ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗುಂಡ್ಲುಪೇಟೆ ತಾಲೂಕಿಗೆ ಮೊದಲಿಗಳಾಗಿರುವ ಆರ್.ಪ್ರತಿಭಾಳಿಗೆ ತಂದೆ ರಾಚಪ್ಪ ಡಿ.ರಮೇಶ್ ಮತ್ತು ತಾಯಿ ಪಿ.ಎಂ.ಸುಧಾರಾಣಿ ಸಿಹಿ ತಿನಿಸಿದರು.
ಗುಂಡ್ಲುಪೇಟೆ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಮೊದಲಿಗಳಾಗಿ ಹೊರಹೊಮ್ಮಿರುವ ಆರ್.ಪ್ರತಿಭಾ ರಕ್ಷಣಾ ಇಲಾಖೆಗೆ ಹೋಗುವ ಆಸೆ ವ್ಯಕ್ತಪಡಿದ್ದಾಳೆ.
ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಎನ್‌ಸಿಸಿ ಅಧಿಕಾರಿಯಾಗಿರುವ ರಾಚಪ್ಪ ಡಿ.ರಮೇಶ್ ಮತ್ತು ಹೆಗ್ಗಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಪಿ.ಎಂ.ಸುಧಾರಾಣಿ ಅವರ ಸುಪುತ್ರಿಯಾದ ಈಕೆ ಪ್ರಾಥಮಿಕ ಶಿಕ್ಷಣವನ್ನು ನಂಜನಗೂಡಿನ ಖಾಸಗಿ ಶಾಲೆಯಲ್ಲಿ ಪೂರೈಸಿದರು.
ಪ್ರವೇಶ ಪರೀಕ್ಷೆ ಮೂಲಕ ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ 6 ನೇ ತರಗತಿಗೆ ಪ್ರವೇಶ ಪಡೆದು ಎಲ್ಲ ತರಗತಿಯಲ್ಲೂ ಉತ್ತಮ ಫಲಿತಾಂಶ ಪಡೆದಿದ್ದು, ಇದೀಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 618 ಅಂಕ ಪಡೆಯುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.
ಓದಿನ ಜತೆಗೆ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ಇರುವ ಈಕೆ ಅಥ್ಲೆಟಿಕ್ಸ್‌ನಲ್ಲಿ ಜಿಲ್ಲೆಯನ್ನು ಎರಡು ಬಾರಿ ಪ್ರತಿನಿಧಿಸಿದ್ದಾರೆ. ರಗ್ಬಿ ಸ್ಪರ್ಧೆಯಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಎನ್‌ಸಿಸಿ ನಲ್ಲಿ ಬೆಸ್ಟ್ ಕೆಡೆಟ್ ಪ್ರಶಸ್ತಿ ಸಿಕ್ಕಿದ್ದು ಚಿತ್ರಕಲೆ ರಚನೆಯಲ್ಲೂ ಸಾಧನೆ ಮಾಡುತ್ತಿದ್ದಾರೆ. ರಾಷ್ಟ್ರದ ಬಗ್ಗೆ ಪ್ರೇಮ ಹಾಗೂ ಅಭಿಮಾನ ಹೊಂದಿರುವ ಈಕೆ ಏರೋನಾಟಿಕಲ್ ಇಂಜಿನಿಯರಿಂಗ್ ಕಾಲೇಜ್ ಮುಗಿಸಿ ಮಿಲಿಟರಿ(ಡಿಫೆನ್ಸ್)ಗೆ ಸೇರುವ ಆಸೆ ವ್ಯಕ್ತಪಡಿಸಿದ್ದಾರೆ.
ಪಾಲಕರು ಮತ್ತು ಶಿಕ್ಷಕರ ಸಹಕಾರದಿಂದ ನಾನು ಉತ್ತಮ ಅಂಕಗಳಿಸಲು ಸಾಧ್ಯವಾಗಿದೆ. ಇನ್ನೂ ಹೆಚ್ಚಿನ ಅಂಕಗಳು ಬರುವ ನಿರೀಕ್ಷೆಯಿತ್ತು. ಆದರೆ ಸ್ವಲ್ಪ ಕಡಿಮೆಯಾಗಿರುವುದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.