ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿದರು.  
ಚಾಮರಾಜನಗರ

ಈ ಬಾರಿ ಬಜೆಟ್‌ನಲ್ಲಿ ಕೃಷಿ ಪ್ರವಾಸೋದ್ಯಮ ಜಾರಿಗೊಳಿಸಿ

ಎ.ಎಸ್.ಮಣಿಕಂಠ

ಪ್ರಮುಖ ಮುಖ್ಯಾಂಶಗಳು

  • ರೈತ ಮುಖಂಡ ಹೊನ್ನೂರು ಪ್ರಕಾಶ್ ಒತ್ತಾಯ
  • ಅರಣ್ಯದ ಮೇಲಿನ ಒತ್ತಡ ತಗ್ಗಿಸಲು ಆಗ್ರಹ
  • ರಾಜ್ಯಮಟ್ಟದ ತಜ್ಞರ ಸಮಿತಿ ರಚನೆ ಮಾಡಲು ಮನವಿ
ಚಾಮರಾಜನಗರ: ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷವನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕೃಷಿ ಪ್ರವಾಸೋದ್ಯಮ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕಿದೆ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಮಾನವ - ವನ್ಯಜೀವಿ ಸಂಘರ್ಷ ಹೆಚ್ಚಾಗಿ ಜಾನುವಾರುಗಳು ಮತ್ತು ಮಾನವನ ಬಲಿ ಪ್ರಕರಣಗಳು ಹೆಚ್ಚಾದ ಪರಿಣಾಮ ಸಫಾರಿಯೇ ಬಂದಾಗಿದೆ. ಈ ನಿಟ್ಟಿನಲ್ಲಿ ಅರಣ್ಯದ ಮೇಲಿನ ಒತ್ತಡ ತಗ್ಗಿಸಲು, ಪ್ರವಾಸಿಗರು ಸಾಕು ಪ್ರಾಣಿಗಳು ಮತ್ತು ಕೃಷಿ ಬಗ್ಗೆ ಒಡನಾಟ ಹೆಚ್ಚಿಸಿಕೊಳ್ಳುವ ನೆರವಾಗುವ ನಿಟ್ಟಿನಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹಿಸಬೇಕಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕೃಷಿ ಪ್ರವಾಸೋದ್ಯಮಕ್ಕೆ ಶೇ.100ರಷ್ಟು ಸಹಾಯಧನ ನೀಡಬೇಕು. ಕೃಷಿ ಪ್ರವಾಸೋದ್ಯಮ ನಡೆಸುವವರಿಗೆ ಉಚಿತ ವಿದ್ಯುತ್ ಮತ್ತು ನೀರಿನ ವ್ಯವಸ್ಧೆ ಕಲ್ಪಿಸಬೇಕು. ಸೋಲಾರ್ ಪಂಪ್‌ಸೆಟ್, ಸೋಲಾರ್ ಕರೆಂಟ್ ಉತ್ಪಾದನಾ ಘಟಕಗಳನ್ನುಅಳವಡಿಸಲು ಶೇ. 100ರಷ್ಟು ಸಹಾಯಧನ ನೀಡಬೇಕು. ಶುಲ್ಕ ರಹಿತವಾಗಿ ರೈತರ ಭೂಮಿ ಕೃಷಿ ಪ್ರವಾಸೋದ್ಯಮಕ್ಕೆ ನೋಂದಣಿಯಾಗಬೇಕು. ಶಿಕ್ಷಣ ಇಲಾಖೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಶಾಲಾ ಮಕ್ಕಳಿಗೆ ಕೃಷಿ ಪ್ರವಾಸೋದ್ಯಮ
ಕಡ್ಡಾಯಗೊಳಿಸಬೇಕು ರೈತರಿಗೆ ಗ್ರಾಮೀಣ ಭೂ ಅಭಿವೃದ್ಧಿ ಬ್ಯಾಂಕ್‌ನಿಂದ ಹಿಡಿದು ಎಲ್ಲೆಡೆ ಸುಲಭವಾಗಿ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮಮೀನುಗಾರಿಕೆ, ಅರಣ್ಯ ಇಲಾಖೆಯವರು ಕೃಷಿ ಪ್ರವಾಸೋದ್ಯಮ ಕೈಗೊಳ್ಳುವ ರೈತರಿಗೆ ವಿಶೇಷ ಆದ್ಯತೆ ನೀಡಬೇಕು. ಕೃಷಿ ಪ್ರವಾಸೋದ್ಯಮ ಅನುಷ್ಠಾನಕ್ಕೆ ರಾಜ್ಯಮಟ್ಟದ ತಜ್ಞರ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಗತಿ ಪರ ರೈತ ಪಿ.ದಯಾನಂದ ಮಾತನಾಡಿ, ಮಕ್ಕಳಿಗೆ ಶಾಲಾ ಹಂತದಿಂದಲೇ ಕೃಷಿ ಬಗ್ಗೆ ಪರಿಚಯಿಸುವ ಸಲುವಾಗಿ ಶಾಲಾ ಮಕ್ಕಳನ್ನು ರೈತರ ಕೃಷಿ ಭೂಮಿಗೆ ಕರೆದುಕೊಂಡು ಹೋಗುವಂತಹ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಯಾಗಬೇಕು ಎಂದರು.
ಗೋಷ್ಠಿಯಲ್ಲಿ ಕೃಷಿ ಪ್ರವಾಸೋದ್ಯಮ ತಜ್ಞ ಶ್ರೀವತ್ಸ ಗೋವಿಂದರಾಜು, ಕೃಷಿ ಪ್ರವಾಸೋದ್ಯಮಿ ರೈತ ಶೇಷಕುಮಾರ್, ನಾಣ್ಯಗಳ ಸಂಗ್ರಾಹಕ ಎಚ್.ಪಿ.ರಾಮಚಂದ್ರ, ಪತ್ರಕರ್ತ ಜಿ.ದೇವರಾಜನಾಯ್ಡು, ರೈತ ಮುಖಂಡ ಚೆಂಗಡಿ ಕರಿಯಪ್ಪ ಹಾಜರಿದ್ದರು.