ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ವೀರಸಿಂಹಾಸನಶಿಲಾಮಠದ ನೂತನ ಕಟ್ಟಡ ಉದ್ಘಾಟನೆ ಮತ್ತು ಸಿದ್ದಮಲ್ಲಿಕಾರ್ಜುನ ಸ್ವಾಮೀಜಿಯ ಆರಾಧನೆ ಕಾರ್ಯಕ್ರಮವನ್ನು ಸಿದ್ದಮಲ್ಲಸ್ವಾಮೀಜಿ ಉದ್ಘಾಟಿಸಿದರು. ದೇಶಿ ಕೇಂದ್ರ ಸ್ವಾಮೀಜಿ, ಯಡಿಯೂರಪ್ಪ, ಗಣೇಶ್ ಪ್ರಸಾದ್, ನಿರಂಜನಕುಮಾರ್, ಮಲ್ಲಿಕಾರ್ಜುನಪ್ಪ, ಮಧುಶಂಕರ್ ಇದ್ದರು. 
ಚಾಮರಾಜನಗರ

ರಾಜ್ಯದ ರೈತರ ಅಭಿವೃದ್ಧಿಗೆ ಶ್ರಮಿಸುತ್ತೇನೆ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ
  • ವೀರಸಿಂಹಾಸನಶಿಲಾಮಠದ ನೂತನ ಕಟ್ಟಡ ಉದ್ಘಾಟನೆ ಮತ್ತು ಸಿದ್ದಮಲ್ಲಿಕಾರ್ಜುನಸ್ವಾಮೀಜಿಯ 76ನೇ ವಾರ್ಷಿಕ ಆರಾಧನೆ ಕಾರ್ಯಕ್ರಮ
ಗುಂಡ್ಲುಪೇಟೆ: ಜನರ ನಿರೀಕ್ಷೆಯಂತೆ ಕೈ ಕಾಲು ಗಟ್ಟಿಗಿರುವವರೆಗೂ ನಾಡಿನ ಉದ್ದಗಲಕ್ಕೂ ಓಡಾಡಿ ರಾಜ್ಯದ ರೈತರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗುರುವಾರ ತಾಲೂಕಿನ ಸೋಮಹಳ್ಳಿ ಗ್ರಾಮದ ವೀರಸಿಂಹಾಸನಶಿಲಾಮಠದ ನೂತನ ಕಟ್ಟಡ ಉದ್ಘಾಟನೆ ಮತ್ತು ಸಿದ್ದಮಲ್ಲಿಕಾರ್ಜುನಸ್ವಾಮೀಜಿಯ 76 ನೇ ವಾರ್ಷಿಕ ಆರಾಧನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾವು ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯ ಲಕ್ಷ್ಮೀಯೋಜನೆ ಹೆಣ್ಣು ಮಕ್ಕಳು ನೆಮ್ಮದಿಯಿಂದ ಬದುಕಲು ಕಾರಣವಾಗಿದೆ. ಬಸವಣ್ಣ ಹೇಳಿದಂತೆ ಧರ್ಮ ಉಳಿಸುವ ಸಲುವಾಗಿ ಸುಮಾರು 800 ವಷರ್ಗಳ ಇತಿಹಾಸವಿರುವ ಸೋಮಹಳ್ಳಿ ಶ್ರೀಮಠದ ಅಭಿವೃದ್ಧಿಗೆ 1.70 ಲಕ್ಷ ರೂ.,ಅನುದಾನ ನೀಡಿದ್ದೆ. ಮಠಗಳನ್ನು ಉಳಿಸುವ ಕೆಲಸ ಗುರುಗಳದ್ದು ಮುಂದಿನ ಭವಿಷ್ಯಕ್ಕಾಗಿ ಧರ್ಮ ಉಳಿಯಬೇಕು. ಯಾವುದೇ ಜಾತಿ ಮತ ಭೇದವಿಲ್ಲದೆ ಬದುಕುವುದೇ ಲಿಂಗಾಯತ ಧರ್ಮದ ಆಶಯವಾಗಿದೆ. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಒಂದಾಗಿ ಬಾಳಬೇಕು. ಧರ್ಮ ಮಾರ್ಗದಲ್ಲಿ ನಡೆದರೆ ನಾವೆಲ್ಲರೂ ಸುರಕ್ಷಿತವಾಗಿರಬಹುದು. ಭಾರತ ದೇಶ ಯೋಗ ಹಾಗೂ ತ್ಯಾಗ ಪ್ರತೀಕವಾಗಿದೆ. ರಾಮ -ಕೃಷ್ಣ- ಶಿವನ ತಪೋಭೂಮಿಯಾಗಿದ್ದು ವಿದೇಶಿಯರು ಸಹಾ ಕೊಂಡಾಡುವ ಪುಣ್ಯಭೂಮಿಯಾಗಿದೆ. ರಾಷ್ಟ್ರೀಯತೆ ಹಾಗೂ ಹಿಂದೂ ಸಮಾಜದ ರಕ್ಷಣೆ ಇಂದಿನ ಅಗತ್ಯವಾಗಿದೆ. ಯಾವುದೇ ಸರ್ಕಾರಗಳು ಜ್ವಲಂತ ಸಮಸ್ಯೆ ನಡುವೆ ಬಡಿದಾಡುವ ರೈತ ಸಮುದಾಯಕ್ಕೆ ನೆಮ್ಮದಿಯಿಂದ ಬದುಕಲು ಶ್ರಮಿಸಬೇಕು. ಇಡೀ ದೇಶಕ್ಕೆ ಮಾರ್ಗ ದರ್ಶನ ನೀಡ್ತಾ ಇರೋ ನರೇಂದ್ರ ಮೋದಿ ಸಿಕ್ಕಿರೋದು ನಮ್ಮ ಪುಣ್ಯ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಮತ್ತೊಂದು ಬಜೆಟ್ ಮಂಡಿಸುತ್ತಿದ್ದಾರೆ. ಈ ನಾಡಿನ ಅನ್ನದಾತ ರೈತರಿಗೆ, ದೀನದಲಿತರಿಗೆ ಅನುಕೂಲಕರವಾದ ಯೋಜನೆಗಳನ್ನು ಘೋಷಿಸಲಿ. ರಾಜ್ಯದ ಜನ ನೆಮ್ಮದಿಯಾಗಿ ಬದುಕುವ ರೀತಿಯ ಬಜೆಟ್ ಮಂಡಿಸಲಿ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗ್ಯಾರಂಟಿಗಳು ಸರ್ಕಾರಕ್ಕೆ ಭಾರವಾಗುತ್ತಿವೆ ಎಂಬ ಅರ್ಥದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಗ್ಯಾರೆಂಟಿಗಳನ್ನು ಮುಂದುವರೆಸುವ ಇಲ್ಲವೇ ನಿಲ್ಲಿಸುವ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು. ಗುಂಡ್ಲುಪೇಟೆ ಭಾಗದ ಕೆರೆ ನೀರು ತುಂಬಿಸಲು ನಿರ್ಲಕ್ಷ್ಯ ಮಾಡುತ್ತಿರುವ ವಿಚಾರದ ಬಗ್ಗೆ ಸರ್ಕಾರದ ಜತೆಗೆ ಮಾತನಾಡುತ್ತೇನೆ. ಆದಷ್ಟು ಬೇಗ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಸೋಮಹಳ್ಳಿಮಠದ ಸಿದ್ದಮಲ್ಲಸ್ವಾಮೀಜಿ, ಮಾಜಿ ಶಾಸಕ ಎಸ್.ಬಾಲರಾಜು, ಪ್ರೊ. ಕೆ.ಆರ್.ಮಲ್ಲಿಕಾರ್ಜುನಪ್ಪ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಚಾಮುಲ್ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್, ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಕೆ.ಆರ್.ಎ.ಡಿ.ಎಲ್. ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಜಿ.ಪಂ.ಮಾಜಿ ಅಧ್ಯಕ್ಷ ನಾಗೇಂದ್ರ, ವೀರಶೈವಮಹಾಸಭಾದ ತಾಲೂಕು ಅಧ್ಯಕ್ಷ ಕಮರಹಳ್ಳಿ ರವಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಸ್.ಮಧುಶಂಕರ್, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಶಿವನಾಗಪ್ಪ ಸೇರಿದಂತೆ ಅನೇಕರು ಇದ್ದರು.