ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ನಾಯಕ ಸಮುದಾಯ ಭವನದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಗುರುವಾರ ಭೂಮಿಪೂಜೆ ನೆರವೇರಿಸಿದರು. ಜೆ.ಯೋಗೇಶ್, ಕಿನಕಹಳ್ಳಿ ಪ್ರಭುಪ್ರಸಾದ್, ನಂಜೇಗೌಡ, ಕೇಶವಮೂರ್ತಿ, ಶಶಿಕಲಾ ಇದ್ದರು. 
ಚಾಮರಾಜನಗರ

ನನ್ನ ಅವಧಿಯಲ್ಲಿ ಸರ್ವ ಜನಾಂಗಕ್ಕೂ ನ್ಯಾಯ ಒದಗಿಸಿದ್ದೇನೆ

ಯಳಂದೂರು: ಇದೇ 20ರಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ತುಂಬುತ್ತದೆ. ಈ ಅವಧಿಯಲ್ಲಿ ನಾನು ಗ್ಯಾರಂಟಿ ಯೋಜನೆಗಳ ನಡುವೆಯೂ ನೂರಾರು ಕೋಟಿ ರೂ. ಅನುದಾನವನ್ನು ತಂದಿದ್ದು, ನನ್ನ ಕ್ಷೇತ್ರ ವ್ಯಾಪ್ತಿಯ ಸರ್ವ ಜನರಿಗೂ ಸಾಮಾಜಿಕ ನ್ಯಾಯದಡಿಯಲ್ಲಿ ಅನುದಾನವನ್ನು ನೀಡಿದ್ದೇನೆ. ಅಭಿವೃದ್ಧಿಯನ್ನು ಮಾಡಿರುವ ತೃಪ್ತಿ ಇದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಮಾಹಿತಿ ನೀಡಿದರು.
ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ನಾಯಕರ ಸಮುದಾಯ ಭವನದ ಬಳಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಡುಗೆ ಮನೆ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನನ್ನ ಅವಧಿಯಲ್ಲಿ ಪರಿಶಿಷ್ಟ ಜಾತಿ, ವರ್ಗ ಹಾಗೂ ಹಿಂದುಳಿದ ಉಪ್ಪಾರ, ಕುರುಬ, ಕುಂಬಾರ, ಸವಿತಾ ಸೇರಿದಂತೆ ಎಲ್ಲ ಸಮುದಾಯಗಳ ಭವನಗಳಿಗೆ, ರಸ್ತೆ ಚರಂಡಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಪ್ರತಿ ಸಮುದಾಯಗಳಿಗೂ ಸರ್ಕಾರದ ವಿವಿಧ ಕ್ಷೇತ್ರಗಳಲ್ಲಿ ನಾಮ ನಿರ್ದೇಶನ, ಪಕ್ಷದಲ್ಲಿ ಸ್ಥಾನಗಳನ್ನು ನೀಡಲಾಗಿದೆ. ಕ್ಷೇತ್ರದಲ್ಲಿ ನಾಯಕ ಸಮುದಾಯದ ಬಡಾವಣೆಗಳ ಅಭಿವೃದ್ಧಿಗೆ 8 ಕೋಟಿ ರೂ. ಹೆಚ್ಚು ಅನುದಾನದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈ ಸಮುದಾಯದ ಭವನಗಳಿಗೆ 3 ಕೋಟಿ ರೂ. ಅನುದಾನ ನೀಡಲಾಗಿದೆ. ಕ್ಷೇತ್ರದ ಕುರುಬ ಸಮುದಾಯದ ಅಭಿವೃದ್ಧಿ ಕಾಮಗಾರಿಗಳಿಗೂ 10 ಕೋಟಿ ರೂ. ಅನುದಾನವನ್ನು ನೀಡಲಾಗಿದೆ ಎಂದು ವಿವರಿಸಿದರು.
ಬಿಳಿಗಿರಿರಂಗನಬೆಟ್ಟದ ನಾಯಕ ಸಮುದಾಯ ಭವನಕ್ಕೆ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದ್ದು ಇದು ಈ ಭಾಗದ ಅನೇಕ ಜನರ ಬೇಡಿಕೆಯಾಗಿತ್ತು. ಈಗ ಇದು ಈಡೇರಿದೆ. ಇದರೊಂದಿಗೆ ದೇಗುಲದ ಮೆಟ್ಟಿಲುಗಳ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಈಗಿದ್ದ ಬಸ್ ನಿಲ್ದಾಣವನ್ನು ಕೆಎಸ್‌ಆರ್‌ಟಿಸಿ ವತಿಯಿಂದ ಅಭಿವೃದ್ದಿಪಡಿಸಲಾಗಿದೆ. ಇಲ್ಲಿಗೆ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲು ಕ್ರಮ ವಹಿಸಲಾಗಿದೆ. ಇದೊಂದು ಧಾರ್ಮಿಕ, ಪೌರಾಣಿಕ, ಪ್ರವಾಸಿ ತಾಣವಾಗಿದ್ದು ಇದರ ಸರ್ವತೋಮುಖ ಅಭಿವೃದ್ಧಿಗೆ ನಾನು ಅಹರ್ನಿಶಿ ದುಡಿಯಲು ಸಿದ್ಧನಾಗಿದ್ದೇನೆ. ಅಲ್ಲದೆ ಇಲ್ಲಿಗೆ ಬರುವ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕದ 10 ಲಕ್ಷ ರೂ. ಕಾಮಗಾರಿಯೂ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು ಮಾತನಾಡಿ, ಬಿಳಿಗಿರಿರಂಗನ ಬೆಟ್ಟದಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಹೆಚ್ಚಾಗಿತ್ತು. ಎ.ಆರ್.ಕೃಷ್ಣಮೂರ್ತಿ ಶಾಸಕರಾದ ಮೇಲೆ ಬಿಳಿಗಿರಿರಂಗನ ಬೆಟ್ಟವನ್ನು ಮಾದರಿ ಕ್ಷೇತ್ರ ಮಾಡಲು ಪಣ ತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಇವರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಈ ಸಮುದಾಯ ಭವನಕ್ಕೆ ವಿ.ಶ್ರೀನಿವಾಸ್ ಪ್ರಸಾದ್ ಅನುದಾನ ನೀಡಿದ್ದು ಬಿಟ್ಟರೆ ಯಾರೂ ಹಣ ನೀಡಿರಲಿಲ್ಲ. ಈಗ 25 ಲಕ್ಷ ರೂ. ಹಣವನ್ನು ಹಾಕಿ ಅಡುಗೆ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಬೆಟ್ಟ ಇನ್ನಷ್ಟು ಪ್ರಗತಿ ಕಾಣಲಿದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಜೆ.ಯೋಗೇಶ್, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ನಂಜೇಗೌಡ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಕೇಶವಮೂರ್ತಿ, ಪಿಡಿಒ ಶಶಿಕಲಾ, ಜೆಇ ನಂದೀಶ್, ಗ್ರಾಪಂ ಮಾಜಿ ಅಧ್ಯಕ್ಷ ಪ್ರತೀಪ್‌ಕುಮಾರ್, ಶ್ರೀನಿವಾಸ್ ಸೋಮಣ್ಣ, ನಾಗೇಶ್‌ನಾಯಕ, ನಾಗೇಂದ್ರ, ನಾಗರಾಜು, ಮಹದೇವಪ್ರಸಾದ್, ವೆಂಕಟೇಶ್, ರಾಘು, ಮಾದೇಶ್, ಜಯಣ್ಣ, ನಾಗರಾಜು, ಸೇರಿದಂತೆ ಅನೇಕರು ಇದ್ದರು.