ಗುಂಡ್ಲುಪೇಟೆ ತಾಲೂಕಿನ ಹುಂಡೀಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಕೃತಿ ಸಂರಕ್ಷಣಾ ಕಾರ್ಯಕ್ರಮವನ್ನು ಆರ್.ಕೆ.ಮಧು ಉದ್ಘಾಟಿಸಿದರು. ಮಂಜುನಾಥ್ ಹಾಗೂ ವಿದ್ಯಾರ್ಥಿಗಳು ಇದ್ದಾರೆ. 
ಚಾಮರಾಜನಗರ

ಮಾನವ-ವನ್ಯಜೀವಿ ಸಹಬಾಳ್ವೆ ಅನಿವಾರ್ಯ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • Human-wildlife
ಗುಂಡ್ಲುಪೇಟೆ: ಕಾಡಂಚಿನ ಗ್ರಾಮಗಳಲ್ಲಿ ಮಾನವ ವನ್ಯಜೀವಿಗಳ ಸಂಘರ್ಷ ಹೆಚ್ಚಾಗುತ್ತಿದ್ದರೂ ಸಹಬಾಳ್ವೆ ನಡೆಸುವುದು ಅನಿವಾರ್ಯವಾಗಿದೆ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಹೇಳಿದರು.
ತಾಲೂಕಿನ ಹುಂಡೀಪುರ ಗ್ರಾಮದಲ್ಲಿ ಎಚ್.ಕೆ. ಶಿವರುದ್ರಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಕೃತಿ ಸಂರಕ್ಷಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಂಡೀಪುರದ ಕಾಡಂಚಿನಲ್ಲಿರುವ ಹುಂಡಿಪುರ ಗ್ರಾಮವು ಪ್ರಕೃತಿಯ ಮಡಿಲಲ್ಲಿದ್ದು, ಈ ಪರಿಸರವನ್ನು ಮುಂದಿನ ಜನಾಂಗಕ್ಕೆ ತಲುಪುವಂತೆ ಮಾಡಲು ಸಂರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಹೊಣೆಯಾಗಿದೆ. ಹಿಂದಿನಿಂದಲೂ ಕಾಡಂಚಿನ ಹಾಗೂ ಅರಣ್ಯದೊಳಗೆ ನೆಲೆಸಿದ್ದ ಜನರು ವನ್ಯಜೀವಿಗಳ ಜತೆ ಸಹಬಾಳ್ವೆ ನಡೆಸಿದ್ದರಿಂದಲೇ ಬಂಡೀಪುರದಲ್ಲಿ ವನ್ಯಜೀವಿಗಳ ಸಂತತಿ ಹೆಚ್ಚಾಗಿದೆ. ಗ್ರಾಮವು ಕಾಡಿಗೆ ಸಮೀಪವಿರುವುದರಿಂದ ಒಂದಲ್ಲ ಒಂದು ಸಂಘರ್ಷ ನಡೆಯುತ್ತಲೇ ಇರುತ್ತವೆ. ಆದರೂ ಪ್ರಕೃತಿಯೊಡನೆ ಸಹಬಾಳ್ವೆಯಲ್ಲಿ ಮಾನವನ ಏಳಿಗೆ ಇದೆ ಎಂದರು.
ಕೇರಳಕ್ಕೆ ರಸ್ತೆಗೆ ಪರ್ಯಾಯವಾಗಿ ಸುರಂಗ ಮಾರ್ಗ ನಿರ್ಮಾಣ ಮಾಡುವುದರಿಂದ ಭಾರೀ ಅಪಾಯವಾಗಲಿದೆ. ಪ್ರಕೃತಿಗೆ ವಿರುದ್ಧವಾಗಿ ಮಾಡುವ ಯಾವುದೇ ಕೃತ್ಯ ವಿನಾಶಕಾರಿಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಪರಿಸರದಲ್ಲಿ ವನ್ಯಜೀವಿಗಳ ಪಾತ್ರ, ಕಾಡಿನ ಮಹತ್ವವವನ್ನು ತಾವೇ ಸೆರೆಹಿಡಿದ ಛಾಯಾಚಿತ್ರಗಳ ಮೂಲಕ ವಿವರಿಸಿದರು. ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.