ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಶಿವಮೂರ್ತಿ ಮಾತನಾಡಿದರು.
- ಕರ್ನಾಟಕ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ ಆಗ್ರಹ
- ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಲು ಒತ್ತಾಯ
- ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ
ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಶಿವಮೂರ್ತಿ ಮಾತನಾಡಿದರು.
ಚಾಮರಾಜನಗರ: ರಾಜ್ಯ ಸರ್ಕಾರ 56,342 ಹುದ್ದೆಗಳ ಭರ್ತಿಯಲ್ಲಿ ಒಳಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು ಎಂದು ಕರ್ನಾಟಕ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ ಆಗ್ರಹಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಎಚ್.ಎಸ್.ನಾಗಮೋಹನ್‌ದಾಸ್ ಒಳಮೀಸಲಾತಿ ವರದಿಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಸದನದಲ್ಲಿಯೂ ಕೂಡ ಅಂಗೀಕಾರಗೊಂಡಿದೆ. ಇತ್ತೀಚೆಗೆ ರಾಜ್ಯಪಾಲರು ಕೂಡ ಒಳಮೀಸಲಾತಿ ಆದೇಶಕ್ಕೆ ಅಂತಿಮವಾಗಿ ಸಹಿಯನ್ನು ಹಾಕಿದ್ದಾರೆ. ಒಳಮೀಸಲಾತಿ ಅನುಷ್ಠಾನಗೊಳಿಸುವವರೆಗೂ ಯಾವುದೇ ಹುದ್ದೆಗಳನ್ನು ಭರ್ತಿ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಭರವಸೆ ನೀಡಿತ್ತು. ಆದರೆ ದಾವಣಗೆರೆಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ನೆಪಹೇಳಿ, 35 ವರ್ಷಗಳ ಮಾದಿಗರ ಹೋರಾಟವನ್ನು ಮಣ್ಣು ಮಾಡುವ ಕೆಲಸವನ್ನು ಮಾಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರಾಜ್ಯ ಸರ್ಕಾರ 56,342 ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಇದರಲ್ಲಿ ಶೇ.15 ರಷ್ಟು ಒಳಮೀಸಲಾತಿಯನ್ನು ಜಾರಿಗೊಳಿಸಿ ಪ್ರವರ್ಗ ಎ, ಬಿ, ಸಿ ಅನುಸಾರ ನೇಮಕಾತಿ ಪ್ರಕ್ರಿಯೆಯನ್ನು ನಡೆಸಬೇಕು. ಶೇ.56 ಮೀಸಲಾತಿಯನ್ನು ಸಂವಿಧಾನದ ಅನುಸೂಚಿಯಲ್ಲಿ 9ನೇ ಷೆಡ್ಯೂಲ್‌ಗೆ ಸೇರಿಸಬೇಕು. ನೆರೆಯ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶದಲ್ಲಿ ನೂತನ ಒಳಮೀಸಲಾತಿಯಂತೆ ಶಿಕ್ಷಣ, ಉದ್ಯೋಗ, ಮುಂಬಡ್ತಿ ಹಾಗೂ ಬ್ಯಾಕ್‌ಲಾಗ್ ಹುದ್ದೆಗಳನ್ನು ನೀಡುತ್ತಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಒಳಮೀಸಲಾತಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕೊಳ್ಳೇಗಾಲ ಡಾ.ಬಾಬು ಜಗಜೀವನ್ ರಾಮ್ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಬಾಲರಾಜ್, ಮಹಾಸಭಾದ ಕೆ.ಎನ್.ಜಗದೀಶ್, ಸಿ.ಸೋಮು, ಸುರೇಶ್, ಎಂ.ರಾಜು, ಅಂಕಳ್ಳಿ ಸಿದ್ದಯ್ಯ, ರವಿ ಹಾಜರಿದ್ದರು.