ಹನೂರು ಭಾಗದಲ್ಲಿ ಸುರಿದ ಜೋರು ಮಳೆಗೆ ಚಂಗವಾಡಿ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಮಣ್ಣಿನ ಸೇತುವೆ ಕೊಚ್ಚಿ ಹೋಗಿರುವುದು.  
ಚಾಮರಾಜನಗರ

ಹನೂರು ತಾಲೂಕಲ್ಲಿ ಅಬ್ಬರಿಸಿದ ಮಳೆ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಕೆರೆಯಂತಾದ ರಾಮಾಪುರ ಸರ್ಕಾರಿ ಶಾಲಾ ಆವರಣ
  • ಚಂಗವಾಡಿ ಗ್ರಾಮದ ಬಳಿ ಕೊಚ್ಚಿ ಹೋದ ತಾತ್ಕಾಲಿಕ ಸೇತುವೆ
  • ಕೆರೆ, ಕಟ್ಟೆಗಳಲ್ಲಿ ನೀರು ಸಂಗ್ರಹ
  • ಮೈದುಂಬಿ ಹರಿದ ಹಳ್ಳ, ಕೊಳ್ಳಗಳು
ಹನೂರು: ತಾಲೂಕಿನೆಲ್ಲೆಡೆ ಬುಧವಾರ ರಾತ್ರಿ ಮಳೆರಾಯ ಅಬ್ಬರಿಸಿದ್ದರಿಂದ ಬಹುತೇಕ ಕಡೆಗಳಲ್ಲಿ ಕೆರೆ, ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿ ಹಳ್ಳಕೊಳ್ಳಗಳು ಮೈದುಂಬಿ ಹರಿದರೆ, ಕೆಲವೆಡೆ ಮನೆ ಗೋಡೆ ಕುಸಿದು, ಸೇತುವೆ ಕೊಚ್ಚಿ ಹೋಗಿ ಜಮೀನಿಗೆ ನೀರು ನುಗ್ಗಿದೆ.
ತಾಲೂಕಿನಲ್ಲಿ ರಾತ್ರಿ ಸುರಿದ ಮಳೆ ರೈತರು ಹಾಗೂ ಜನರಲ್ಲಿ ಸಂತಸ ಉಂಟು ಮಾಡಿತು. ಪಿ.ಜಿ.ಪಾಳ್ಯ ಗ್ರಾಪಂ ವ್ಯಾಪ್ತಿಯ ಹಾವಿನಮೂಲೆಯ ಶಿವಮ್ಮ ಹಾಗೂ ಮಾದಪ್ಪ ಅವರ ಮನೆ ಗೋಡೆ ಕುಸಿದಿದೆ. ಅದೃಷ್ಟವಶಾತ್ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾಲೂಕಿನ ಕೆಲವೆಡೆ ಜಮೀನುಗಳಿಗೆ ನೀರು ನುಗ್ಗಿದೆ. ಉದ್ದನೂರಿನ ಶ್ರೀನಿವಾಸ್ ಅವರ ಜಮೀನಿನಲ್ಲಿ ನೀರು ಆವರಿಸಿ ಅರಿಶಿಣ ಫಸಲು ಹಾಳಾಗಿದೆ. ಹನೂರಿನ ಬಟಗುಪ್ಪೆಯ ಆನಂದ್ ಅವರ ಜಮೀನಿಗೆ ಹಳ್ಳದ ನೀರು ನುಗ್ಗಿ ಕಲ್ಲುತಂತಿ ಬೇಲಿ ನೆಲಕ್ಕುರುಳಿದೆ. ಶೆಟ್ಟಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಕೆಲ ಜಮೀನುಗಳಿಗೂ ನೀರು ನುಗ್ಗಿದೆ.
ಕೆರೆಯಂತಾದ ಶಾಲಾವರಣ: ರಾತ್ರಿ ಸುರಿದ ಮಳೆಗೆ ಪಟ್ಟಣದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನೀರು ನಿಂತು ಕೆರೆಯಂತಾಗಿತ್ತು. ವಿದ್ಯಾಥಿಗಳು, ಶಿಕ್ಷಕರು ಹಾಗೂ ಬಿಆರ್‌ಸಿ ಕೇಂದ್ರಕ್ಕೆ ಆಗಮಿಸಿಸುವ ಅಧಿಕಾರಿಗಳು , ನೌಕರರು ಸಮಸ್ಯೆ ಎದುರಿಸಿದರು. ಕೆಲ ಮಕ್ಕಳು ನೀರಿನಲ್ಲೇ ಆಟವಾಡಿದರು. ಸ್ಥಳಕ್ಕೆ ಬಿಇಒ ಪ್ರತಿಭಾ ಆಗಮಿಸಿ ಪರಿಸ್ಥಿತಿಯನ್ನು ವೀಕ್ಷಿಸಿ ಈಗಾಗಲೇ ಉದ್ದೇಶಿಸಿರುವಂತೆ ನೀರು ಹರಿಯಲು ಚರಂಡಿ ನಿರ್ಮಿಸಿ ಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ರಾಮಾಪುರ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣಕ್ಕೂ ನೀರು ನುಗ್ಗಿ ಕೆರೆಯಂತಾಯಿತು. ಸಮಸ್ಯೆಯಾದ ಕಾರಣ ಶಿಕ್ಷಕರು ಇಲ್ಲಿನ ಮಕ್ಕಳನ್ನು ಸಮೀಪದ ರಸ್ತೆ ಬದಿಯಲ್ಲಿನ ಮತ್ತೊಂದು ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಿದರು. ಸ್ಥಳಕ್ಕೆ ಆಗಮಿಸಿದ ಪಾಲಕರು ಶಾಲಾವರಣದ ಅವ್ಯವಸ್ಥೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಪಂ ಅಧಿಕಾರಿಗಳು ಇತ್ತ ಗಮನಹರಿಸಿ ಶಾಲಾವರಣದಲ್ಲಿ ನೀರು ನಿಲ್ಲದಂತೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಹಾಗೆಯೇ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮತ್ತೊಂದು ಬದಿಯ ಫ್ಲಾಟ್‌ಫಾರ್ಮ್ ನೀರಿನಿಂದ ಆವೃತವಾಗಿತ್ತು. ಇದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸಿದರು.
ಕೊಚ್ಚಿಹೋದ ತಾತ್ಕಾಲಿಕ ಸೇತುವೆ: ಪಟ್ಟಣದ ಬರಹಳ್ಳದಲ್ಲಿ ಯಥೇಚ್ಛವಾದ ನೀರು ಹರಿದ ಪರಿಣಾಮ ಚಂಗವಾಡಿ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆ ಸಮೀಪ ತಾತ್ಕಾಲಿಕವಾಗಿ ನಿರ್ಮಿಸಿದ್ದ ಮಣ್ಣಿನ ಸೇತುವೆ ನೀರಿನ ರಂಭಕ್ಕೆ ಸಂಪೂರ್ಣ ಕೊಚ್ಚಿ ಹೋಯಿತು. ಇದರಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳು ಚಿಂಚಳ್ಳಿ, ಎಡಳ್ಳಿದೊಡ್ಡಿ ಹಾಗೂ ನಂಜೇಒಡೆಯರ ದೊಡ್ಡಿ ಮಾರ್ಗವಾಗಿ ಸುತ್ತಿ ಬಳಸಿ ಸಂಚರಿಸಿದವು. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ಚಿಂಚಳ್ಳಿ ಮಾರ್ಗದ ಸ್ವಾಮಿಹಳ್ಳದ ಸೇತುವೆ ಹಾಗೂ ಮಣಗಳ್ಳಿಯ ದೊಡ್ಡಹಳ್ಳದ ಸೇತುವೆ ಮೇಲೆ ನೀರು ಹರಿದ ಪರಿಣಾಮ ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಹರಸಾಹಸದಿಂದ ಸಂಚರಿಸುವಂತಾಯಿತು. ಹಾಗಾಗಿ ರಾತ್ರಿ ಸುರಿದ ಮಳೆ ಜನತೆಯಲ್ಲಿ ಒಂದೆಡೆ ಸಂತಸವನ್ನು ಉಂಟು ಮಾಡಿದ್ದರೆ, ಮತ್ತೊಂದೆಡೆ ನಷ್ಟ ಅನುಭವಿಸುವಂತೆ ಮಾಡಿತು.