ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಶ್ರೀರೂಪಾ ಅವರ ಅಧ್ಯಕ್ಷತೆಯಲ್ಲಿ ದೂರುಗಳ ವಿಚಾರಣೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶೃತಿ ಮತ್ತು ಇತರರು ಇದ್ದರು. 
ಚಾಮರಾಜನಗರ

ಸದಾ ಕೇಳಿರುವ ದೂರುಗಳ ವಿಚಾರಣೆ

ಪ್ರಮುಖ ಮುಖ್ಯಾಂಶಗಳು

  • ದೂರಿಗೆ ಸಂಬಂಧಿಸಿದವರೊಂದಿಗೆ ಮಾತುಕತೆ ನಡೆಸಿದ ಡಿಸಿ ಶ್ರೀರೂಪಾ
  • ದೂರುಗಳ ಬಗ್ಗೆ ಜಿಲ್ಲಾಧಿಕಾರಿ ಶ್ರೀರೂಪಾ ವಿಚಾರಣೆ
ಚಾಮರಾಜನಗರ: ಜಿಲ್ಲಾಡಳಿತ ಭವನದ ಕಾರ್ಯಾಲಯಕ್ಕೆ ಪದೇ ಪದೇ ಕೇಳಿ ಬರುವ ದೂರುಗಳ ಬಗ್ಗೆ ಜಿಲ್ಲಾಧಿಕಾರಿ ಶ್ರೀರೂಪಾ ಮಂಗಳವಾರ ವಿಚಾರಣೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಗೆ ಡಿಸಿ ಕಾರ್ಯಾಲಯಕ್ಕೆ ನಿರಂತರವಾಗಿ ದೂರು ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ ಈ ಸಂಬಂದ ಚರ್ಚಿಸಲು ಸಂಬಂಧಪಟ್ಟವರು ಮತ್ತು ಅಧಿಕಾರಿಗಳನ್ನು ಕರೆಯಲಾಗಿತ್ತು. ಗುಂಡ್ಲುಪೇಟೆಯ ಹಿರಿಕಾಟಿ ಗ್ರಾಮದ ಸರ್ವೆ ನಂ.209ರ ಜಮೀನಿನ ಮಾಲೀಕರಿಗೆ ವ್ಯವಸಾಯ ಉದ್ದೇಶಕ್ಕೆದಾರಿ ಬಿಡದೆ ತೊಂದರೆ ನೀಡುತ್ತಿರುವುದು, ಚಾಮರಾಜನಗರ ತಾಲೂಕಿನ ಯರಗನಹಳ್ಳಿ ಗ್ರಾಮದ ಸರ್ವೆ ನಂ.254, 255, 253 ಇತರೆ ಜಮೀನುಗಳನ್ನು ಅಕ್ರಮವಾಗಿ ಖಾತೆ ಮಾಡಿರುವುದು, ವಡ್ಗಲ್‌ಪುರ ಗ್ರಾಮದ ಸರ್ವೆ ನಂ.32ರಲ್ಲಿ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಗಣಿಗಾರಿಕೆ ನಡೆಸುತ್ತಿರುವುದು, ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಜನರಿಗೆ ಕಳಪೆ ಆಹಾರ ಪೂರೈಕೆ ಮಾಡುತ್ತಿರುವ ಸಂಬಂಧ ದೂರು ಸಲ್ಲಿಸುವುದು, ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಗೆ ಕಳಪೆ ಬೇಳೆ ಪೂರೈಸುತ್ತಿರುವುದು ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿರುವುದು, 2016-17ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಚಾಮರಾಜನಗರ ಪಟ್ಟಣದ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ೋಷಿಸಿರುವ ಅನುದಾನದಡಿಯಲ್ಲಿನ ಕಾಮಗಾರಿಗಳನ್ನು ಅವ್ಯವಹಾರ ನಡೆಸಿರುವ ದೂರುಗಳು ಕಾರ್ಯಾಲಯಕ್ಕೆ ಬಂದಿದ್ದವು. ಈ ವಿಷಯ ಸೂಚಿಯನ್ನು ಇಟ್ಟುಕೊಂಡು ಡಿಸಿ ಶ್ರೀರೂಪಾ ದೂರುದಾರರನ್ನು ಕರೆಸಿ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ ನಡೆಸಿದರು.
ಸಭೆಯಲ್ಲಿ ಗುಂಡ್ಲುಪೇಟೆಯಲ್ಲಿ ಜೀತಮುಕ್ತರಿಗೆ ಪರಿಹಾರ ನೀಡಿಲ್ಲವೆಂಬ ದೂರು ಕೇಳಿಬಂತು. ಜೀತಮುಕ್ತರ ಮಕ್ಕಳಿಗೆ ಶಿಕ್ಷಣ ನೀಡಬೇಕು. ವಿವಿಧ ನಿಗಮಗಳಲ್ಲಿ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು. ಗುಂಡ್ಲುಪೇಟೆಯ ಕ್ರಷರ್‌ಗಳಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಕಾರ್ಮಿಕ ಇಲಾಖೆಯಿಂದ ಸರ್ವೆ ಮಾಡಬೇಕು. ವಲಸೆ ಕಾರ್ಮಿಕರ ಪ್ರಾಣಕ್ಕೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಮುಖಂಡರು ಕೋರಿದರು.
ಈ ಕುರಿತು ಡಿಸಿ ಶ್ರೀರೂಪಾ ಗುಂಡ್ಲುಪೇಟೆ ತಹಸೀಲ್ದಾರ್ ಅವರಿಂದ ಜೀತಮುಕ್ತರ ಅಂಕಿ-ಅಂಶಗಳ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿದ ಅವರು, ಜೀತಮುಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ವಲಸೆ ಕಾರ್ಮಿಕರ ಜಂಟಿ ಸರ್ವೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.
ಪ್ರಗತಿ ಪರ ಸಂಘಟನೆಗಳ ಮುಖಂಡ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ನಗರದ ಕೋರ್ಟ್ ರಸ್ತೆಯು 2016-17ನೇ ಸಾಲಿನಲ್ಲಿ ಮುಖ್ಯಮಂತ್ರಿಗಳು ಚಾಮರಾಜನಗರದ ಪಟ್ಟಣದ ಅಭಿವೃದ್ಧಿಗೆ 49 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು. ಈ ಅನುದಾನದಲ್ಲಿ ಡಿವೈಎಸ್ಪಿ ಕಚೇರಿಯಿಂದ ಕೋರ್ಟ್ ಮಾರ್ಗವಾಗಿ ಸತ್ತಿ ರಸ್ತೆಗೆ ಸೇರುವ ಕಾಮಗಾರಿಯೂ ಒಂದು. ಇದರ ಡಿಪಿಆರ್‌ನಲ್ಲಿ 8 ಕೋಟಿ ರೂ.ಗಳಲ್ಲಿ ಕೆಲಸವಾಗಿದೆ. ಆದರೆ ಇದು 60 ಅಡಿ ರಸ್ತೆಯಾಗಬೇಕಿತ್ತು. ಎರಡೂ ಕಡೆ ಚರಂಡಿ ನಿರ್ಮಾಣ ಮಾಡಿ ಡಕ್ ನಿರ್ಮಾಣ ಮಾಡಬೇಕಿತ್ತು. ಇದ್ಯಾವ ಕೆಲಸವೂ ಆಗಿಲ್ಲ. ಕೋರ್ಟ್‌ವರೆಗೂ ಕಾಮಗಾರಿ ಮಾಡಿ ನಿಲ್ಲಿಸಲಾಗಿದೆ. ಬಳಿಕ ಜಿಲ್ಲಾ ನ್ಯಾಯಾಧೀಶರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಲೆ ಕೋರ್ಟ್ ಬಳಿ ಕಾಮಗಾರಿ ಮಾಡಿದರು. ಮತ್ತೆ ಕರಿನಂಜನಪುರದ ಸೇತುವೆಯಿಂದ ಸತ್ತಿ ರಸ್ತೆವರೆಗೆ ಹಣ ಹಾಕಿ ಈಗ 40 ಅಡಿ ರಸ್ತೆಯಾಗಿದೆ ಎಂದರು.
ಈ ಕುರಿತು ಎರಡುವರೆ ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೆ. ಆದರೆ ಇದರ ಬಗ್ಗೆ ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಇಂಜಿನಿಯರ್ ವರದಿ ನೀಡಲು ಸೂಚನೆ ನೀಡಿದ್ದರೂ ವರದಿ ಸಲ್ಲಿಕೆಯಾಗಿಲ್ಲ. ಈ ರೀತಿ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ಈ ಕುರಿತು ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿ, ಒಂದು ತಿಂಗಳ ಒಳಗೆ ವರದಿ ನೀಡಲು ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಇಂಜಿನಿಯರ್‌ಗೆ ಸೂಚನೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶೃತಿ ಮತ್ತು ಚಾಮರಾಜನಗರ, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ತಾಲೂಕು ತಹಸೀಲ್ದಾರ್‌ಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಲಿಖಿತ ಉತ್ತರ ನೀಡಲು ಸೂಚನೆ:
ಪರಶಿಷ್ಟ ಪಂಗಡದವರಿಗೆ ಕಳಪೆ ಆಹಾರ ಪೂರೈಕೆ ಮಾಡುತ್ತಿರುವ ಪೌಷ್ಠಿಕ ಆಹಾರ ಮತ್ತು ಬಿಸಿಯೂಟದಲ್ಲಿ ಕಳಪೆ ಬೇಳೆ ನೀಡಿರುವ ಕುರಿತ ಸಿ.ಎಂ.ಕೃಷ್ಣಮೂರ್ತಿ ಅವರು ನೀಡಿದ್ದ ದೂರಿಗೆ ಸಂಬಂಧ ಪಟ್ಟಂತೆ ಅಧಿಕಾರಿಗಳು ಲಿಖಿತ ಪ್ರತಿಕ್ರಿಯೆ ನೀಡಬೇಕೆಂದು ಡಿಸಿ ಶ್ರೀರೂಪಾ ನಿರ್ದೇಶನ ನೀಡಿದರು.
ಸಮುದಾಯ ಭವನ ನಿರ್ಮಿಸಿಕೊಡಲು ಮನವಿ:
ಹನೂರು ತಾಲೂಕಿನ ಪಳನಿಮೇಡಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿಕೊಡಬೇಕೆಂದು ಪರಿಶಿಷ್ಟ ಜನಾಂಗದವರು ಮನವಿ ಮಾಡಿದರು. ಗ್ರಾಮದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು, ನಮಗೆ ಅಂಬೇಡ್ಕರ್ ಭವನ ಇಲ್ಲದಿರುವುದರಿಂದ ಭೂಮಿಯನ್ನು ಕೊಡಿಸಬೇಕೆಂದು ಕೋರಿ ಡಿಸಿ ಶ್ರೀರೂಪಾ ಅವರಿಗೆ ಮನವಿ ಸಲ್ಲಿಸಿದರು.