ನಾಲ್‌ರೋಡ್ - ನೆಲ್ಲೂರು ಮಾರ್ಗದಲ್ಲಿ ರಸ್ತೆ ದಾಟುತ್ತಿರುವ ಕಾಡಾನೆಗಳ ಹಿಂಡು.
ಹನೂರು: ತಾಲೂಕಿನ ನಾಲ್‌ರೋಡ್-ನೆಲ್ಲೂರು ಮಾರ್ಗದಲ್ಲಿ ಮಂಗಳವಾರ ಸುಮಾರು 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ವಾಹನ ಸವಾರರಲ್ಲಿ ಆತಂಕವನ್ನುಂಟು ಮಾಡಿತು.
ಈ ಮಾರ್ಗವು ಮಲೆಮಹದೇಶ್ವರ ವನ್ಯಜೀವಿ ಧಾಮದ ನಡುವೆ ಹಾದು ಹೋಗಿದ್ದು, ನೆಲ್ಲೂರು, ಕೂಡಲೂರು, ಹೂಗ್ಯಂ, ಜಲ್ಲಿಪಾಳ್ಯ ಹಾಗೂ ಈ ಭಾಗದ ಇನ್ನಿತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಈ ಮಾರ್ಗದಲ್ಲಿ ಕಳೆದ ಒಂದು ತಿಂಗಳಿನಿಂದ ಕಾಡಾನೆಯೊಂದು ಆಗಾಗ್ಗೆ ರಸ್ತೆ ಬದಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ವಾಹನ ಸವಾರರ ಆತಂಕಕ್ಕೆ ಕಾರಣವಾಗಿತ್ತು. ಹೀಗಿರುವಾಗ ಮಂಗಳವಾರ ಬೆಳಗ್ಗೆ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಈ ಮಾರ್ಗದಲ್ಲಿ ಕಾಣಿಸಿಕೊಂಡಿದ್ದು, ಈ ವೇಳೆ ಆ ಮಾರ್ಗದಲ್ಲಿ ತೆರಳುತ್ತಿದ್ದ ಸವಾರರು ವಾಹನ ಸಂಚಾರವನ್ನು ಸ್ಥಗಿತಗೊಳಿಸಿದರು. ಕಾಡಾನೆಗಳು ಒಂದೇ ಸಮನೆ ರಸ್ತೆಯನ್ನು ದಾಟಿ ಅರಣ್ಯ ಪ್ರದೇಶದೊಳಗೆ ತೆರಳಿದವು. ಬಳಿಕ ಸವಾರರು ನಿಟ್ಟುಸಿರು ಬಿಟ್ಟು ತೆರಳಿದರು. ಇದರ ದೃಶ್ಯವನ್ನು ಸಾರ್ವಜನಿಕರೊಬ್ಬರೂ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದಾರೆ.