ಪಾರ್ಕ್‌ನೊಳಗಿರುವ ತೋಟಗಾರಿಕೆ ಇಲಾಖೆ ಕಚೇರಿ ಹಿಂಭಾಗ ಕಾಣಸಿಗುವ ಕಸದ ತಿಪ್ಪೆ.
- ನಿರ್ವಹಣೆ ಕೊರತೆಯಿಂದ ನಲುಗುತ್ತಿರುವ ಕೊಳ್ಳೇಗಾಲದ ಪೀಸ್‌ಪಾರ್ಕ್
ಕೊಳ್ಳೇಗಾಲ: ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆ ಹಾಗೂ ವಿಶ್ರಾಂತಿ ತಾಣವಾಗಬೇಕಿದ್ದ ಶಾಂತಿವನ(ಪೀಸ್‌ಪಾರ್ಕ್) ನಿರ್ವಹಣೆ ಕೊರತೆಯಿಂದಾಗಿ ಇದೀಗ ಅನೈರ್ಮಲ್ಯ ಹೆಚ್ಚಾಗಿ ವಾಯುವಿಹಾರಿಗಳಿಗೆ ಅಶಾಂತಿ ತಂದೊಡ್ಡಿದೆ.
ನಗರಸಭೆ ವ್ಯಾಪ್ತಿಯ 7ನೇ ವಾರ್ಡ್‌ನಲ್ಲಿರುವ ಶಾಂತಿವನಕ್ಕೆ ನೂರು ವರ್ಷಗಳ ಇತಿಹಾಸವಿದೆ. ಪಟ್ಟಣದ ಮೊದಲ ಪಾರ್ಕ್ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಕಾಲಕ್ರಮೇಣ ಶಾಂತಿವನ ಸಂಪೂರ್ಣ ನಿರ್ಲಕ್ಷೃಕ್ಕೊಳಗಾಗಿ ಅಂದವನ್ನೇ ಕಳೆದುಕೊಂಡಿತು. ಆ ಬಳಿಕ 2008-2009ನೇ ಸಾಲಿನ ಎಸ್‌ಎಫ್‌ಸಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಜೀವಕಳೆ ತುಂಬಿದ ಪರಿಣಾಮ ಸುಂದರ ವಾತಾವರಣ ಹೊಂದುವ ಮೂಲಕ ಉದ್ಯಾನವಾಗಿ ಹೊರಹೊಮ್ಮಿತು.
ಇದಾದ ಬಳಿಕ 16 ವರ್ಷಗಳಿಂದ ಹಂತ ಹಂತವಾಗಿ ನಿರ್ಲಕ್ಷೃಕ್ಕೊಳಗಾಗಿದ ಪೀಸ್ ಪಾರ್ಕ್ ತನ್ನ ಸೌಂದರ್ಯವನ್ನೇ ಕಳೆದುಕೊಳ್ಳುವಂತಾಯಿತು. ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಶಾಂತಿವನ ಈಗ ಸೊರಗುತ್ತಿದೆ. ಸಾರ್ವಜನಿಕರ ದೂರಿನ ಮೇರೆಗೆ ಕ್ಷೇತ್ರದ ಹಿಂದಿನ ಶಾಸಕ ಎನ್.ಮಹೇಶ್ ಅವರು ಭೇಟಿ ನೀಡಿ ಪರಿಶೀಲಿಸಿ ಪಾರ್ಕ್ ಅಭಿವೃದ್ಧಿಗೆ ಸೂಚನೆ ನೀಡಿದರಾದರೂ ಪ್ರಯೋಜನವಾಗಿಲ್ಲ. ಇನ್ನು ಪ್ರತಿ ವರ್ಷ ನಗರಸಭೆ ಬಜೆಟ್‌ನಲ್ಲಿ ಉದ್ಯಾನ ಅಭಿವೃದ್ಧಿಗೆ ಹಣ ಮೀಸಲಿಟ್ಟರೂ ಸಹ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ನೂರು ವರ್ಷ ಇತಿಹಾಸ ಇರುವ ಉದ್ಯಾನದ ಅಭಿವೃದ್ಧಿಗೆ ಹಿಂದೇಟು ಹಾಕುತ್ತಿರುವ ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಪಾರ್ಕ್‌ನಲ್ಲಿದೆ ತಿಪ್ಪೆ: ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಬರುವ ಸಾರ್ವಜನಿಕರು ಸ್ವಚ್ಛಂದವಾದ ಹಸಿರು ವಾತಾವರಣ ಸವಿಯುವ ಬದಲಿಗೆ ಇಲ್ಲಿ ತಿಪ್ಪೆಯ ದರ್ಶನ ಮಾಡಬೇಕಿದೆ. ಪಾರ್ಕ್‌ನೊಳಗಿರುವ ಮರಗಳಲ್ಲಿ ಉದುರುವ ಎಲೆಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಬದಲಾಗಿ ಪಾರ್ಕ್ ಒಳಗಿರುವ ತೋಟಗಾರಿಕೆ ಇಲಾಖೆ ಕಟ್ಟಡದ ಹಿಂದೆಯೇ ಸುರಿಯಲಾಗುತ್ತಿದೆ. ಇದು ಉದ್ಯಾನದ ಸೌಂದರ್ಯಕ್ಕೆ ಧಕ್ಕೆಯನ್ನುಂಟು ಮಾಡುತ್ತಿದೆ.