ತಾಲೂಕಿನ ಚಂಗವಾಡಿ ಹಾಗೂ ಪುದು ರಾಮಾಪುರದಲ್ಲಿ ಭಾನುವಾರ ರಾತ್ರಿ ಮನೆಯ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಚಿನ್ನ ಹಾಗೂ ಹಣ ದೋಚಿದ್ದಾರೆ.
ಹನೂರು: ತಾಲೂಕಿನ ಚಂಗವಾಡಿ ಹಾಗೂ ಪುದು ರಾಮಾಪುರದಲ್ಲಿ ಭಾನುವಾರ ರಾತ್ರಿ ಮನೆಯ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಚಿನ್ನ ಹಾಗೂ ಹಣ ದೋಚಿದ್ದಾರೆ.
ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಂಗವಾಡಿ ಗ್ರಾಮದ ರಾಜು ಅವರು ಪುತ್ರನ ಮದುವೆ ಹಿನ್ನೆಲೆ ಕುಟುಂಬಸ್ಥರೆಲ್ಲರೂ ಭಾನುವಾರ ಮೈಸೂರಿಗೆ ತೆರಳಿದ್ದರು. ಸೋಮವಾರ ಸಂಜೆ ಮನೆಗೆ ಆಗಮಿಸಿದ ವೇಳೆ ಬಾಗಿಲು ತೆರೆದಿರುವುದನ್ನು ಕಂಡು ಗಾಬರಿಗೊಂಡು ರಾಜು ಅವರು ಒಳಗೆ ತೆರಳಿ ಪರಿಶೀಲಿಸಿದಾಗ ಬೀರುವಿನಲ್ಲಿದ್ದ ಚಿನ್ನದ ಸರ, ಕಿವಿಯೋಲೆ ಸೇರಿದಂತೆ 50 ಗ್ರಾಂ ಚಿನ್ನಾಭರಣ ಹಾಗೂ ಬೀಗರೂಟದ ಖರ್ಚಿಗಾಗಿ ಇಟ್ಟಿದ್ದ 4 ಲಕ್ಷ ರೂ. ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಮತ್ತೊಂದು ಪ್ರಕರಣದಲ್ಲಿ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪುದು ರಾಮಾಪುರ ಗ್ರಾಮದ ರತ್ನಮ್ಮ ಅವರು ಕೂಲಿ ಕೆಲಸಕ್ಕಾಗಿ ನಾಗಮಂಗಲದ ಹುಲ್ಲೇನಹಳ್ಳಿ ಗ್ರಾಮಕ್ಕೆ ತೆರಳಿದ್ದು, ಮನೆಯನ್ನು ತಾಯಿ ಅಮ್ಮಾಸಿಯಮ್ಮ ನೋಡಿಕೊಳ್ಳುತ್ತಿದ್ದರು. ಭಾನುವಾರ ಕಳ್ಳತನವಾಗಿರುವುದು ತಿಳಿದು ಬಂದಿದೆ. ಸುದ್ದಿ ತಿಳಿದು ಮನೆಗೆ ಆಗಮಿಸಿದ ರತ್ಮಮ್ಮ ಪರಿಶೀಲಿಸಿದಾಗ ಚಿನ್ನದ ಸರ, ಓಲೆ, ತಾಳಿ, ಉಂಗುರ ಸೇರಿದಂತೆ 45 ಗ್ರಾಂ ಚಿನ್ನಾಭರಣ, 35 ಗ್ರಾಂ ಬೆಳ್ಳಿ ಪದಾರ್ಥ ಹಾಗೂ 75 ಸಾವಿರ ರೂ. ನಗದು ಕಳ್ಳತನವಾಗಿದೆ.
ಈ ಎರಡೂ ಪ್ರಕರಣದ ಸಂಬಂಧ ಹನೂರು ಹಾಗೂ ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಮಂಗಳವಾರ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಂಡದಿಂದ ಮಾಹಿತಿ ಕಲೆ ಹಾಕಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.