ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಭಾನುವಾರ ಸಂಜೆ ಆಯೋಜಿಸಿದ್ದ ಚೆಲುವ ಚಾಮರಾಜನಗರ ನೃತ್ಯ ಸಂಯೋಜಕರು ಮತ್ತು ನೃತ್ಯ ಕಲಾವಿದರ ಸಂಘದ ಉದ್ಘಾಟನೆ ಸಮಾರಂಭವನ್ನು ದಲಿತ ಮಹಾ ಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ(ಪಾಪು) ಉದ್ಘಾಟಿಸಿದರು. ಶ್ರೀನಿಧಿ ಕುದರ್, ನಿಶಾಂತ್, ನಾಗೇಂದ್ರ ನಾಯಕ್, ನವೀನ್ ಕ್ವಾಲಿಟಿ, ಜಿ.ಎನ್.ಲೋಕೇಶ್ ಇತರರು ಹಾಜರಿದ್ದರು. 
ಚಾಮರಾಜನಗರ

ನೃತ್ಯ ಸಂಯೋಜಕರು, ಕಲಾವಿದರ ಸಂಘ ಉದ್ಘಾಟನೆ

ಪ್ರಮುಖ ಮುಖ್ಯಾಂಶಗಳು

  • ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಕಾರ್ಯಕ್ರಮ
  • ನೃತ್ಯ ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಶಸ್ತಿ
ಚಾಮರಾಜನಗರ: ಸರ್ಕಾರದಿಂದ ಕಲಾವಿದರಿಗೆ ಸಿಗುತ್ತಿರುವ ಸೌಲಭ್ಯಗಳು ಕಡಿಮೆ. ಇನ್ನು ಮುಂದಾದರೂ ಸರ್ಕಾರ ಕಲಾವಿದರ ಕಡೆ ಗಮನ ಹರಿಸಲಿ ಎಂದು ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ(ಪಾಪು) ತಿಳಿಸಿದರು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಭಾನುವಾರ ಸಂಜೆ ಆಯೋಜಿಸಿದ್ದ ಚೆಲುವ ಚಾಮರಾಜನಗರ ನೃತ್ಯ ಸಂಯೋಜಕರು ಮತ್ತು ಕಲಾವಿದರ ಸಂಘ ಉದ್ಘಾಟನೆ ಮತ್ತು ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
ಕಲೆಗಳ ತವರೂರಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಎಲ್ಲ ಬಗೆಯ ಕಲಾಪ್ರಕಾರಗಳನ್ನೂ ಕಲಿತಿರುವ ಕಲಾವಿದರು ಇದ್ದಾರೆ. ಇವರಿಗೆ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳು ಕಡಿಮೆ ಇವೆ. ಕಲಾವಿದರಿಗೆ ಪ್ರೋತ್ಸಾಹ ಮತ್ತು ಜೀವನ ಭದ್ರತೆ ಒದಗಿಸಿಕೊಡಲು ಸರ್ಕಾರ ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಚೆಲುವ ಚಾಮರಾಜನಗರ ನೃತ್ಯ ಸಂಯೋಜಕರು ಮತ್ತು ಕಲಾವಿದರ ಸಂಘ ಉದ್ಘಾಟನೆಯಾಗಿ ನೃತ್ಯ ಕಲೆಗೆ ಹೊಸ ಬೆಳಕು ಮೂಡಿದೆ. ನೃತ್ಯ ಕಲಾವಿದರಿಗೆ ಹೊಸ ವೇದಿಕೆ ಸಿಗುತ್ತಿದೆ. ಸಂಘವು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ತಿಳಿಸಿದರು.
ಸಮಾಜ ಸೇವಕ ಶ್ರೀನಿಧಿ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ನೃತ್ಯ ಕಲಾವಿದರು ಒಗ್ಗೂಡಿರುವುದು ತುಂಬಾ ಸಂತೋಷವಾಗುತ್ತಿದೆ. ಸಿನಿಮಾ ಮತ್ತು ರಿಯಾಲಿಟಿ ಷೋಗಳಲ್ಲಿ ಪಾಲ್ಗೊಳ್ಳಲು ಈ ರೀತಿಯ ವೇದಿಕೆಗಳು ಅವಕಾಶಗಳನ್ನು ಒದಗಿಸಿಕೊಡುತ್ತವೆ. ನೃತ್ಯ ಕಲಾವಿದರ ಶ್ರೇಯಸ್ಸಿಗಾಗಿ ನಮ್ಮ ಬೆಂಬಲ ಸದಾಕಾಲ ಇರುತ್ತದೆ ಎಂದು ಭರವಸೆ ನೀಡಿದರು.
ನೃತ್ಯ ಸಂಯೋಜಕರ ಸಂಘದ ಅಧ್ಯಕ್ಷ ಅವತಾರ್ ಪ್ರವೀಣ್ ಜಿಲ್ಲೆಯಲ್ಲಿ ಇರುವ ಹಲವಾರು ನೃತ್ಯ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಎಲ್ಲ ನೃತ್ಯ ಕಲಾವಿದರನ್ನು ಒಟ್ಟಾಗಿ ಸೇರಿಸಿ ಸಂಘ ಕಟ್ಟಿದ್ದಾರೆ. ಇದೇ ರೀತಿ ದೊಡ್ಡಮಟ್ಟದಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಿ ಎಂದರು. ಇದೇ ವೇಳೆ ನಡೆದ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಹಲವು ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದವು. ಅವತಾರ್ ಡ್ಯಾನ್ಸ್ ಗ್ರೂಪ್, ಚೇತನ್ ಡಾನ್ಸ್ ಕಂಪನಿ, ಗ್ರಾವಿಟಿ ಡ್ಯಾನ್ಸ್ ಕ್ಲಾಸ್ , ಮರ್ವಾಲಸ್ ತಂಡ ನಗದು ಬಹುಮಾನ ಮತ್ತು ಟ್ರೋಫಿ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ರಾಹುಲ್ ಮಾಸ್ಟರ್, ಭಜರಂಗಿ ಮೋಹನ್ ಮಾಸ್ಟರ್, ವಸಂತ್ ಮಾಸ್ಟರ್ ಪಾಲ್ಗೊಂಡರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಯೂತ್ ಐಕಾನ್, ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಂಗ್ರೆಸ್ ಮುಖಂಡ ನಾಗೇಂದ್ರ ನಾಯಕ್ ಮಾತನಾಡಿದರು. ಮುಖಂಡರಾದ ನವೀನ್ ಕ್ವಾಲಿಟಿ, ಜಿ.ಎನ್.ಲೋಕೇಶ್, ಹನೂರು ನಿಶಾಂತ್, ಡಾ.ರೇಣುಕಾದೇವಿ, ಡಾ. ಮೇಲಿಷ ಪಿಕಾರ್ಡೊ ಚೇತನ್, ಮಹದೇವಸ್ವಾಮಿ, ಮಣಿ, ಶಂಕರ್, ವಿನಯ್ ಮತ್ತು ಇತರರು ಇದ್ದರು.