ಪೊನ್ನಾಚಿ ಗ್ರಾಮದ ಶಿವನಮ್ಮನ ಅವರ ವಠಾರದಲ್ಲಿ ಹರಿಯುತ್ತಿರುವ ಮಳೆ ನೀರು 
ಚಾಮರಾಜನಗರ

ಮಳೆ ಬಂದರೆ ಮನೆಗಳಿಗೆ ಜಲದಿಗ್ಬಂಧನ

ಪ್ರಮುಖ ಮುಖ್ಯಾಂಶಗಳು

  • ಪೊನ್ನಾಚಿಯಲ್ಲಿ ಪ್ರಾಣಕ್ಕೆ ಸಂಚಕಾರ ತರುವ ಅವಾಂತರ
  • ಸಮಸ್ಯೆ ಬಗೆಹರಿಸಲು ನಿವಾಸಿಗಳ ಒತ್ತಾಯ
ಚಾಮರಾಜನಗರ: ಮಳೆ ಬಂದರೆ ಸಾಕು ಈ ಮನೆಗಳ ಮುಂದೆ ನದಿಯಂತೆ ನೀರು ಹರಿಯುತ್ತದೆ. ನಿವಾಸಿಗಳು ಹೊರಗೆ ಬರಲಾಗದೆ ಜಲದಿಗ್ಬಂಧನಕ್ಕೆ ಒಳಗಾಗುತ್ತಿದ್ದಾರೆ.
ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಬುಧವಾರ ಜೋರು ಮಳೆ ಸುರಿಯಿತು. ಇಲ್ಲಿ ವರುಣನ ಆರ್ಭಟ ಹೆಚ್ಚಾದಾಗಲೆಲ್ಲಾ ಶಿವನಮ್ಮನ ವಠಾರದಲ್ಲಿ ನೀರು ಕೋಡಿ ಬೀಳುತ್ತದೆ. ಶಿವನಮ್ಮನ ವಠಾರದಲ್ಲಿ ನಾಲ್ಕೈದು ಮನೆಗಳಿವೆ. ಸುಮಾರು 10-12 ಜನ ವಾಸ ಮಾಡುತ್ತಿದ್ದಾರೆ. ಬುಧವಾರ ಮತ್ತು ಗುರುವಾರ ಸುರಿದ ಮಳೆಯ ತೀವ್ರತೆಗೆ ಇಳಿಜಾರು ಪ್ರದೇಶದಲ್ಲಿರುವ ಮನೆಗಳ ಮುಂದೆ ರಭಸವಾಗಿ ನೀರು ಹರಿಯಿತು.ನದಿ ಅಥವಾ ನಾಲೆಗಳಲ್ಲಿ ನೀರು ಸಾಗುವಷ್ಟು ಜೋರಾಗಿ ಮನೆಗಳ ಮುಂದಿನ ಇರುವ ಹಳ್ಳದಕ್ಕೆ ನೀರು ಸಾಗಿತು. ಪ್ರವಾಹದ ರೀತಿಯಲ್ಲಿ ಹರಿದ ನೀರು ನಿವಾಸಿಗಳು ಮನೆಗಳಿಂದ ಹೊರಗೆ ಬರಲಾಗದಂತೆ ಮಾಡಿ ಜಲದಿಗ್ಬಂಧನ ವಿಧಿಸಿತು.
ಊರಲ್ಲಿ ಬಯಲು ಬಹಿರ್ದೆಸೆ ಪದ್ಧತಿ ಜೀವಂತವಾಗಿದೆ. ಅಲ್ಲದೇ, ಶೌಚಗೃಹಗಳು ಇಲ್ಲದ ಮನೆಗಳೂ ಇವೆ. ಶಿವನಮ್ಮನ ವಠಾರ ಜಲದಿಗ್ಬಂಧನಕ್ಕೆ ಒಳಗಾದಾಗ ನಿವಾಸಿಗಳು ಬಹಿರ್ದೆಸೆಗೆ ತೆರಳಲು ಪಡಬಾರದ ಕಷ್ಟ ಪಡುತ್ತಾರೆ. ಹಲವು ವರ್ಷಗಳಿಂದ ಈ ಸಮಸ್ಯೆ ಬಗೆಹರಿಸುವಂತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಪ್ರತಿ ವರ್ಷ ಮಳೆಬಂದಾಗಲೆಲ್ಲಾ ಶಿವನಮ್ಮನ ವಠಾರದ ಆವರಣದಿಂದ ಮಳೆ ನೀರು ಜೋರಾಗು ಹರಿದುಹೋಗುತ್ತದೆ. ಮಳೆ ನಿಂತ ಬಳಿಕವೇ ವಠಾರದ ನಿವಾಸಿಗಳು ಹೊರಗೆಬರಬೇಕಾಗಿದೆ. ಒಂದು ವೇಳೆ ಧೈರ್ಯ ಮಾಡಿ ಜೋರಾಗಿ ಹರಿಯುವ ನೀರಿನ ಇಳಿದು ಹೊರಬರಲು ಪ್ರಯತ್ನ ಮಾಡಿದರೆ ಕೊಚ್ಚಕೊಂಡು ಹೋಗಿ ಬೀಳುವಷ್ಟು ಅಪಾಯವಿದೆ.
ಅವ್ಯವಸ್ಥೆ ಜಾಲತಾಣದಲ್ಲಿ ವೈರಲ್:
ಪೊನ್ನಾಚಿ ಗ್ರಾಮದ ಶಿವನಮ್ಮನ ವಠಾರದ ಆವರಣದಲ್ಲಿ ಮಳೆ ನೀರು ಕೋಡಿ ಬಿದ್ದು ಹರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈಲ್ ಆಗಿದೆ. ಗ್ರಾಮಸ್ಥ ಸ್ನೇಹಜಿವಿ ರಾಜು ಮಳೆಯ ನಡುವೆಯೂ ವಿಡಿಯೋ ಮಾಡಿ ವಾಸ್ತವ ಚಿತ್ರಣವನ್ನು ಬೆಳಕಿಗೆ ತಂದಿದ್ದಾರೆ. ವಠಾರದ ನಿವಾಸಿಗಳು ಮನೆಯಿಂದ ಹೊರಬಂದರೆ ಕೊಚ್ಚಿಕೊಂಡು ಹೋಗುವ ಪರಿಸ್ಥಿತಿ ಇದೆ. ಪ್ರತಿ ಮಳೆಗಾಲದಲ್ಲೂ ಇದೇ ರೀತಿ ಆಗುತ್ತಿದೆ. ಗ್ರಾಪಂಗೆ ಮನವಿ ಕೊಟ್ಟರೂ ಸಮಸ್ಯೆ ಬಗೆಹರಿಸಿಲ್ಲ. ಕಳೆದ ಸಲ ಮನೆಯೊಂದಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಜನರ ಪ್ರಾಣಕ್ಕೆ ತೊಂದರೆಯಾದರೆ ಯಾರು ಹೊಣೆಯಾಗುತ್ತಾರೆ ಎಂದು ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ.
ಜೋರಾಗಿ ಮಳೆ ಬಿದ್ದಾಗ ನಮ್ಮ ಮನೆಯ ಮುಂದೆ ಮಳೆ ನೀರು ಪ್ರವಾಹದ ರೂಪದಲ್ಲಿ ಹರಿಯುತ್ತಿದೆ. ಶೌಚಾಲಯಕ್ಕೆ ತೆರಳಲು ಹೊರಗೆ ಬರುವುದಕ್ಕೂ ಆಗುತ್ತಿಲ್ಲ. ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣ ಮಾಡಿ ನಮಗೆ ಮುಂದೆ ಆಗಬಹುದಾದ ತೊಂದರೆಯನ್ನು ತಪ್ಪಿಸಬೇಕು. ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್ ಅವರು ಪೊನ್ನಾಚಿ ಗ್ರಾಮ ಪಂಚಾಯಿತಿಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಮನವಿ ಮಾಡುತ್ತೇನೆ.
ಭಾಗ್ಯಮ್ಮ, ಪೊನ್ನಾಚಿ, ಹನೂರು
ಪೊನ್ನಾಚಿಯಲ್ಲಿ ಜಮೀನಿನುಗಳ ಕಡೆಯಿಂದ ಮನೆಗಳ ಆವರಣದ ಕಡೆಗೆ ನೀರು ಹರಿದುಬರುತ್ತಿದೆ. ಈ ಪ್ರದೇಶದಲ್ಲಿ ತಡೆಗೋಡೆ ಮತ್ತು ಚರಂಡಿ ನಿರ್ಮಾಣ ಮಾಡಲು ಕ್ರಿಯಾ ಯೋಜನೆ ತಯಾರಿಸಲಾಗಿದೆ. ವಿಬಿಜಿ ರಾಮ್‌ಜಿ ಯೋಜನೆಯಡಿ ಈ ಕಾಮಗಾರಿಯನ್ನು ಕೈಗೊಳ್ಳಲಾಗುವುದು.
ಲೋಕೇಶ್, ಪಿಡಿಒ, ಪೊನ್ನಾಚಿ ಗ್ರಾಮ ಪಂಚಾಯಿತಿ