ಗುಂಡ್ಲುಪೇಟೆ ಪುರಸಭೆ ವತಿಯಿಂದ ಪಟ್ಟಣದಲ್ಲಿ ಸಿಸಿ ಕ್ಯಾನರಾ ಅಳವಡಿಸಿರುವುದು.
- ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಸುರಿಯುವ
- ನಿಯಂತ್ರಿಸುವ ಸಲುವಾಗಿ ಪುರಸಭೆ
ಗುಂಡ್ಲುಪೇಟೆ: ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಸುರಿಯುವುದನ್ನು ನಿಯಂತ್ರಿಸುವ ಸಲುವಾಗಿ ಪುರಸಭೆ ವತಿಯಿಂದ ಪಟ್ಟಣದ ನಾನಾ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.
ಕೇಂದ್ರ ಸರ್ಕಾರ ದೇಶಾದ್ಯಂತ ಸ್ವಚ್ಛ ಸರ್ವೇಕ್ಷಣ ಅಭಿಯಾನ ಆರಂಭಿಸುವ ಮೂಲಕ ಸ್ವಚ್ಛತಾ ಸ್ಪರ್ಧೆ ಆಯೋಜಿಸುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ ಮನೆಯಿಂದ ಕಸ ಸಂಗ್ರಹಣೆ, ಕಸವಿ ಲೇವಾರಿ, ಸಾರ್ವಜನಿಕ ಹಾಗೂ ಸಮುದಾಯ ಶೌಚಗೃಹಗಳ ಬಳಕೆ ಮತ್ತು ಸ್ವಚ್ಛತೆ, ಹಸಿಕಸದಿಂದ ಗೊಬ್ಬರ ತಯಾರಿ, ಪ್ಲಾಸ್ಟಿಕ್ ಚೀಲಬಳಕೆ ನಿಷೇಧ ಮೂಲಕ ಪಟ್ಟಣದ ಸೌಂದರ್ಯ ಹೆಚ್ಚಳ, ಮಳೆನೀರು ಚರಂಡಿ ಸ್ವಚ್ಛತೆ, ಪೌರಕಾರ್ಮಿಕರ ಆರೋಗ್ಯ ಪರಿಶೀಲನೆ ಮುಂತಾದ ಅಂಶಗಳನ್ನು ಆಧರಿಸಿ ಶ್ರೇಯಾಂಕ ನೀಡಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಪಟ್ಟಣವನ್ನು ಸುಂದರವಾಗಿಸುವ ಉದ್ದೇಶದಿಂದ ಪುರಸಭೆಯ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರ ಸೂಚನೆ ಮೇರೆಗೆ ಪುರಸಭೆ ವ್ಯಾಪ್ತಿಯ ಕೆಇಬಿ ರಸ್ತೆ, ಶಿವಾನಂದವೃತ್ತ, ಪುರಸಭೆ ಮುಂಭಾಗ, ನಾಯಕರ ಬಡಾವಣೆ, ಮದ್ದಾನೇಶ್ವರ ಶಾಲೆ ರಸ್ತೆ ಹಾಗೂ ಅಂಬೇಡ್ಕರ್ ವೃತ್ತಗಳಲ್ಲಿ ಮೊದಲ ಹಂತದಲ್ಲಿ ಕ್ಯಾಮರಾ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇರೆಬೇರೆ ಕಡೆಗಳಲ್ಲಿಯೂ ಅಳವಡಿಸುವ ಮೂಲಲ ಎಲ್ಲೆಂದರಲ್ಲಿ ಕಸಹಾಕುವವರನ್ನು ಗುರುತಿಸಿ ಅವರಿಗೆ ದಂಡ ವಿಧಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಕಸವನ್ನು ಪುರಸಭೆಯ ವಾಹನಕ್ಕೆ ಕೊಡುವ ಮೂಲಕ ಪಟ್ಟಣದ ಸೌಂದರ್ಯವನ್ನು ಕಾಪಾಡಬೇಕು ಎಂದು ಮುಖ್ಯಾಧಿಕಾರಿ ಸರವಣ ಪ್ರಕಟಣೆಯಲ್ಲಿ ಕೋರಿದ್ದಾರೆ.