ಮಲೆಮಹದೇಶ್ವರ ಬೆಟ್ಟದ ತಾಳುಬೆಟ್ಟದ ಮಾರ್ಗದಲ್ಲಿ ಇತ್ತೀಚೆಗೆ ಖಾಸಗಿ ಹಾಗೂ ಸಾರಿಗೆ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವುದು.  
ಚಾಮರಾಜನಗರ

ಮ.ಬೆಟ್ಟದ ಮಾರ್ಗದಲ್ಲಿ ಹೆಚ್ಚಿದ ಅಪಘಾತಗಳು

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಅಭಿವೃದ್ಧಿಯಿಂದ ಅತಿವೇಗದ ಚಾಲನೆ
  • ಸಂಚಾರ ನಿಯಮ ಪಾಲಿಸದ ವಾಹನ ಸವಾರರು, ಚಾಲಕರು
ಹನೂರು: ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಲೆ ಮಹದೇಶ್ವರ ಬೆಟ್ಟದ ಮಾರ್ಗ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ನಾಲ್ಕೂವರೆ ತಿಂಗಳ ಅವಧಿಯಲ್ಲಿ ನಾಲ್ವರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ತಾಲೂಕಿನ ಮ.ಬೆಟ್ಟ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ. ಇಲ್ಲಿಗೆ ರಾಜ್ಯದ ವಿವಿಧೆಡೆಯಿಂದ ಪ್ರತಿನಿತ್ಯ ಹನೂರಿನ ಮೂಲಕ ಬಸ್, ಟೆಂಪೋ ಟ್ರಾವೆಲ್ಲರ್, ಕಾರು, ಆಟೋ, ಬೈಕ್ ಇನ್ನಿತರ ವಾಹನಗಳ ಮೂಲಕ ಭಕ್ತರು ತೆರಳುತ್ತಾರೆ. ಆದರೆ ಅತಿಯಾದ ವೇಗ, ಅಜಾಗರೂಕತೆ ಹಾಗೂ ಸಂಚಾರ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ಮ.ಬೆಟ್ಟ ಮಾರ್ಗದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಸಾವು, ನೋವು ಉಂಟಾಗಿ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಆದರೆ ಅಪಘಾತವನ್ನು ತಡೆಗಟ್ಟುವಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸದಿರುವುದು ವಿಪರ್ಯಾಸ.
ನಾಲ್ವರ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ: ಹನೂರಿನಿಂದ ಮ.ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಜನವರಿಯಿಂದ ಮೇ 14ರವರೆಗೆ ಈ ಮಾರ್ಗದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಪ್ರಾಣವನ್ನೇ ಕಳೆದುಕೊಂಡಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜ.1ರಂದು ಎಂ.ಜಿ.ದೊಡ್ಡಿ ಬಳಿ ಸಾರಿಗೆ ಬಸ್ ಹಾಗೂ ಆಟೋ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಮೋಕ್ಷಿತ್ ಮೃತಪಟ್ಟರೆ, ಇಬ್ಬರು ಗಾಯಗೊಂಡಿದ್ದರು.
13ರಂದು ಕೋಣನಕೆರೆಯ ಬಳಿ ನಡೆದ ಕೆಎಸ್‌ಆರ್‌ಟಿಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ತಾಲೂಕಿನ ಪೊನ್ನಾಚಿಯ ರಾಮೇಗೌಡನಹಳ್ಳಿಯ ಶಿವಪ್ಪ ಹಾಗೂ ಸತೀಶ್ ಮೃತಪಟ್ಟಿದ್ದರು. 23ರಂದು ಆರ್.ಎಸ್.ದೊಡ್ಡಿಯ ಅಗ್ನಿಶಾಮಕ ಠಾಣೆಯ ಬಳಿ ಅಪರಿಚಿತ ವಾಹನ ಡಿಕ್ಕಿಯಿಂದ ಬೆಂಗಳೂರಿನ ಲಗ್ಗೇರೆ ನಿವಾಸಿ ಗಣೇಶ್ ಮೃತಪಟ್ಟರೆ, ನಾಗರಾಜು ಗಾಯಗೊಂಡರು.
ಫೆಬ್ರವರಿ 13ರಂದು ತಾಳುಬೆಟ್ಟದ ಮಾರ್ಗದಲ್ಲಿ ಸಾರಿಗೆ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಚಾಲಕರಾದ ಫಕೀರಪ್ಪ, ಚಂದ್ರಶೇಖರ, ನಿರ್ವಾಹಕ ವೆಂಕಟೇಶ್, ರಾಮನಗರದ ದತ್ತರಾಜು, ಸ್ವಾಮಿ, ಅಭಿಷೇಕ್ ಹಾಗೂ ತಲಕಾಡಿನ ತಳವಾರ್ ಗಾಯಗೊಂಡಿದ್ದರು. 15ರಂದು ಮಲ್ಲಯ್ಯನಪುರದ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಕನಕಪುರದ ಕಾರ್ತಿಕ್, ತೇಜಸ್, ಮಾರ್ಚ್ 3 ರಂದು ಹನೂರಿನ ಅಗ್ನಿಶಾಮಕ ಠಾಣಾ ಬಳಿ ಕಾರು ಹಾಗೂ ಸಾರಿಗೆ ಬಸ್ ನಡುವೆ ಡಿಕ್ಕಿ ಸಂಭವಿಸಿ ಮಂಗಲ ಗ್ರಾಮದ ದೊರೆ, ಏ.29 ರಂದು ವಡಕೆಹಳ್ಳದ ಬಳಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಕೋಣನಕೆರೆಯ ವಿಜಯ್, ದೊರೆ, ಮೇ 1ರಂದು ಎಲ್ಲೇಮಾಳದ ಬಳಿ ಕಾರು ಹಳ್ಳಕ್ಕೆ ಬಿದ್ದು ಬೆಂಗಳೂರಿನ ಇಬ್ಬರು ಗಾಯಗೊಂಡಿದ್ದರೆ, ಇದೇ ದಿನ ತಾಳುಬೆಟ್ಟದ 2ನೇ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮಗುಚಿ ಹನೂರು, ಎಚ್.ಡಿ ಕೋಟೆ, ಮೈಸೂರು ಹಾಗೂ ನಂಜನಗೂಡಿನ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 12ರಂದು ಕೋಣನಕೆರೆ ತಾಳುಬೆಟ್ಟದ ಮಾರ್ಗದಲ್ಲಿ ಕಾರು ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿ ಮೈಸೂರು ಕೂರ್ಗಳ್ಳಿಯ ಅರುಣ್, ಪವನ್, ಯಶಸ್, 14ರಂದು ಎಲ್ಲೇಮಾಳ ಮಾರ್ಗದಲ್ಲಿ ಲಾರಿ ಮಗುಚಿ ಚಾಲಕ ಗಾಯಗೊಂಡಿದ್ದಾರೆ. ರಾಮಾಪುರ ಮಾರ್ಗದ ಕೆಂಪಯ್ಯನಹಟ್ಟಿ ಬಳಿ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದು ಒಡೆಯರಪಾಳ್ಯದ 9 ಜನರು ಗಾಯಗೊಂಡಿದ್ದರು.
ಅಪಘಾತಕ್ಕೆ ಮುಖ್ಯ ಕಾರಣವೇನು?: ಹನೂರಿನಿಂದ ಮ.ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಹಾಳಾಗಿದ್ದ ರಸ್ತೆಯು ಕಳೆದ ವರ್ಷ ಅಭಿವೃದ್ಧಿ ಕಂಡಿದೆ. ಇದರಿಂದ ಅತಿಯಾದ ವೇಗ ಹಾಗೂ ಅಜಾಗರೂಕ ಚಾಲನೆ ಅಪಘಾತಕ್ಕೆ ಮುಖ್ಯ ಕಾರಣವಾದರೆ, ಸವಾರರು ಹೆಲ್ಮೆಟ್ ಧರಿಸದೆ ಇರುವುದು, ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದು, ತಿರುವುಗಳಲ್ಲಿ ಸೂಚನಾ ಫಲಕ ಅಳವಡಿಸದಿರುವುದು ಹಾಗೂ ಅನುಭವಿ ಚಾಲಕರ ಕೊರತೆಯೂ ಅಪಘಾತ ಸಂಭವಿಸಲು ಮತ್ತೊಂದು ಕಾರಣವಾಗಿದೆ.
ಅಪಘಾತ ವಲಯ: ಮ.ಬೆಟ್ಟದ ಮಾರ್ಗದಲ್ಲಿ ತೀವ್ರ ತಿರುವಿನಿಂದ ಕೂಡಿರುವ ತಾಳುಬೆಟ್ಟ ಮಾರ್ಗ, ಕೋಣನಕೆರೆ, ವಡಕೆಹಳ್ಳ, ಎಲ್ಲೇಮಾಳದ ಬಳಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಆಕ್ಸಿಡೆಂಟ್ ಜೋನ್ ಆಗಿ ಮಾರ್ಪಟ್ಟಿದೆ. ಈ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಆದರೆ ಅಪಘಾತ ಮಾತ್ರ ತಪ್ಪಿಲ್ಲ. ಆದ್ದರಿಂದ ವಾಹನ ಸವಾರರಲ್ಲಿ ಸಂಚಾರ ಸುರಕ್ಷತಾ ನಿಯಮದ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಅತಿವೇಗಕ್ಕೆ ಕಡಿವಾಣ ಹಾಕಬೇಕಿದೆ. ಹೆಚ್ಚು ಅಪಘಾತ ಸಂಭವಿಸುವ ಕಡೆಗಳಲ್ಲಿ ಸೂಚನಾಫಲಕವನ್ನು ಅಳಡಿಸಬೇಕಿದೆ.