ಬೈಲೂರು ಭಾಗದಲ್ಲಿ ಕಾಣಿಸಿಕೊಂಡ ಕಾಡು ಹಂದಿಗಳ ಹಿಂಡು.  
ಚಾಮರಾಜನಗರ

ಕಾಡುಹಂದಿಗಳ ಹಿಂಡಿನಿಂದ ಹೆಚ್ಚಿದ ಆತಂಕ

ಪ್ರಜ್ವಲ್.ಎನ್
ಹನೂರು: ತಾಲೂಕಿನ ಬೈಲೂರು ಸಮೀಪದ ಜಮೀನುಗಳಲ್ಲಿ ಶನಿವಾರ ಸುಮಾರು 25ಕ್ಕೂ ಕಾಡು ಹಂದಿಗಳ ಹಿಂಡು ಕಾಣಿಸಿಕೊಂಡಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.
ಬೈಲೂರು ಭಾಗವು ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದ್ದು, ಇಲ್ಲಿನ ಜಮೀನುಗಳಿಗೆ ರಾತ್ರಿ ವೇಳೆ ಆಗಾಗ್ಗೆ ಕಾಡಾನೆಗಳು ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿವೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವಂತೆ ಈ ಭಾಗದ ರೈತರು ಹಲವು ಬಾರಿ ಪ್ರತಿಭಟನೆ ನಡೆಸಿದರಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಹಾಗಾಗಿ ಕಾಡಾನೆಗಳು ಜಮೀನುಗಳಿಗೆ ಲಗ್ಗೆ ಇಡುತ್ತಿರುವುದು ಮುಂದುವರಿದಿದೆ.
ಈ ನಡುವೆ ಶನಿವಾರ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಸುಮಾರು 25ಕ್ಕೂ ಹೆಚ್ಚು ಕಾಡು ಹಂದಿಗಳ ಹಿಂಡು ಜಮೀನುಗಳಿಗೆ ಲಗ್ಗೆ ಇಟ್ಟು ಅಡ್ಡಾದಿಡ್ಡಿ ಸಂಚರಿಸಿವೆ. ಇದನ್ನು ಕಂಡ ಸ್ಥಳೀಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಕಾಡಾನೆಗಳ ಹಾವಳಿಗೆ ರೋಸಿ ಹೋಗಿದ್ದೇವೆ. ಇದೀಗ ಕಾಡು ಹಂದಿಗಳ ಹಿಂಡು ಜಮೀನುಗಳಲ್ಲಿ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕ ಉಂಟು ಮಾಡಿದೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಫಸಲು ನಾಶ ಮಾಡುವ ಮುನ್ನ ಹಂದಿಗಳನ್ನು ಕಾಡಿನತ್ತ ಕಳುಹಿಸುವಂತೆ ರೈತರು ಒತ್ತಾಯಿಸಿದ್ದಾರೆ.
ಫೋಟೋ
09 ಹನೂರು 3