ಚಾಮರಾಜನಗರ: ತಾಲೂಕಿನ ಬೆಂಡರವಾಡಿ ಬಳಿಯ ಚಾಮರಾಜನಗರ-ಮೈಸೂರು ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ್ದ ಬಸ್-ಲಾರಿ ಅಪಘಾತದಲ್ಲಿ ಬಸ್ ಚಾಲಕ ಮೃತಪಟ್ಟಿದ್ದಾನೆ.
ಇರಸವಾಡಿಯ ಬಳಿಯ ಸುತ್ತೂರಿನ ನಿವಾಸಿ, ಕೆಎಸ್‌ಆರ್‌ಟಿಸಿ ಚಾಲಕ ಮಂಜುನಾಥ್(38) ಮೃತ. ಅಪಘಾತದಲ್ಲಿ ಗಾಯಗೊಂಡಿದ್ದ ಮಂಜುನಾಥ್ ಅವರನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ವೈದ್ಯರು ಮಂಜುನಾಥ್ ಮೃತಪಟ್ಟಿರುವುದಾಗಿ ತಿಳಿಸಿದರು. ಮೃತನಿಗೆ ಪತ್ನಿ, ತಂದೆ, ತಾಯಿ, ಇಬ್ಬರು ತಂಗಿಯರು ಇದ್ದಾರೆ. ಅಂತ್ಯಕ್ರಿಯೆಯು ಸ್ವಗ್ರಾಮದ ಜಮೀನಿನಲ್ಲಿ ಬುಧವಾರ ನಡೆಯಿತು.
ಇನ್ನು ಮಂಜುನಾಥ್ ಸಾವಿಗೆ ಪರಿಹಾರ ನೀಡುವ ಕುರಿತು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ಕುಮಾರ್ ವಿಜಯವಾಣಿಯೊಂದಿಗೆ ಮಾತನಾಡಿ, ಮಂಜುನಾಥ್ ಕುಟುಂಬಕ್ಕೆ ಸಾರಿಗೆ ಸಂಸ್ಥೆಯ ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
17 ಜನರಿಗೆ ಪೆಟ್ಟು: ಅಪಘಾತದಲ್ಲಿ ಒಟ್ಟು 18 ಜನರಿಗೆ ಪೆಟ್ಟಾಗಿದೆ. ಇವರಲ್ಲಿ ಮಂಜುನಾಥ್ ಮೃತಪಟ್ಟರು. ತಮಿಳುನಾಡಿನ ವೆಲ್ಲೂರಿನ ಲಾರಿ ಚಾಲಕ ಗೋವಿಂದಸ್ವಾಮಿಗೂ ಗಂಭೀರ ಗಾಯಗಳಾಗಿವೆ. ಈತನನ್ನು ಕುಟುಂಬದವರು ತಮಿಳುನಾಡಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಳಿದ ಗಾಯಾಳುಗಳಲ್ಲಿ ಕೆಲವರು ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಂಜುನಾಥ್ ಕುಟುಂಬಸ್ಥರು ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು. ಲಾರಿ ಮಾಲೀಕನನ್ನು ಸ್ಥಳಕ್ಕೆ ಕರೆಬೇಕೆಂದು ಒತ್ತಾಯಿಸಿ ೋಷಣೆ ಕೂಗಿದರು. ಶವಾಗಾರದ ಬಳಿ ಒಂದು ಕಡೆ ಮಂಜುನಾಥ್ ಕುಟುಂಬದ ಮಹಿಳೆಯರ ದುಃಖ ಕಟ್ಟೆಯೊಡೆದಿತ್ತು. ಮತ್ತೊಂದು ಕಡೆ ಲಾರಿ ಮಾಲೀಕನನ್ನು ಕರೆಸಬೇಕೆಂದು ಪುರುಷರ ಆಕ್ರೋಶ ಸ್ಫೋಟಗೊಂಡಿತ್ತು. ಬಳಿಕ ಪೊಲೀಸರು ಪ್ರತಿಭಟನಾನಿತರ ಮನವೊಲಿಸಿದರು.
ಅಪಘಾತ ಸ್ಥಳಕ್ಕೆ ಡಿಸಿ ಭೇಟಿ:
ಅಪಘಾತದ ಸ್ಥಳಕ್ಕೆ ಜಿಲ್ಲಾಧಿಕಾರಿ ಶ್ರೀರೂಪಾ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಅಪಘಾತ ಕುರಿತು ಮಾಹಿತಿ ಪಡೆದರು. ಸಾರ್ವಜನಿಕರು, ವಾಹನ ಸಂಚಾರ ಸುರಕ್ಷತೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.