ಕೊಳ್ಳೇಗಾಲಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಬೌದ್ಧ ಸಮೇಳನ ಆಚರಣೆ ಪೂರ್ವಭಾವಿ ಸಭೆಗೆ ಗಣ್ಯರು ಬುದ್ಧ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಎ.ಆರ್.ಕೃಷ್ಣಮೂರ್ತಿ, ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು ಇತರರು ಇದ್ದರು.  
ಚಾಮರಾಜನಗರ

24, 25ರಂದು ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎ.ಆರ್.ಕೃಷ್ಣ ಮೂರ್ತಿ ಮಾಹಿತಿ
  • ಪೂರ್ವಭಾವಿ ಸಭೆ, 56 ದೇಶಗಳಲ್ಲಿ ನೇರ ಪ್ರಸಾರ
ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅ.24 ಮತ್ತು 25ರಂದು ಆಯೋಜಿಸಿರುವ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ 56 ದೇಶಗಳಲ್ಲಿ ನೇರ ಪ್ರಸಾರವಾಗಲಿದ್ದು, ಈ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಗೊಳಿಸಲು ನಾವೆಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸಬೇಕು ಎಂದು ಬೌದ್ಧ ಸಮ್ಮೇಳನದ ಅಚರಣಾ ಸಮಿತಿ ಅಧ್ಯಕ್ಷ, ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಮ್ಮೇಳನ ಅಗತ್ಯ ತಯಾರಿ ಭರದಿಂದ ಸಾಗುತ್ತಿದೆ. ಸಮ್ಮೇಳನದ ಪ್ರಚಾರಕ್ಕೆ 4 ರಥಗಳು ಸಿದ್ಧಗೊಂಡಿದ್ದು, ಜಿಲ್ಲೆಯ ಪ್ರತಿ ಹಳ್ಳಿಗಳಿಗೆ ತೆರಳಲಿವೆ. ಈ ಮೂಲಕ ಎಲ್ಲ ಕೋಮಿನ ಜನರನ್ನು ಆಹ್ವಾನಿಸಲಾಗುತ್ತದೆ. ನಾವೆಲ್ಲರೂ ಒಗ್ಗೂಡಿ ಕಾರ್ಯಕ್ರಮ ಯಶಸ್ವಿಯಾಗಿಸೋಣ ಎಂದರು.
ಸಮ್ಮೇಳನಕ್ಕೆ ಬೌದ್ಧ ಬಿಕ್ಕುಗಳು, ಬೌದ್ಧ ಧಮ್ಮದ ಸಂಪನ್ಮೂಲ ವ್ಯಕ್ತಿಗಳು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಎಲ್ಲರನ್ನು ಆಹ್ವಾನಿಸುತ್ತೇವೆ. ಪಕ್ಷಾತೀತವಾಗಿ ಕಾರ್ಯಕ್ರಮ ನಡೆಯಲಿದೆ. ಸಮಾರಂಭದ ಜವಾಬ್ದಾರಿಗಳು ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸುವುದು, ಟೀಕಿಸುವುದು ಬೇಡ, ಸ್ವಯಂ ಪ್ರೇರಿತವಾಗಿ ಆಗಮಿಸಿ ಆಚರಣೆ ಜವಾಬ್ದಾರಿಗಳನ್ನು ಪಡೆದು ಕಾರ್ಯನಿರ್ವಹಿಸಬೇಕು. ಇದು ನಮ್ಮ ಕಾರ್ಯಕ್ರಮ ಎಂದು ಭಾವಿಸಬೇಕು. ಸಮ್ಮೇಳನ ಕಾರ್ಯಕ್ರಮ 56 ದೇಶಗಳಲ್ಲಿ ನೇರ ಪ್ರಸಾರವಾಗಲಿದೆ. ಸಮಾರಂಭದಲ್ಲಿ ಪಾಲ್ಗೊಳ್ಳುವರು ಬಿಳಿ ಬಣ್ಣದ ಉಡುಪುಗಳನ್ನು ಧರಿಸಬೇಕು. ಇದು ಸಮ್ಮೇಳನದ ಮೆರಗನ್ನು ಹೆಚ್ಚಿಸಲಿದೆ ಎಂದರು.
ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಜಿಲ್ಲೆಯಲ್ಲಿ ಬೌದ್ಧ ಸಮ್ಮೇಳನ ನಡೆಯುತ್ತಿರುವುದು ನಮ್ಮ ಹೆಮ್ಮೆಯಾಗಿದೆ. ಪ್ರತಿ ಮನೆಗೂ ಈ ಕಾರ್ಯಕ್ರಮ ತಲುಪಿಸುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದರು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ವಿಶ್ವಕ್ಕೆ ಭಾತೃತ್ವ, ಸಮಾನತೆ, ಶಾಂತಿ ಸಾರಿದ ಮಹಾಪುರುಷ ಬುದ್ಧರಾಗಿದ್ದಾರೆ. ಆದರಿಂದಲೇ ಬಾಬಾ ಸಾಹೇಬರು ಬೌದ್ಧ ಧಮ್ಮವನ್ನು ಸ್ವೀಕರಿಸಿದರು. ಬಳಿಕ ನಮ್ಮ ದೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬೌದ್ಧ ಧರ್ಮ ಸ್ವೀಕರಿಸಿದರು. ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಐತಿಹಾಸಿಕ ಬೌದ್ಧ ಸಮ್ಮೇಳನವನ್ನು ಪಕ್ಷಾತೀತವಾಗಿ, ಜ್ಯಾತ್ಯತೀತವಾಗಿ ಆಚರಣೆ ಮಾಡಬೇಕಿದೆ. ಈ ವೇಳೆ ಹಲವು ಮುಖಂಡರು ಕಾರ್ಯಕ್ರಮದ ಬಗ್ಗೆ ಅಭಿಪ್ರಾಯಗಳನ್ನು ಮಂಡಿಸಿದರು.
ಈ ವೇಳೆ ಎಚ್.ಕೆ ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಬೆಂಗಳೂರಿನ ಉದ್ಯಮಿ ಮೋಹನ್ ಅವರು ತಲಾ 1 ಲಕ್ಷ ಮೌಲ್ಯದ ಚೆಕ್ ಅನ್ನು ದೇಣಿಗೆಯಾಗಿ ನೀಡಿದರು. ಅಂತೆಯೇ, ಕೆಲವು ಮುಖಂಡರು ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಜೇತವನದ ಮನೋರಖ್ಖಿತ ಬಂತೇಜಿ, ಸುಗತಪಾಲ ಬಂತೇಜಿ, ಮಾತೆ ಗೌತಮಿ ಬಂತೇಜಿ, ಜಿ.ಎನ್.ನಂಜುಂಡಸ್ವಾಮಿ, ಸ್ಚಾಗತ ಸಮಿತಿಯ ಪ್ರಧಾನ ಸಂಚಾಲಕ ವೆಂಕಟರಮಣ ಪಾಪು, ಸಂಚಾಲಕ ಮುಳ್ಳೂರು ಶಿವಮಲ್ಲು, ಎಚ್.ಕೆ ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಎಸ್.ಆನಂದಮೂರ್ತಿ, ಭೀಮನಗರ ದೊಡ್ಡ ಯಜಮಾನ ಚಿಕ್ಕಮಾಳಿಗೆ ಹಾಗು ಗಡಿ ಮತ್ತು ಕಟ್ಟೆ ಯಜಮಾನರು, ದಲಿತ ಸಂಘರ್ಷ ಸಮಿತಿ ಸಂಚಾಲಕ ಸಿದ್ದರಾಜು ದೊಡ್ಡಿಂದುವಾಡಿ, ಸಾಹಿತಿ ಮಹದೇವ ಶಂಕನಪುರ, ಬೌದ್ಧ ಮಹಾಸಭಾ ತಾಲೂಕು ಅಧ್ಯಕ್ಷ ನಿವೃತ್ತ ರಾಚಪ್ಪಾಜಿ, ಮುಖಂಡ ಚೇತನ್ ದೊರೈರಾಜ್ ಇತರರು ಇದ್ದರು.