ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸಾರಿಗೆ ತೆರಳಿದ್ದ ವನ್ಯಜೀವಿ ಛಾಯಾಗ್ರಾಹಕ ಸ್ನೇಕ್ ರಾಘು ತೆಗೆದಿರುವ ಕಾಡಾನೆಗಳ ಚಿತ್ರ 
ಚಾಮರಾಜನಗರ

ಮನುಜನ ನಡೆ ಒತ್ತಡದಲ್ಲಿ ‘ಗಜಪಡೆ’

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಆನೆಗಳ ಸಂತತಿ ಹೆಚ್ಚಳದಿಂದಷ್ಟೇ ಸಂಘರ್ಷ ಏರ್ಪಡುತ್ತಿಲ್ಲ
  • ಸುಧಾರಣೆಯಾಗದ ಆವಾಸ ಸ್ಥಳ, ಪರಿಣಾಕಾರಿಯಾಗದ ಕಾರ್ಯತಂತ್ರದ ಅನುಷ್ಠಾನ

ಚಾಮರಾಜನಗರ:

ಮೊದಲು ‘ಆನೆ ನಡೆದ್ದಿದ್ದೇ ದಾರಿ’ಯಾಗಿತ್ತು..ಆದರೆ ಈಗ ‘ಮನುಜ ನಡೆದದ್ದೇ ದಾರಿ’ಯಾಗಿ ಬಿಟ್ಟಿದೆ. ಇದರಿಂದ ಆವಾಸ ಸ್ಥಳಗಳನ್ನು ಕಳೆದುಕೊಳ್ಳುತ್ತಿರುವ ಗಜಪಡೆ ಒತ್ತಡಕ್ಕೆ ಸಿಲುಕಿಕೊಳ್ಳುತ್ತಿದೆ.

ರಾಜ್ಯದಲ್ಲಿ ಆನೆ-ಮಾನವ ಸಂಘರ್ಷಕ್ಕೆ ಗಜಪಡೆ ಸಂತತಿ ಹೆಚ್ಚಳವಾಗಿದೆ ಎನ್ನುವುದರ ಹೊರತಾಗಿಯೂ ಕೆಲವು ವಿಷಯಗಳಿವೆ. ಅರಣ್ಯ ಒತ್ತುವರಿ, ಕಾರಿಡಾರ್‌ಗಳ ಕಣ್ಮರೆ, ಆನೆ ದಾರಿಯಲ್ಲಿ ಮಾನವನ ಸವಾರಿ, ಹವಾಮಾನ ಬದಲಾವಣೆ, ಮಳೆ ಕೊರತೆ, ಅಭಿವೃದ್ಧಿ ಚಟುವಟಿಕೆಗಳು ಆನೆಗಳ ಸಹಜ ಜೀವನದ ಮೇಲೆ ಒತ್ತಡವನ್ನುಂಟು ಮಾಡಿ ಅಸಹಜವಾದ ಪರಿಣಾಮವನ್ನುಂಟು ಮಾಡುತ್ತಿವೆ.
ಆಹಾರ ಮತ್ತು ನೀರಿಗಾಗಿ ಕಾಡಿನಿಂದ ನಾಡಿಗೆ ಬರುತ್ತಿವೆ. ಈ ವೇಳೆ ಮಾನವನೊಂದಿಗೆ ಸಂಘರ್ಷಕ್ಕೆ ಸಿಲುಕಿ ಎರಡೂ ಕಡೆ ಜೀವ ಹಾನಿಗಳಾಗುತ್ತಿವೆ. ಕಳೆದ ವರ್ಷ ರಾಜ್ಯದಲ್ಲಿ ಮೃತಪಟ್ಟ 100 ಆನೆಗಳಲ್ಲಿ 84 ಸಹಜ ಸಾವುಗಳಾಗಿವೆ. ಜಮೀನಿನ ಬೇಲಿಯ ವಿದ್ಯುತ್ ಸ್ಪರ್ಶದಿಂದ ಹಾಸನ-4, ಕೊಡಗು-2, ಮೈಸೂರು-2, ಬೆಂಗಳೂರು-2, ಬೆಳಗಾವಿ-2 ಆನೆಗಳು, ಚಿಕ್ಕಮಗಳೂರು-1, ಕೆನರಾ-1 ಸೇರಿ ಒಟ್ಟು 16 ಆನೆಗಳು ಅಸಹಜ ಸಾವಿಗೀಡಾದವು. ಈ ವರ್ಷ 11 ಆನೆಗಳ ಸಹಜ ಸಾವಾಗಿದೆ. ಅದೃಷ್ಟವಶಾತ್ ವಿದ್ಯುತ್ ಸ್ಪರ್ಶದಿಂದ ಆನೆಗಳ ಮರಣವಾಗಿಲ್ಲ. ಆದರೆ ಆನೆಗಳ ದಾಳಿಗೆ ಮನುಷ್ಯರ ಬಲಿಯಾಗಿರುವುದು ದುರಾದೃಷ್ಟ.
ಈ ವರ್ಷ ಕೊಡಗು, ಹಾಸನ, ಬೆಳ್ತಂಗಡಿ, ಚಾಮರಾಜನಗರ ಜಿಲ್ಲೆಗಳಲ್ಲಿ ಆನೆಗಳ ದಾಳಿಗೆ ಮಾನವರು ಮೃತಪಟ್ಟಿದ್ದಾರೆ. ಕೊಡಗಿನ ದುಬಾರೆಗೆ ಪ್ರವಾಸಕ್ಕೆ ಬಂದು ಮಹಿಳೆ ಸಾಕಾನೆ ದಾಳಿ ಉಸಿರು ಚೆಲ್ಲಿದ ಪ್ರಕರಣ, ಚಾಮರಾಜನಗರದ ಮಲೆಮಹದೇಶ್ವರ ವನ್ಯಜೀವಿಧಾಮದ ಕಾಡು ಕಾಯುವ ವಾಚರ್ ಮಹದೇವಸ್ವಾಮಿ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಹೆಚ್ಚು ಸದ್ದು ಮಾಡಿದವು. ಕೊಡಗು, ಹಾಸನ ಜಿಲ್ಲೆಗಳ ಕಾಫಿ ತೋಟ ಮತ್ತು ಇತರೆ ಕಡೆಗಳಲ್ಲಿ ಬೆಳೆ ಹಾನಿ ದೊಡ್ಡ ನಷ್ಟವನ್ನುಂಟು ಮಾಡುತ್ತಿದೆ.
ಪರಿಣಾಮಕಾರಿ ಅನುಷ್ಠಾನ
ಪುಂಡಾನೆಗಳ ಸೆರೆ ಕಾರ್ಯಾಚರಣೆ, ರೇಡಿಯೋ ಕಾಲರ್ ಅಳವಡಿಕೆ, ಕಾಡು-ನಾಡಿನ ನಡುವೆ ಆನೆ ಕಂದಕ ನಿರ್ಮಾಣ, ಸೌರಬೇಲಿ, ರೈಲ್ವೆ ಕಂಬಿಗಳ ನಿರ್ಮಾಣ, ವೈಜ್ಞಾನಿಕ ಮೇಲ್ವಿಚಾರಣೆ ಕಾಡಾನೆಗಳ ಹಾವಳಿ ತಡೆಯಲು ಉತ್ತಮ ಪ್ರಯತ್ನಗಳಾಗಿವೆ. ಆದರೆ ಹಲವು ಕಡೆ ಇವು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ.
ಆನೆ ಕಂದಕಗಳು ಸರಾಗವಾಗಿ ಸಾಗುವ ದಾರಿಗಳಾಗಿಬಿಟ್ಟಿವೆ. ಕಾಡಂಚಿನ ಗ್ರಾಮಗಳಿಗೆ ಆನೆಗಳು ಬಂದರೆ ಅವುಗಳನ್ನು ಹಿಮ್ಮೆಟ್ಟಿಸುವ ರೈತರಿಗೆ ಪಟಾಕಿಯನ್ನೂ ಕೊಡುತ್ತಿಲ್ಲವೆಂಬ ಆರೋಪವಿದೆ. ಸೆರೆ ಹಿಡಿದ ಪುಂಡಾನೆಗಳನ್ನು ದಟ್ಟಾರಣ್ಯಕ್ಕೆ ಬಿಡುವ ಬದಲು ಜನವಸತಿ ಇರುವ ಅರಣ್ಯಕ್ಕೆ ಬಿಡುವುದು, ರೇಡಿಯೋ ಕಾಲರ್ ಹಾಕಿದ ಆನೆಗಳ ಮೇಲೆ ಸಡಿಲವಾದ ನಿಗಾವಹಿಸುವಿಕೆ, ಅರಣ್ಯದಲ್ಲಿ ಆನೆಗೆ ಬೇಕಾದ ಆಹಾರ ಬೆಳೆಯುವ ಜಾಗದಲ್ಲಿ ಕಳೆ ಸಸ್ಯಗಳು ಬೇರೂರಿರುವುದು, ಅರಣ್ಯ ಇಲಾಖೆಯಿಂದ ರೈತರ ಜಮೀನುಗಳಿಗೆ ಸೋಲಾರ್ ಅಳವಡಿಕೆಗೆ ದೊರೆಯುವ ನೆರವಿನ ಕುರಿತು ಪ್ರಚಾರವಿಲ್ಲದೆ ಇರುವುದು. ನಿರುಪಯುಕ್ತವಾದ ಸೌರ ಬೇಲಿಗಳು, ಬಲಗೊಳ್ಳದ ತಡೆಗೋಡೆಗಳು, ಬೆಳೆ ನಷ್ಟವಾದ ರೈತರಿಗೆ ಸೂಕ್ತ ಪರಿಹಾರ ನೀಡುವ ವ್ಯವಸ್ಥೆ ಬಲಗೊಳ್ಳಬೇಕಾಗಿದೆ. ಆನೆ ಕಾರ್ಯ ಪಡೆಗಳ ಸಂಖ್ಯೆ ಹೆಚ್ಚಳ, ಆನೆ ಉಪಟಳದ ಪ್ರದೇಶದ ಜನರ ಜೀವನೋಪಾಯಕ್ಕೆ ದಾರಿ ಮಾಡಿಕೊಡಬೇಕಾಗಿದೆ. ಇನ್ನು ಕಾಡಾನೆಗಳ ಉಪಳಟ ತಡೆಗೆ ಜೇನು ಪೆಟ್ಟಿಗೆ ಬೇಲಿ ಇಡುವ ವಿಷಯದಿಂದ ಹಿಡಿದು ಹಿಂದಿನ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದ ವನ್ಯಜೀವಿಗಳಿಗೆ ಸಂತಾನ ಶಕ್ತಿ ಹರಣ ಶಸಚಿಕಿತ್ಸೆ ಸಾರ್ವಜನಿಕ ವಲದಯ ಚರ್ಚೆಗಳಾಗಿ ಉಳಿದಿವೆ.
ಎಐ ಕಣ್ಗಾವಲು ಏನಾಯ್ತು..?:
ದೇಶದಲ್ಲೇ ಮೊದಲ ಬಾರಿಗೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ವಲಯದ ಆಯಕಟ್ಟಿನ ಎತ್ತರದ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ‘ಎಐ ಆಧಾರಿತ ಥರ್ಮಲ್ ಕ್ಯಾಮರಾ’ಗಳನ್ನು 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಳವಡಿಸಲಾಗಿದೆ. ಇದು 360 ಡಿಗ್ರಿ ಕೋನದಲ್ಲಿ ವನ್ಯಜೀವಿಗಳ ಇರುವಿಕೆ, ಚಲನವಲನ ಪತ್ತೆ ಹಚ್ಚುತ್ತದೆ. ಪ್ರಾಣಿಗಳ ನಿಖರ ಜಿಪಿಎಸ್ ಲೊಕೇಷನ್ ಮಾಹಿತಿಯನ್ನು ಅರಣ್ಯಾಧಿಕಾರಿಗಳ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ರವಾನಿಸುತ್ತದೆ. ಇದರಿಂದ ಪ್ರಾಣಿಗಳ ಗಡಿದಾಟಿ ನಾಡಿಗೆ ಬರುವುದನ್ನು ತಡೆಯಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ತಂತ್ರಜ್ಞಾನ ಅಷ್ಟು ಪರಿಣಾಕಾರಿಯಾಗಿ ಬಳಕೆಗೆ ಬರುತ್ತಿಲ್ಲ. ಇನ್ನೂ ಹೆಚ್ಚಿನ ಅಪ್ಡೇಟ್‌ನ ಅವಶ್ಯಕತೆ ಇದೆ ಎಂದು ಗೋಪಾಲಸ್ವಾಮಿ ಬೆಟ್ಟ ವಲಯದ ಆರ್‌ಎ್ಒ ಸತೀಶ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಆನೆ ಸಂತತಿಯ ಹೆಚ್ಚಳ:
ರಾಜ್ಯದ ಸಮೃದ್ಧ ಅರಣ್ಯ ಆನೆ ಸಂತತಿಯ ಹೆಚ್ಚಳಕ್ಕೆ ಉತ್ತಮ ನೆಲೆಯಾಗಿದೆ. ದೇಶದಲ್ಲಿ ಆನೆಗಳ ಆವಾಸ ಸ್ಥಳವಾಗಿ ಕರ್ನಾಟಕ ನಂ.1 ಸ್ಥಾನದಲ್ಲಿದೆ. 5 ವರ್ಷಗಳಿಗೊಮ್ಮೆ ನಡೆಯುವ ಗಣತಿ ಪ್ರಕಾರ 2017ರಲ್ಲಿ ರಾಜ್ಯದಲ್ಲಿ ಸುಮಾರು 6049 ಆನೆಗಳಿದ್ದವು, 2023ರಲ್ಲಿ 6,395ಕ್ಕೆ ಏರಿಕೆ ಕಂಡಿದೆ. 2012ರ ಆಗಸ್ಟ್ 12ರಿಂದ ವಿಶ್ವ ಆನೆ ದಿನ ಆಚರಣೆ ಮಾಡಲಾಗುತ್ತಿದೆ. ಆನೆಗಳ ಸಹಾಯಕ್ಕೆ ಜಗತ್ತನ್ನು ಒಟ್ಟುಗೂಡಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ.
ಆನೆ-ಮಾನವ ಸಂಘರ್ಷ ತಡೆಗೆ ಸಹಬಾಳ್ವೆಯೂ ಮಂತ್ರವಾಗಬೇಕು. ಕಾಡಂಚಿನ ಜಮೀನುಗಳಲ್ಲಿ ಆನೆಗಳನ್ನು ಆಕರ್ಷಿಸುವ ಬೆಳೆಗಳ ಬದಲು ಲಾಭದಾಯಕವೂ ಆಗಿರುವ ಬೇರೆ ಬೆಳೆಗಳನ್ನು ಬೆಳೆಯಬಹುದು.
ರಘುರಾಮ್, ವನ್ಯಜೀವಿ ಸಂರಕ್ಷಕ, ಗುಂಡ್ಲುಪೇಟೆ
ಆನೆಗಳು ಕಾಡಿನಿಂದ ನಾಡಿಗೆ ಬರುವುದನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡ ಮೇಲೂ ಕೆಲವೊಮ್ಮೆ ಬಂದುಬಿಡುತ್ತವೆ. ಅವುಗಳನ್ನು ಜನರೇ ಹಿಮ್ಮೆಟ್ಟಿಸುವ ಅಪಾಯಕ್ಕೆ ಕೈಹಾಕದೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವುದರಿಂದ ಸಂಘರ್ಷ ತಡೆಯಲು ಸಾಧ್ಯವಾಗುತ್ತದೆ.
ಎಲ್.ನಂದೀಶ್, ನಿರ್ದೇಶಕ, ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಗುಂಡ್ಲುಪೇಟೆ