ಗುಂಡ್ಲುಪೇಟೆ ಪಟ್ಟಣದ ಗುರುಭವನದಲ್ಲಿ ಪುಟ್ಟರಂಗಶೆಟ್ಟಿ ಅಧಿಕಾರಿಗಳ ಸಭೆ ನಡೆಸಿದರು. . ಗಣೇಶ್ ಪ್ರಸಾದ್, ಶ್ರೀರೂಪಾ, ಮೋನಾರೋತ್ ಇದ್ದರು.
- ಸಚಿವ ಸಿ.ಪುಟ್ಟರಂಗಶೆಟ್ಟಿ ಆತಂಕ
- ಗುಂಡ್ಲುಪೇಟೆಯಲ್ಲಿ ಬರ ಅಧ್ಯಯನ ಪ್ರವಾಸ
ಬರಪೀಡಿತ ಪ್ರದೇಶಗಳ ರೈತರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ಗುಂಡ್ಲುಪೇಟೆಯ ಗುರುಭವನದಲ್ಲಿ ಅಧಿಕಾರಿಗಳ ಸಭೆ ನಂತರ ಮಾಧ್ಯಮದೊಂದಿಗೆ ಅವರು ಮಾತನಾಡಿದರು.
ಮೊದಲ ದಿನ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದು, ಬೆಳೆನಾಶ, ಕುಡಿಯುವ ನೀರಿನ ಕೊರತೆ ಬಗ್ಗೆ ಪರಿಶೀಲಿಸಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಬೆಳೆನಾಶದ ವಿವರ ಪಡೆದುಕೊಳ್ಳಲಾಗಿದೆ. ಎಲ್ಲ ಕಡೆಗಳಲ್ಲಿ ಸೂರ್ಯಕಾಂತಿ, ಜೋಳ, ಹೆಸರು, ಉದ್ದು, ಮುಂತಾದ ಎಲ್ಲ ಬೆಳೆಗಳು ಸಂಪೂರ್ಣ ನಾಶವಾಗಿವೆ. ಹೆಚ್ಚಿನ ರೈತರು ಬೆಳೆ ವಿಮೆ ಮಾಡಿಸಿದ್ದರೂ ಇನ್ನೂ ಹಲವರು ಮಾಹಿತಿಯ ಕೊರತೆಯಿಂದ ವಿಮೆ ಮಾಡಲು ಸಾಧ್ಯವಾಗದ ಕಾರಣ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಸದ್ಯ ಪರಿಸ್ಥಿತಿ ಗಂಭೀರವಾಗಿದ್ದು ಇನ್ನೊಂದು ತಿಂಗಳಲ್ಲಿ ಮಳೆಬೀಳದಿದ್ದರೆ ಜನ ಜಾನುವಾರುಗಳಿಗೆ ನೀರಿನ ಹಾಹಾಕಾರ ಉಂಟಾಗಲಿದೆ. ಜತೆಗೆ ಜಾನುವಾರುಗಳಿಗೆ ಮೇವಿನ ಕೊರತೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪ್ರವಾಸ ಪೂರ್ಣಗೊಂಡ ಬಳಿಕ ಕೆಡಿಪಿ ಸಭೆ ಕರೆದು ಗೋಶಾಲೆ ತೆರೆಯುವ ಇಲ್ಲವೇ ಜಾನುವಾರುಗಳಿಗೆ ಮೇವು ಪೂರೈಸಬೇಕೇ ಎಂಬ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೋಗಸ್ ಫಲಾನುಭವಿಗಳನ್ನು ಪತ್ತೆ ಹಚ್ಚುವ ಸಲುವಾಗಿ ವೃದ್ದಾಪ್ಯ ವೇತನ, ವಿಧವಾ ವೇತನಗಳನ್ನು ತಡೆಹಿಡಿಯಲಾಗಿದ್ದು, ಅರ್ಹರಿಗೆ ಕೂಡಲೇ ಆದೇಶಪತ್ರ ನೀಡುವಂತೆ ತಹಸೀಲ್ದಾರ್ ಅವರಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲೆಯ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು. ಆದರೆ ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದು, ತಮಗೆ ಬೇಕಾದಾಗ ಪ್ರತಿಭಟನೆ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಈ ಹಿಂದೆ ಕೆರೆಯಿಂದ ಕೆರೆಗೆ ಪೈಪ್ ಲೈನ್ ಮಾಡಲು ಹೊರಟಿದ್ದಾಗ ಅದನ್ನು ತಡೆಗಟ್ಟಿದರು. ಇದರಿಂದ ಎಲ್ಲ ಕೆರೆಗಳನ್ನೂ ತುಂಬಿಸಲು ಸಾಧ್ಯವಾಗದಂತಾಗಿದೆ. ಆದ್ದರಿಂದ ಇವರು ವಿನಾಕಾರಣ ಪ್ರತಿಭಟನೆ ಮಾಡುವುದು ಕೈಬಿಟ್ಟು ನಮ್ಮೊಂದಿಗೆ ಚರ್ಚಿಸಬೇಕು ಎಂದು ಹೇಳಿದರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ತಾಲೂಕಿನ ವಡ್ಡಗೆರೆ, ಕರಕಲಮಾದಹಳ್ಳಿ, ಯರಿಯೂರು ಕೆರೆಗಳಿಗೆ ನೀರು ತುಂಬಿಸುವಾಗ ಸುಮ್ಮನಿರದ ಬಿಜೆಪಿಯವರು ವಡೆಯನಪುರ ಹಾಗೂ ಕಲ್ಲುಕಟ್ಟೆ ಕೆರೆಗೆ ನೀರು ಹರಿಸಲು ಮುಂದಾದಾಗ ಚಾಮರಾಜನಗರದವರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಕಲ್ಲುಕಟ್ಟೆ ಕೆರೆಗೆ ನೀರು ತುಂಬಿಸಿದರೆ ತಮ್ಮ ಬೇಳೆ ಬೇಯುವುದಿಲ್ಲ ಎಂಬ ಕಾರಣಕ್ಕೆ ಜನರ ಭಾವನೆಗಳನ್ನು ಎತ್ತಿಕಟ್ಟಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ತಾಲೂಕಿನ ಎಲ್ಲ ರೈತ ಸಂಘಟನೆಯವರಿಗೆ ನೈಜ ಸಮಸ್ಯೆಗಳ ಬಗ್ಗೆ ಅರಿವಿದೆ. ಆದರೆ ಇಂದು ಪಾರ್ವತಿ ಬೆಟ್ಟದಲ್ಲಿ ಸಭೆ ನಡೆಸಿದವರು ರೈತರಲ್ಲ, ಅವರು ಬಿಜೆಪಿ ಕಾರ್ಯಕರ್ತರು ಎಂದು ಲೇವಡಿ ಮಾಡಿದರು.
ತಾಲೂಕಿನ 110 ಕೆರೆಗಳಿಗೆ ನೀರು ತುಂಬಿಸುವ 475 ಕೋಟಿ ರೂ.ವೆಚ್ಚದ ಯೋಜನೆಯಲ್ಲಿ ಕೆರೆಗಳಿಗೆ ಪೈಪ್ ಲೈನ್ ಅಳವಡಿಸಲಾಗುವುದು. ಮುಂದಿನ ವರ್ಷ ವಿಧಾನಸಾಭೆ ಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿ ನಿದ್ರೆ ಮಾಡುತ್ತಿದ್ದ ಬಿಜೆಪಿ ನಾಯಕರು ಏಕಾಏಕಿ ಎದ್ದು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.