಮಹದೇಶ್ವರ ಬೆಟ್ಟ-ತಾಳುಬೆಟ್ಟ ಮಾರ್ಗದ ರಂಗಸ್ವಾಮಿ ಒಡ್ಡುವಿನ ಬಳಿ ಚಿರತೆ ದಾಳಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತ ಬಲಿಯಾಗಿರುವ ಘಟನೆ ಇದೇ ಮೊದಲನೆದಾಗಿದ್ದು, ಭಕ್ತ ವಲಯವನ್ನು ಬೆಚ್ಚಿ ಬೀಳಿಸಿದೆ. ಈ ಭಾಗದಲ್ಲಿ ಚಿರತೆ, ಹುಲಿಗಳಿದ್ದರೂ ಜನ ಸಂಚಾರದ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವುದು ತುಂಬಾ ವಿರಳ. ಇಂತದ್ದರಲ್ಲಿ ಮನುಷ್ಯನ ಮೇಲೆ ಚಿರತೆ ದಾಳಿ ಮಾಡಿದೆ ಎಂದರೆ ಇದು ಬೇರೆ ಎಲ್ಲೋ ಉಪಟಳ ನೀಡುತ್ತಿದ್ದ ವನ್ಯಮೃಗವಿರಬೇಕು. ಅಲ್ಲಿ ಸೆರೆ ಹಿಡಿದು ಬಳಿಕ ಇಲ್ಲಿನ ಕಾಡಿಗೆ ತಂದು ಬಿಟ್ಟಿರಬೇಕೆಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ.
ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಬೇಕು ಎಂಬುದು ಸರ್ಕಾರದ ಉದ್ಧೇಶವಾಗಿದೆ. ಆದರೆ ಜನಪ್ರತಿನಿಧಿಗಳು, ಭಕ್ತರು, ಅರಣ್ಯ ಪ್ರದೇಶದೊಳಗೆ ವಾಸಿಸುವ ಜನರು ಹಾಗೂ ಸ್ಥಳೀಯರಿಂದ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳು ಸಹ ನಡೆದಿದೆ. ಹಾಗಾಗಿ ಹುಲಿ ಯೋಜನೆ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದೆ. ಈಗೀರುವಾಗ ಹುಲಿ ಯೋಜನೆಗೆ ಘೋಷಿಸುವುದಕ್ಕೆ ಪೂರಕವಾದ ವಾತವರಣವನ್ನು ನಿರ್ಮಿಸುವ ಸಲುವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮ.ಬೆಟ್ಟ ವನ್ಯಜೀವಿ ಧಾಮದ ಅರಣ್ಯ ಪ್ರದೇಶಕ್ಕೆ ಇತರೆಡೆಯಿದ ಚಿರತೆ, ಹುಲಿ ಹಾಗೂ ಆನೆಗಳನ್ನು ತಂದು ಬಿಡಲಾಗುತ್ತಿದೆ. ಇದರಿಂದಾಗಿಯೇ ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಕಾಡು ಪ್ರಾಣ ಗಳ ಹಾವಳಿ ಹೆಚ್ಚಾಗಿದೆ ಎಂಬುದಾಗಿ ಸಾರ್ವಜನಿಕರು ಹಾಗೂ ಭಕ್ತರು ಗಂಭಿರವಾಗಿ ಆರೋಪಿದ್ದಾರೆ. ಈ ಅಮಾನವಕ್ಕೆ ಸ್ಪಷ್ಟನೆ ನೀಡಿರುವ ಅರಣ್ಯ ಇಲಾಖೆ ಅಜ್ಜೀಪುರ, ಪೊನ್ನಾಚಿ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿವೆ. ಅದೇ ರೀತಿಯಲ್ಲಿ ದಾಳಿ ನಡೆಸಿರುವ ಚಿರತೆಯೂ ಇದೇ ಭಾಗದ್ದು ಎಂದು ತಿಳಿಸಿದೆ.
ಕಾಣಸಿಕೊಳ್ಳುತ್ತಲೇ ಇದ್ದ ಚಿರತೆ:
ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಕಳೆದ ಎರಡು ತಿಂಗಳಿನಿಂದ ಹಲವು ಬಾರಿ ಚಿರತೆ ಕಾಣಿಸಿಕೊಳ್ಳುತ್ತಲೇ ಇತ್ತು. ಚಿರತೆ ದಾಳಿಗೆ ಭಕ್ತ ಬಲಿಯಾಗಿರುವ ಸ್ಥಳವಾಗಿರುವ ರಂಗಸ್ವಾಮಿ ಒಡ್ಡುವಿನ ಬಳಿ ಜ.11 ರಂದು ರಾತ್ರಿ ವೇಳೆ 2 ಚಿರತೆ ಮರಿಗಳು ತಡೆಗೋಡೆಯ ಮೇಲೆ ಕಾಣಸಿಕೊಂಡಿದ್ದು, ತೆರಳುತ್ತಿದ್ದ ಭಕ್ತರು ಭಯಬೀತರಾಗಿದ್ದರು. ಅಲ್ಲದೇ ಇದೇ ಸ್ಥಳದಲ್ಲಿ ಜ.15 ರಂದು ಚಿರತೆ ತಡೆಗೋಡೆಯ ಮೇಲೆ ಕಾಣಸಿಕೊಂಡಿದ್ದು, ಇದರ ದೃಶ್ಯವನ್ನು ಭಕ್ತರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದರು. ಕಾಲ್ನಡಿಗೆ ಭಕ್ತರು ಹಾಗೂ ಬೈಕ್ ಸವಾರರು ಎಚ್ಚರಿಕೆಯಿಂದ ತೆರಳುವಂತೆ ಸಲಹೆ ನೀಡಿದ್ದರು. ಜತೆಗೆ ಭಕ್ತರು ಹಾಗೂ ಸಾರ್ವಜನಿಕರು ಮುಂಬರುವ ಶಿವರಾತ್ರಿ ಜಾತ್ರೆಗೆ ಲಕ್ಷಾಂತರ ಭಕ್ತರು ಈ ಮಾರ್ಗದಲ್ಲಿ ಕಾಲ್ನಡಿಗೆಯ ಮೂಲಕ ತೆರಳಿದ್ದಾರೆ. ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಚಿರತೆ ರಸ್ತೆ ಬದಿಯಲ್ಲಿ ಕಾಣ ಸಿಕೊಳ್ಳದಂತೆ ಅಗತ್ಯ ಕ್ರಮವಹಿಸುವಂತೆ ಒತ್ತಾಯಿಸಿದ್ದರು. ಆದರೆ ಯಾವುದೇ ಕ್ರಮಕೈಗೊಳ್ಳದ ಪರಿಣಾಮ ಚಿರತೆ ಆಗ್ಗಾಗ್ಗೆ ಕಾಣ ಸಿಕೊಳ್ಳುತ್ತಿದ್ದ ರಂಗಸ್ವಾಮಿ ಒಡ್ಡುವಿನ ಬಳಿಯೇ ಮಾದಪ್ಪನ ಭಕ್ತ ಚಿರತೆ ದಾಳಿಗೆ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು. ಈ ಬಗ್ಗೆ ಭಕ್ತರಲ್ಲಿ ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಆಕ್ರೋಶವನ್ನು ಉಂಟು ಮಾಡಿದೆ.
ಕಳೆದ 2 ವರ್ಷದ ಹಿಂದೆ ತಾಳುಬೆಟ್ಟ ಮಾರ್ಗದ ಶನೈಚ್ಛರ ದೇಗುಲದ ಬಳಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೃದ್ಧಯೊಬ್ಬರೂ ಕಾಡಾನೆ ದಾಳಿಗೆ ಬಲಿಯಾದರು.ಇದಕ್ಕೂ ಹಿಂದಿನ ವರ್ಷದಲ್ಲಿ ನಾಗಮಲೆಗೆ ಪಾದಯಾತ್ರೆ ಹೋಗುತ್ತಿದ್ದ ಭಕ್ತ ಆನೆ ದಾಳಿಯಿಂದ ಮೃತಪಟ್ಟರು.
ಪವಾಡ ಪುರುಷ ಶ್ರೀ ಮಲೆಮಹದೇಶ್ವರರು ನೆಲೆಸಿರುವ ಮ.ಬೆಟ್ಟ ಧಾರ್ಮಿಕ ಪುಣ್ಯ ಸ್ಥಳ. ಇಲ್ಲಿಗೆ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಹಾಗೂ ಇನ್ನಿತರೆ ಜಿಲ್ಲೆಗಳಿಂದ ಅನಾದಿ ಕಾಲದಿಂದಲೂ ಮಹಾ ಶಿವರಾತ್ರಿ, ಯುಗಾದಿ ಹಾಗೂ ದೀಪಾವಳಿ ಜಾತ್ರಾ ವೇಳೆ ಲಕ್ಷಾಂತರ ಭಕ್ತರು ಕಾಲ್ನಡಿಗೆಯ ಮೂಲಕ ಕಾಲ್ನಡಿಗೆಯ ಮೂಲಕ ಆಗಮಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇನ್ನು ಪ್ರತಿ ವರ್ಷ ಮಹಾ ಶಿವರಾತ್ರಿ ವೇಳೆ ರಾಮನಗರ, ಬೆಂಗಳೂರು, ಕನಕಪುರ, ಚನ್ನಪಟ್ಟಣ, ಬಿಡದಿ, ದೊಡ್ಡ ಬಳ್ಳಾಪುರ ಹಾಗೂ ಈ ಭಾಗದ ಇನ್ನಿತರೆ ಗ್ರಾಮದ ಲಕ್ಷಾಂತರ ಭಕ್ತರು ತಾಲೂಕಿನ ಶಾಗ್ಯ ಸಮೀಪದ ಕಾವೇದಿ ನದಿಯನ್ನು ದಾಟಿ ಅರಣ್ಯ ಪ್ರದೇಶದ ಮೂಲಕ ಡಿ.ಎಂ ಸಮುದ್ರ, ಎಲ್ಲೇಮಾಳದ ಮಾರ್ಗವಾಗಿ ಮ.ಬೆಟ್ಟಕ್ಕೆ ಬರುತ್ತಾರೆ.
ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಚಿರತೆಗಳಿವೆ. ಭಕ್ತನ ಮೇಲೆ ದಾಳಿ ಮಾಡಿದ ಚಿರತೆಯನ್ನು ಎಲ್ಲೋ ಸೆರೆ ಹಿಡಿದು ಇಲ್ಲಿಗೆ ತಂದು ಬಿಟ್ಟಿಲ್ಲ. ಈ ಚಿರತೆ ಇದೇ ಪ್ರದೇಶದಲ್ಲಿ ಇತ್ತು. ಸೆರೆಗೆ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.
ಭಾಸ್ಕರ್, ಡಿಸಿಎ್ ಮಲೆ ಮಹದೇಶ್ವರ ವನ್ಯಜೀವಿಧಾಮ
ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತಾರಣ್ಯ ಪ್ರದೇಶವಾಗಿ ೋಷಣೆ ಮಾಡಿಸಲು ಅನುಕೂಲವಾಗಲೆಂದು ಅರಣ್ಯ ಇಲಾಖೆ ಉದ್ದೇಶ ಪೂರ್ವಕವಾಗಿ ಅಲ್ಲಿಂದಲೋ ವನ್ಯಮೃಗಗಳನ್ನು ತಂದು ಬಿಡುತ್ತಿದೆ ಎಂಬ ಅನುಮಾನವಿದೆ.
ಹೊನ್ನೂರು ಪ್ರಕಾಶ್, ರೈತ ಸಂಘದ ನಾಯಕ