ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು. ಎಚ್.ವಿ.ಚಂದ್ರು, ಕಿನಕಹಳ್ಳಿ ಪ್ರಭುಪ್ರಸಾದ್, ಮಹದೇವಸ್ವಾಮಿ, ಆರ್.ಪುಟ್ಟಬಸವಯ್ಯ, ಕಮರವಾಡಿ ರೇವಣ್ಣ, ಚಿಕ್ಕಲಿಂಗಯ್ಯ ಇತರರು ಇದ್ದರು.  
ಚಾಮರಾಜನಗರ

ಸಾರ್ವಜನಿಕರ ಅಹವಾಲು ಸ್ವೀಕರಿಸಲು ನಾನು ಸದಾ ಸಿದ್ಧ

ಎಂ.ರವಿ

ಯಳಂದೂರು:

ತಾಲೂಕಿನ ಹೊನ್ನೂರು ಹಾಗೂ ಕೆಸ್ತೂರು ಗ್ರಾಮದ ವಿವಿಧ ಸಮುದಾಯದ ರಸ್ತೆ, ಚರಂಡಿ ಅಭಿವೃದ್ಧಿಗೆ 1.70 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಶುಕ್ರವಾರ ಚಾಲನೆ ನೀಡಿದರು.

ನಮ್ಮ ಭಾಗದ ನೀರಾವರಿ ಯೋಜನೆಗಳಿಗೆ ಅನುದಾನವನ್ನು ನೀಡಿ ಹಲವು ದಶಕಗಳೇ ಕಳೆದಿವೆ. ಇಲ್ಲಿಗೆ ಮತ್ತಷ್ಟು ಅನುದಾನ ತರುವ ನಿಟ್ಟಿನಲ್ಲಿ ಪ್ರಯತ್ನ ನಿರಂತರವಾಗಿರುತ್ತದೆ ಎಂದರು.

ನಾನು ಜನರಿಂದ ಆಯ್ಕೆಯಾಗಿದ್ದು ಜನರ ಕಾಯಕ ನನ್ನ ನಿತ್ಯ ಕೆಲಸವಾಗಿದೆ. ಯಾವುದೇ ಧರ್ಮ, ಜಾತಿ ತಾರತಮ್ಯ ಮಾಡದೆ ಎಲ್ಲರಿಗೂ ಅನುದಾನವನ್ನು ನಾನು ನೀಡುತ್ತೇನೆ. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ನಾನು ಸದಾ ಸಿದ್ಧನಿದ್ದೇನೆ. ಯಳಂದೂರಿನಲ್ಲಿ 33 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಸ್ಪತ್ರೆ ಕಾಮಗಾರಿ ಮುಗಿಯುವ ಹಂತದಲ್ಲಿದ್ದು ಶೀಘ್ರದಲ್ಲೇ ಇದನ್ನು ಉದ್ಘಾಟಿಸಲಾಗುವುದು. ಇದರೊಂದಿಗೆ ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಾಗುವುದು ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು ಮಾತನಾಡಿ, ಶಾಸಕರು ಒಟ್ಟು 3 ಸರ್ಕಾರಿ ಪಬ್ಲಿಕ್ ಶಾಲೆಯನ್ನು ತಂದಿದ್ದಾರೆ. ಇದರೊಂದಿಗೆ ಇನ್ನೂ 3 ಶಾಲೆಗಳಿಗೂ ಬೇಡಿಕೆ ಸಲ್ಲಿಸಿದ್ದು ಅದೂ ಮಂಜೂರಾಗುವ ಭರವಸೆಯನ್ನು ನೀಡಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಯ ಪ್ರತಿ ಪಂಚಾಯಿತಿಗೂ ಮಾಸಿಕ 2 ರಿಂದ 3 ಕೋಟಿ ರೂ. ಲಭಿಸುತ್ತಿದ್ದು ಜನರ ಜೀವನ ಮಟ್ಟ ಸುಧಾರಿಸಿದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಕೆಸ್ತೂರು ಗ್ರಾಮದ ಪ್ರೊ.ಮಹೇಶ್ ಮಾತನಾಡಿದರು. ಪಿಡಿಒ ನಿರಂಜನ್, ಮಹದೇವಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ನಿರಂಜನ್, ಗ್ರಾಪಂ ಮಾಜಿ ಅಧ್ಯಕ್ಷ ಗುರುಪ್ರಸಾದ್, ಮಹದೇವಸ್ವಾಮಿ ಮಾಜಿ ಸದಸ್ಯ ಆರ್.ಪುಟ್ಟಬಸವಯ್ಯ, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಎಇಇ ಚಿಕ್ಕಲಿಂಗಯ್ಯ, ಚಂದ್ರಶೇಖರ್, ಆನಂದ. ಮಹೇಶ್, ಡಿ.ಎನ್.ನಾಗರಾಜು, ರಾಜಣ್ಣ ಇತರರು ಇದ್ದರು.