ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಳವಡಿಸಿರುವ ಅತ್ಯಾಧುನಿಕ ಫಿಸಿಯೋಥೆರಪಿ ಉಪಕರಣ ಮತ್ತು ಬಿಸಿಗಾಳಿ ತಡೆ ಘಟಕವನ್ನು ಶುಕ್ರವಾರ ಆರಂಭಿಸಲಾಯಿತು. ಡಾ.ಚಿದಂಬರಂ, ಡಾ.ಮಂಜುನಾಥ್ ಡಾ.ಅಲೀಂಪಾಶಾ ಇದ್ದರು.  
ಚಾಮರಾಜನಗರ

ರೋಗಿಗಳ ತ್ವರಿತ ಚೇತರಿಕೆಗಾಗಿ ಉಪಕರಣ ಅಳವಡಿಕೆ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರಂ ಮಾಹಿತಿ
ಗುಂಡ್ಲುಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಫಿಜಿಯೋಥೆರಪಿ ಉಪಕರಣ, ದಂತ ವೈದ್ಯಕೀಯ ಆರ್.ವಿ.ಜಿ.ಸೆನ್ಸರ್ ಮತ್ತು ಬಿಸಿಗಾಳಿ ತಡೆ ಘಟಕವನ್ನು ಶುಕ್ರವಾರ ಆರಂಭಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರಂ ಮಾತನಾಡಿ, ತಾಲೂಕಿನ ಜನತೆಗೆ ಸುಸಜ್ಜಿತ ಆರೋಗ್ಯ ಸೇವೆ ನೀಡುವ ಸಲುವಾಗಿ ತೆರೆದಿರುವ ಅತ್ಯಾಧುನಿಕ ಫಿಜಿಯೋಥೆರಪಿ ವಿಭಾಗದಲ್ಲಿ ರೋಗಿಗಳ ತ್ವರಿತ ಚೇತರಿಕೆಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಅಳವಡಿಸಲಾಗಿದೆ. ಇದು ಸ್ನಾಯು ಮತ್ತು ಮೂಳೆ ಸಂಬಂಧಿತ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ. ದಂತ ವೈದ್ಯಕೀಯ ವಿಭಾಗದಲ್ಲಿ ಸೆನ್ಸರ್ ಆಧರಿತ ಆಧುನಿಕ ಡಿಜಿಟಲ್ ಉಪಕರಣ ಅಳವಡಿಸಲಾಗಿದ್ದು, ಇದು ಕಡಿಮೆ ವಿಕಿರಣದೊಂದಿಗೆ ಹಲ್ಲುಗಳ ನಿಖರವಾದ ಎಕ್ಸ್‌ರೇ ಚಿತ್ರಗಳನ್ನು ತಕ್ಷಣವೇ ನೀಡುತ್ತದೆ. ಇದರಿಂದ ಚಿಕಿತ್ಸೆ ಇನ್ನಷ್ಟು ಸುಲಭ ಮತ್ತು ವೇಗವಾಗಲಿದೆ ಎಂದರು.
ಅಧಿಕ ತಾಪಮಾನ ಮತ್ತು ಬಿಸಿಲಿನಿಂದ ರಕ್ಷಣೆ ನೀಡಲು ಬಿಸಿಗಾಳಿ ತಡೆ ಘಟಕ ತೆರೆದಿದ್ದು ಇದರಲ್ಲಿ ಹೆಚ್ಚುತ್ತಿರುವ ಉಷ್ಣಾಂಶ ಮತ್ತು ಬಿಸಿಗಾಳಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು (ಹೀಟ್ ಸ್ಟ್ರೋಕ್, ನಿರ್ಜಲೀಕರಣ ಇತ್ಯಾದಿ) ಎದುರಿಸಲು ಸಹಕಾರಿಯಾಗಲಿದೆ ಎಂದರು.
ಆಸ್ಪತ್ರೆಯ ಆಡಳಿತ ವೈದ್ಯ ಡಾ.ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂಪಾಶಾ, ಸೇರಿದಂತೆ ತಂತ್ರಜ್ಞರು ಹಾಗೂ ಸಿಬ್ಬಂದಿ ಇದ್ದರು.