ಮಂಗಲ ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಸಾಹೇಬಗೌಡ ಮಾತನಾಡಿದರು. ಮಲ್ಲಾರಾಧ್ಯ, ಪ್ರಭು, ಕೆಂಪಣ್ಣ, ಮುನಾವರ್ ಪಾಷ ಇತರರಿದ್ದರು.
ಹನೂರು: ತಾಲೂಕಿನ ಮಂಗಲ ಗ್ರಾಮದ ಕೋಣನ ಮಾರಮ್ಮನ ದೇಗುಲದ ಆವರಣದಲ್ಲಿ ಮಂಗಳವಾರ ಸಂಜೆ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ವಿವಿಧ ಸಮುದಾಯದ ಜನಸಂಪರ್ಕ ಸಭೆಯಲ್ಲಿ ಮದ್ಯ ಅಕ್ರಮ ಮಾರಾಟ ತಡೆಗಟ್ಟುವಂತೆ ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸಿದರು.
ಗ್ರಾಮಸ್ಥ ಶಿವಣ್ಣ ಮಾತನಾಡಿ, ಸಂಜೆಯಾಗುತ್ತಿದ್ದಂತೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣವನ್ನು ಕೆಲವರು ಕುಡುಕರ ಅಡ್ಡೆಯಾಗಿ ಮಾಡಿಕೊಳ್ಳುತ್ತಿದ್ದು, ಮದ್ಯದ ಬಾಟಲಿ, ಪೌಚ್‌ಗಳನ್ನು ಅಲ್ಲಿಯೇ ಬಿಸಾಡುತ್ತಾರೆ. ಕುಡುಕರ ಹಾವಳಿಯಿಂದ ಓಡಾಡಲು ಕಿರಿಕಿರಿಯಾಗಿದೆ ಎಂದು ದೂರಿದರು.
ಶಾಲೆಯ ಮುಂಭಾಗ ಹೋಟೆಲ್ ಹಾಗೂ ಅಂಗಡಿಯ ತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ಅನೈರ್ಮಲ್ಯ ನಿರ್ಮಾಣವಾಗಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಬಗ್ಗೆ ಕಡಿವಾಣ ಅಗತ್ಯವಾಗಿದೆ ಎಂದು ಸದಾನಂದ ಆಗ್ರಹಿಸಿದರು.
ಗ್ರಾಮದ ಬಹುತೇಕ ಪೆಟ್ಟಿಗೆ ಅಂಗಡಿ ಹಾಗೂ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿದೆ. ಇದು ಗ್ರಾಮದ ಅಶಾಂತಿಗೆ ಕಾರಣವಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಪ್ರಭುಸ್ವಾಮಿ ಹಾಗೂ ಇನ್ನಿತರರು ಒತ್ತಾಯಿಸಿದರು.
ಅಗತ್ಯ ಭರವಸೆ: ಸಬ್ ಇನ್‌ಸ್ಪೆಕ್ಟರ್ ಸಾಹೇಬಗೌಡ ಮಾತನಾಡಿ, ಸಂಜೆಯಾಗುತ್ತಿದ್ದಂತೆಯೇ ಸರ್ಕಾರಿ ಶಾಲೆಗೆ ಗಸ್ತು ಹೆಚ್ಚಿಸಲಾಗುವುದು. ಕುಡುಕರು ಸಿಕ್ಕಿಬಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು. ತ್ಯಾಜ್ಯ ಕಡಿವಾಣ ಸಂಬಂಧ ಪಿಡಿಒ ಅವರ ಗಮನಕ್ಕೆ ತರಲಾಗುವುದು. ಅಕ್ರಮ ಮದ್ಯ ಮಾರಾಟ ಕಡಿವಾಣಕ್ಕೆ ಹೆಚ್ಚಿನ ನಿಗಾ ವಹಿಸಲಾಗುವುದು. ಈ ಬಗ್ಗೆ ಕೂಡಲೇ ಅಗತ್ಯ ಕ್ರಮವಹಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಇಲಾಖೆಯು ಜಾರಿಗೊಳಿಸಿರುವ ಲಾಕ್ಡ್ ಹೌಸ್ ಸಿಸ್ಟಮ್, ಆಸರೆ ಹಾಗೂ ಸನ್ಮಿತ್ರ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಗ್ರಾಮಸ್ಥರಿಗೆ ತಿಳಿಸಲಾಯಿತು.
ಸಭೆಯಲ್ಲಿ ಮುಖಂಡರಾದ ಮಲ್ಲಾರಾಧ್ಯ, ಕೆಂಪಣ್ಣ, ಪ್ರಭು, ಮಿಣಜೇಗೌಡ, ಮುನಾವರ್ ಪಾಷ, ಪ್ರಕಾಶ್, ಮಲ್ಲಿಕಾರ್ಜುನ, ಮಹೇಶ್, ಪೊಲೀಸ್ ಸಿಬ್ಬಂದಿ ಸುರೇಶ್, ಪ್ರಕಾಶ್, ವಿಶ್ವನಾಥ್ ಮತ್ತಿತರರು ಹಾಜರಿದ್ದರು.