ಚಾಮರಾಜನಗರದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ನಗರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಭೇಟಿ ನೀಡಿದ್ದ ಸಂದರ್ಭದಲ್ಲಿ ನಿವೇಶನ ಸೌಲಭ್ಯ ಒದಗಿಸಿಕೊಡಿ ಎಂದು ಸಾರ್ವಜನಿಕರು ಮನವಿ ಮಾಡಿದರು. 
ಚಾಮರಾಜನಗರ

ವಸತಿ ಸೌಲಭ್ಯ, ಆಗದಿರಲಿ ಅಲಭ್ಯ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ನಿವೇಶನ ರಹಿತರು, ಮನೆ ಇಲ್ಲದವರಿಗೆ ಸವಲತ್ತು ಒದಗಿಸಿಕೊಡಲು ಮನವಿ
  • ಭೂಮಿ ದರ ಏರಿಕೆಯಿಂದಾಗಿ ಸರ್ಕಾರಗಳ ಯೋಜನೆಯನ್ನೇ ಎದುರು ನೋಡುತ್ತಿರುವ ಜನರು
ಚಾಮರಾಜನಗರ: ಜಿಲ್ಲೆಯಲ್ಲಿರುವ ವಸತಿ ರಹಿತರಿಗೆ ಸ್ವಂತ ನಿವೇಶನ ಮತ್ತು ಮನೆ ನಿರ್ಮಾಣ ಕನಸಾಗಿಯೇ ಉಳಿದಿದ್ದು, ಸರ್ಕಾರದ ಸೌಲಭ್ಯಗಳನ್ನೇ ಎದುರು ನೋಡುತ್ತಿದ್ದಾರೆ.
ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಹನೂರು, ಕೊಳ್ಳೇಗಾಲ ತಾಲೂಕುಗಳಲ್ಲಿ ಮನೆ ರಹಿತರು ಮತ್ತು ನಿವೇಶನ ರಹಿತರು ಇದ್ದಾರೆ. ಬಡತನದ ಕಾರಣಕ್ಕೆ ಸ್ವಂತ ಸೂರು ಕಲ್ಪಿಸಿಕೊಳ್ಳಲಾಗದ ಜನರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನೇ ಅವಲಂಬಿಸಿದ್ದಾರೆ.
ಮೇ 16ರಂದು ಚಾಮರಾಜನಗರದ ಎಪಿಜೆ ಅಬ್ದುಲ್ ಕಲಾಂ ನಗರಕ್ಕೆ ರೇಷ್ಮೆ, ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಭೇಟಿ ನೀಡಿದ್ದಾಗ ಬಡಾವಣೆಯ ನಿವಾಸಿಗಳು ನಿವೇಶನದ ಸೌಲಭ್ಯ ನೀಡಿ ಎಂದು ಮನವಿ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಬಡಜನರಿಗೆ ನಿವೇಶನ ಹಂಚಿಕೆ ಮಾಡದೆ ಇರುವುದು ಸ್ವಂತ ವಸತಿ ಹೊಂದುವುದಕ್ಕೆ ಸಾಧ್ಯವಾಗುತ್ತಿಲ್ಲ. ಮನೆ ನಿರ್ಮಾಣದ ಕನಸ ಕಂಡು ಆರ್ಥಿಕ ಸಹಾಯಧನ ಪಡೆಯಲು ಬಯಸುವವರಿಗೂ ನೂರೆಂಟು ತೊಡಕುಗಳು ಎದುರಾಗುತ್ತಿವೆ. ವಸತಿ ರಹಿತರು ಸ್ವಂತ ಸೂರಿಲ್ಲದವರ ಲೆಕ್ಕಕ್ಕೆ ಮಾತ್ರ ಸೇರಿಕೊಂಡಿಲ್ಲ. ಇದರ ಹಿಂದೆ ಬಡತನ, ನಿರುದ್ಯೋಗ, ಆರೋಗ್ಯ ಸಮಸ್ಯೆ, ಶೈಕ್ಷಣಿಕವಾಗಿ ಹಿನ್ನಡೆ ಅನುಭವಿಸಿರುವ ಸಮಸ್ಯೆಗಳಗೂ ಇವೆ. ವಸತಿ ಸೌಲಭ್ಯ ಒದಗಿಸಿಕೊಡುವುದರಿಂದ ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪ್ರಸ್ತುತ ದಿನಗಳಲ್ಲಿ ರಿಯಲ್ ಎಸ್ಟೇಟ್ ಉದ್ಯೋಗ ದೊಡ್ಡದಾಗಿ ಬೆಳೆದು ನಿಂತಿದೆ. ನಿವೇಶನ ಖರೀದಿ ಮಾಡಲು ಮಧ್ಯಮ ವರ್ಗಗಳು ಸಾಲದ ಮೊರೆ ಹೋಗುವಂತೆ ಭೂಮಿ ದರ ಹೆಚ್ಚಾಗಿದೆ. ಇನ್ನು ಬಡವರಂತೂ ನಿವೇಶನ ಖರೀದಿ ಮಾಡುವುದನ್ನು ಯೋಜನೆಯೇ ಮಾಡುವಂತಿಲ್ಲ. ಹೀಗಿರುವಾಗ ಸರ್ಕಾರದ ವಸತಿ ಯೋಜನೆಗಳು ಜನರನ್ನು ಪರಿಣಾಕಾರಿಯಾಗಿ ತಲುಪಬೇಕಿದ್ದು, ಈ ಕುರಿತು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
*ನಿವೇಶನ ಹಂಚಿಕೆ ಮಾಡಲಿ
ಸಾರ್ವಜನಿಕರಿಗೆ ಸರ್ಕಾರಗಳು ನೀಡುವ ಸವಲತ್ತುಗಳಲ್ಲಿ ವಸತಿ ಸೌಲಭ್ಯ ಪ್ರಮುಖವಾಗಿದೆ. ಕಳೆದ ಹಲವು ವರ್ಷಗಳ ಹಿಂದೆ ಸರ್ಕಾರದಿಂದ ಜನರಿಗೆ ನಿವೇಶನಗಳನ್ನು ಹಂಚಲಾಗಿತ್ತು. ಅದನ್ನು ಬಿಟ್ಟರೆ ಮತ್ತೆ ನಿವೇಶನ ನೀಡುವ ಪ್ರಕ್ರಿಯೆ ನಡೆದಿಲ್ಲ. ಮನೆಯೇ ಇಲ್ಲದವರಿಗೆ ನಿವೇಶನ ಕೊಟ್ಟರಷ್ಟೇ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯ. ವಸತಿ ರಹಿತ ಬಡವರಿಗೆ ನಿವೇಶನ ಕೊಡುವುದರಿಂದ ವಿಳಾಸವಿಲ್ಲದವರಿಗೆ ನೆಲೆ ಒದಗಿಸಿಕೊಟ್ಟಂತಾಗುತ್ತದೆ.
ಮಲ್ಲೇಶ್ ಗೌಡ, ಮುತ್ತಿಗೆ, ಚಾಮರಾಜನಗರ
*ಬಡವರಿಗೆ ಸೈಟ್ ಕೊಟ್ಟಿಲ್ಲ
ನನಗೆ ತಿಳಿದಂತೆ ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿದ್ದಾಗ ಗ್ರಾಮೀಣ ಪ್ರದೇಶದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಇತ್ತೀಚೆಗೆ ಎಲ್ಲೂ ನಿವೇಶನ ನೀಡಿದಂತೆ ಕಾಣುತ್ತಿಲ್ಲ. ಜಿಲ್ಲೆಯ ಎಲ್ಲ ಹಳ್ಳಿಗಳಲ್ಲೂ ನಿವೇಶನವಿಲ್ಲದ ಕುಟುಂಬಗಳಿವೆ. ಮನೆಗಳಿಲ್ಲದೆ ಕಷ್ಟದಲ್ಲಿ ಜೀವನ ಮಾಡುತ್ತಿವೆ. ಇವರ‌್ಯಾರಿಗೂ ಸೈಟ್ ಕೊಟ್ಟಿಲ್ಲ. ಸರ್ಕಾರಗಳು ಮಾತ್ರ ಬಡವರಿಗೆ ನಿವೇಶನ, ವಸತಿ ಸೌಲಭ್ಯ ನೀಡುತ್ತಿದ್ದೇವೆ ಎಂದು ಹೇಳುತ್ತವೆ.
ಪುಣಜನೂರು ದೊರೆಸ್ವಾಮಿ, ಹಿರಿಯ ಸಾಮಾಜಿಕ ಹೋರಾಟಗಾರ, ಚಾಮರಾಜನಗರ
*ವಸತಿ ಕನಸು ಗಗನ ಕುಸುಮ
ಯಳಂದೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಬಡವರ್ಗದ ವಸತಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ನೀಡುವುದು ವಿಳಂಬವಾಗುತ್ತಿದೆ. ವಸತಿ ಸೌಲಭ್ಯ ದೊರೆಯುತ್ತಿಲ್ಲ. ಬಡಜನರು ಮತ್ತು ವಸತಿ ರಹಿತರು ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವುದು ಗಗನ ಕುಸುಮವಾಗಿಬಿಟ್ಟಿದೆ. ಮೇಲಧಿಕಾರಿಗಳು ಸೂಕ್ತ ಕ್ರಮವಹಿಸಿ ವಸತಿ ಯೋಜನೆಯನ್ನು ಲಾನುಭವಿಗಳಿಗೆ ತಲುಪಿಸಬೇಕೆಂದು ಒತ್ತಾಯಿಸುತ್ತೇನೆ.
ಸ್ವಾಮಿ, ಕೆಸ್ತೂರು, ಯಳಂದೂರು
*ಅರ್ಧಂಬರ್ಧ ಮನೆ ನಿರ್ಮಾಣ
ಕಳೆದ ಕೆಲವು ವರ್ಷಗಳಿಂದ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನ ಬಿಡುಗಡೆಯಾಗದ ಕಾರಣ ಬಹಳಷ್ಟು ಜನರು ಅರ್ಧಂಬರ್ಧ ಮನೆಗಳನ್ನು ನಿರ್ಮಾಣ ಮಾಡಿ ಬಿಟ್ಟಿದ್ದಾರೆ. ಮನೆ ಕಟ್ಟಲು ಹಣವಿಲ್ಲದವರು ನಿರ್ಮಾಣ ಕೆಲಸವನ್ನು ಕೈಬಿಟ್ಟಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಬಾಕಿ ಅನುದಾನವನ್ನು ನೀಡಿ ವಸತಿ ಸೌಲಭ್ಯ ಒದಗಿಸಿಕೊಡಬೇಕಾಗಿದೆ.
ಮಹದೇವಮ್ಮ, ಗೌಡಹಳ್ಳಿ, ಯಳಂದೂರು
*ಗುಡಿಸಲಿನಲ್ಲೇ ವಾಸ
ಸುಮಾರು 30 ವರ್ಷಗಳ ಹಿಂದೆ ಸರ್ಕಾರ ನಿರ್ಮಾಣ ಮಾಡಿಕೊಟ್ಟ ಮನೆಯಲ್ಲಿ ನಮ್ಮ ಕುಟುಂಬ ವಾಸ ಮಾಡುತ್ತಿದ್ದು, ಈ ನಿವಾಸ ಸಂಪೂರ್ಣ ಶಿಥಿಲಗೊಂಡಿದೆ. ಗೋಡೆಗಳು ಬೀಳುವ ಸ್ಥಿತಿಯಲ್ಲಿವೆ.
ಇದರಿಂದ ಕಳೆದ 2 ವರ್ಷಗಳಿಂದ ಸಮೀಪದಲ್ಲೇ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದೇವೆ. ಮಳೆ ಬಂದಾಗ ಪರಡಬಾರದ ಕಷ್ಟ ಪಡುತ್ತಿದ್ದೇವೆ. ನಮಗೆ ಹೊಸ ಮನೆಯ ಅಗತ್ಯವಿದ್ದು, ಅಧಿಕಾರಿಗಳು ಮನೆ ನಿರ್ಮಾಣ ಮಾಡಿಕೊಡಬೇಕೆಂದು ಮನವಿ ಮಾಡುತ್ತೇನೆ.
ಭಾಗ್ಯ ಕಗ್ಗಲಿಹುಂಡಿ, ಹನೂರು
*ಮಳೆ ಬಂದರೆ ನೀರು ಸೋರುವ ಮನೆ
ಕಳೆದ 20 ವರ್ಷಗಳ ಹಿಂದೆ ಸರ್ಕಾರ ನಿರ್ಮಾಣ ಮಾಡಿರುವ ಒಂದೇ ಮನೆಯಲ್ಲಿ ನಾನು ಮತ್ತು ನನ್ನ ಮಗನ ಕುಟುಂಬ ವಾಸ ಮಾಡುತ್ತಿದ್ದೇವೆ. ಮನೆ ಹಳೆಯದಾಗಿರುವುದರಿಂದ ಬೀಳುವ ಆತಂಕವಿದೆ. ಮಳೆ ಬಂದಾಗ ನೀರು ಸೋರುತ್ತದೆ. ಗ್ರಾಮ ಪಂಚಾಯಿತಿಯಿಂದ ನಮಗೆ ಮನೆ ನಿರ್ಮಾಣ ಮಾಡಿಕೊಟ್ಟರೆ ಅನುಕೂಲವಾಗಲಿದೆ.
ಪುಟ್ಟಬಲ್ಲಯ್ಯ, ಚೆನ್ನಾಲಿಂಗನಹಳ್ಳಿ, ಹನೂರು
*ವಸತಿ ಯೋಜನೆಯನ್ನೇ ಎದುರು ನೋಡುತ್ತಿದ್ದೇವೆ
ಎರಡ್ಮೂರು ವರ್ಷಗಳ ಹಿಂದೆಯೇ ಸತ್ತೇಗಾಲ ಗ್ರಾಮ ಪಂಚಾಯಿತಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಗ್ರಾಮದಲ್ಲಿದ್ದ ಮನೆಯು ಮಣ್ಣಿನ ಹಳೆಯ ಮನೆಯಾಗಿರುವುದರಿಂದ ಮಳೆಗೆ ಗೋಡೆ ಕುಸಿದಿದೆ. ತಂದೆ-ತಾಯಿ ನಿಧನರಾಗಿದ್ದು, ಅಕ್ಕ ಮತ್ತು ನನ್ನನ್ನು ನೋಡಿಕೊಳ್ಳುತ್ತಿದ್ದ ಅಜ್ಜಿಯೂ ತೀರಿಹೋದರು. ನಾವಿಬ್ಬರೂ ಮೈಸೂರಿನಲ್ಲಿ ವ್ಯಾಸಂಗ ಮಾಡಲು ಹಾಸ್ಟೆಲ್‌ನಲ್ಲಿ ಇದ್ದೇವೆ. ನಮಗೆ ಗ್ರಾಮದಲ್ಲಿ ಇರಲು ಮನೆ ಇಲ್ಲ. ಸ್ವಂತ ಮನೆ ಕಟ್ಟಿಕೊಳ್ಳಲು ಆರ್ಥಿಕವಾಗಿ ಸಾಧ್ಯವಾಗುತ್ತಿಲ್ಲ. ವಸತಿ ರಹಿತರಿಗೆ ಸರ್ಕಾರ ನೀಡುವ ಯೋಜನೆಯನ್ನೇ ಎದುರು ನೋಡುತ್ತಿದ್ದೇವೆ.
ಮಹೇಶ್, ಸತ್ತೇಗಾಲ, ಕೊಳ್ಳೇಗಾಲ
*ಗ್ರಾಪಂ ಲೋಪದಿಂದ ಸಿಗದ ಸೌಲಭ್ಯ
ನನ್ನ ತಾಯಿ ಪುಟ್ಟಮ್ಮ 2018-19ನೇ ಸಾಲಿನ ಬಸವ ವಸತಿ ಯೋಜನೆಯಡಿಯಲ್ಲಿ ಲಾನುಭವಿಯಾಗಿದ್ದರು. ಜಿಪಿಎಸ್ ಮಾಡುವ ಸಂದರ್ಭದಲ್ಲಿ ಕೈ ತಪ್ಪಿನಿಂದ ಹೆಸರು ಬದಲಾವಣೆಯಾದ ಕಾರಣ ಮನೆ ಇನ್ನೂ ಸಿಕ್ಕಿಲ್ಲ. ಬಳಿಕ ಹಲವಾರು ಸಲ ಮನೆ ಬೇಕೆಂದು ಮುಳ್ಳೂರು ಗ್ರಾಮ ಪಂಚಾಯಿತಿಗೆ ವಿಚಾರಿಸಿದಾಗ ಅರ್ಜಿ ಸಿಗುತ್ತಿಲ್ಲವೆಂದರು. ಪ್ರಶ್ನಿಸಿದರೆ ಅರ್ಜಿಯೇ ಕೊಟ್ಟಿಲ್ಲವೆಂದು ಹೇಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ಲೋಪದಿಂದ ನಮಗೆ ಸೌಲಭ್ಯ ಸಿಗದಂತಾಗಿದೆ.
ಪ್ರಕಾಶ್, ಮುಳ್ಳೂರು, ಕೊಳ್ಳೇಗಾಲ