ಸೇವೆಗೆ ಸಿದ್ಧಗೊಂಡಿರುವ ಮುಖ್ಯಮಂತ್ರಿ ಆರೋಗ್ಯ ಸೇತು ವಾಹನ
- 3 ಸಂಚಾರಿ ಆರೋಗ್ಯ ಘಟಕ ಕಾರ್ಯಾರಂಭಕ್ಕೆ ಸಿದ್ಧ
- ಹಾಡಿ, ಗುಡ್ಡಗಾಡಿನ ಮನೆ ಬಾಗಿಲಿಗೆ ಸೇವೆ
- ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ನರ್ಸ್ ತಂಡದಿಂದ ಕರ್ತವ್ಯ
ಸೇವೆಗೆ ಸಿದ್ಧಗೊಂಡಿರುವ ಮುಖ್ಯಮಂತ್ರಿ ಆರೋಗ್ಯ ಸೇತು ವಾಹನ
ಚಾಮರಾಜನಗರ: ಅರಣ್ಯದ ಹಾಡಿ, ಪೋಡು ಮತ್ತು ಗುಡ್ಡಗಾಡಿನ ದುರ್ಗಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆಯನ್ನು ಒದಗಿಸಲು ಸಲುವಾಗಿ ನಾಲ್ಕೈದು ದಿನಗಳಲ್ಲಿ 3 ‘ಆರೋಗ್ಯ ಸೇತು’ ಸಂಚಾರಿ ಘಟಕಗಳು ಕಾರ್ಯಾರಂಭ ಮಾಡಲಿವೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಗ್ಯ ಸೇತು ಹೆಸರಿನ ಮೊಬೈಲ್ ಹೆಲ್ತ್ ಯೂನಿಟ್‌ಗಳಿಗೆ ಚಾಲನೆ ನೀಡಿದ್ದರು. ಹೊರಗುತ್ತಿಗೆ ಆಧಾರದಲ್ಲಿ ವಾಹನ ಪಡೆದು ಆರೋಗ್ಯ ಸೇತು ಆರಂಭಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಅದರಂತೆ ಹೊರಗುತ್ತಿಗೆಗೆ ಟೆಂಡರ್ ಕರೆದಾಗ ಪ್ರತಿಕ್ರಿಯೆ ದೊರೆದ ಹಿನ್ನೆಲೆಯಲ್ಲಿ
ಚಾಮರಾಜನಗರ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಶೇಷ ಕಾಳಜಿವಹಿಸಿ ಆಂಬುಲೆನ್ಸ್ ಜೀಪ್ ಮಾದರಿಯ(4*4) 3 ವಾಹನಗಳನ್ನು ಖರೀದಿ ಮಾಡಲಾಗಿದೆ.
ಚಾಮರಾಜನಗರ ಜಿಲ್ಲೆ ಭಾಗಶಃ ಅರಣ್ಯ ಪ್ರದೇಶದಿಂದ ಆವೃತ್ತವಾಗಿದೆ. ಕಾಡಿನೊಳಗಿರುವ, ಅಂಚಿನಲ್ಲಿರುವ ಜನರಿಗೆ ಆರೋಗ್ಯ ಸೇವೆ ಒದಗಿಸುವುದು ಸವಾಲಿನ ಕೆಲಸವಾಗಿದೆ. ರಾತ್ರಿ ವೇಳೆ ಆರೋಗ್ಯ ಹದಗೆಟ್ಟರೆ ರೋಗಿಯನ್ನು ದುರ್ಗಮ ಹಾದಿಯಲ್ಲಿ ನಾಲ್ಕು ಜನರು ಡೋಲಿ ಕಟ್ಟಿ ಹೊತ್ತುಕೊಂಡು ಬರುತ್ತಾರೆ. ಹೀಗಾಗಿ ಇಲ್ಲಿಗೆ ಸಂಚಾರ ಆರೋಗ್ಯ ಘಟಕಗಳ ಅವಶ್ಯಕತೆ ತುಂಬಾ ಇದೆ ಎನ್ನುವುದು ಜಿಲ್ಲಾ ಆರೋಗ್ಯ ಇಲಾಖೆಗೆ ಗೊತ್ತಿದೆ. ಹೀಗಾಗಿ ವರ್ಷದ ಹಿಂದೆ ಸಂಚಾರ ಆರೋಗ್ಯ ಘಟಕಗಳನ್ನು ಕೊಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮತ್ತು ಹಿಂದಿನ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಲ್ಲಿ ಕೋರಲಾಗಿತ್ತು. ಇದಕ್ಕೆ ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಅನುದಾನವನ್ನು ಕೊಡಿಸಲಾಗಿ ಈಗ ಜಿಲ್ಲೆಗೆ 3 ಸಂಚಾರ ಆರೋಗ್ಯ ಘಟಕ ವಾಹನಗಳು ಬಂದಿವೆ. ಬೇರೆ ಜಿಲ್ಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವಾಹನ ಪಡೆದು ಆರೋಗ್ಯ ಸೇತು ಕಾರ್ಯಕ್ರಮ ಶುರುವಾದರೆ ಚಾಮರಾಜನಗರ ಜಿಲ್ಲೆಯಲ್ಲಿ ಸರ್ಕಾರದ ಸ್ವಂತ 3 ವಾಹನಗಳು ಸೇವೆಗೆ ಇಳಿಯುತ್ತಿವೆ. ನಾಲ್ಕೈದು ದಿನಗಳಲ್ಲಿ ವಾಹನಗಳ ಸೇವೆ ಆರಂಭ ಮಾಡಲಿವೆ.
ಮನೆ ಬಾಗಿಲಿಗೆ ವೈದ್ಯಕೀಯ ತಂಡ:
ಆರೋಗ್ಯ ಸೇತು ಸಂಚಾರ ಘಟಕದಲ್ಲಿ ವೈದ್ಯ, ಲ್ಯಾಬ್ ಟೆಕ್ನಿಷಿಯನ್, ನರ್ಸ್, ಚಾಲಕ ಇರಲಿದ್ದಾರೆ. 4ರಲ್ಲಿ ಪ್ರಸ್ತುತ ಜಿಲ್ಲೆಯ 3 ವಾಹನಗಳಿದ್ದು, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ಇಬ್ಬರು ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇನ್ನೊಬ್ಬರ ನೇಮಕವಾಗಲಿದೆ. ಈ ತಂಡವು ಹಾಡಿ, ಪೋಡುಗಳು, ಗುಡ್ಡಗಾಡು ಪ್ರದೇಶಗಳಿಗೆ ಹೋಗಿ ಜನರ ಆರೋಗ್ಯ ತಪಾಸಣೆ ನಡೆಸಲಿವೆ. ವಾಹನವು ಆಂಬುಲೆನ್ಸ್ ಮಾದರಿಯಲ್ಲೂ ಇರುವುದರಿಂದ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ರೋಗಿಯನ್ನು ತಾಲೂಕು ಅಥವಾ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆ ಕೊಡಲಿದೆ.
ಮೂರು ವಾಹನಗಳಲ್ಲಿ ಹನೂರು ತಾಲೂಕಿಗೆ 2, ಚಾಮರಾಜನಗರ ಮತ್ತು ಯಳಂದೂರು ತಾಲೂಕಿಗೆ 1 ವಾಹನವನ್ನು ನಿಯೋಜನೆ ಮಾಡಲಾಗುತ್ತಿದೆ. ಹೊರಗುತ್ತಿಗೆ ಆಧಾರದ ಮೇಲೆ ಮತ್ತೊಂದು ವಾಹನವನ್ನು ಸೇವೆಗೆ ತೆಗೆದುಕೊಂಡು ಗುಂಡ್ಲುಪೇಟೆ ತಾಲೂಕಿಗೆ ಕಳುಹಿಸಲಾಗುತ್ತದೆ.
ಜಿಲ್ಲಾ ಆರೋಗ್ಯ ಇಲಾಖೆ ಆರೋಗ್ಯ ಸೇತು ಸೇವೆಯನ್ನು ನಿರಂತರವಾಗಿ ಮುಂದುವರೆಸಲು ಹೊರಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಖರೀದಿ ಮಾಡಿ ಆರೋಗ್ಯ ಸೇತು ಆರಂಭಿಸುವ ಬದಲು ಸ್ವಂತ ವಾಹನಗಳನ್ನು ಖರೀದಿ ಮಾಡಿದೆ. ಈ ಕಾರ್ಯಕ್ರಮದ ಹೊರುಗುತ್ತಿಗೆ ಅವಧಿ ಮುಗಿದ ಬಳಿಕವೂ ಗುಡ್ಡಗಾಡು, ಹಾಡಿ, ಪೋಡುಗಳ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತದೆ ಎಂದು ಡಿಎಚ್‌ಒ ಡಾ.ಚಿದಂಬರ ವಿಜಯವಾಣಿಗೆ ತಿಳಿಸಿದ್ದಾರೆ.
ಅರಣ್ಯ ಮತ್ತು ಅದರ ಅಂಚಿನಲ್ಲಿರುವ ಪ್ರದೇಶಗಳಿಗೆ ಆರೋಗ್ಯ ಸೇವೆ ಒದಗಿಸುವ ಸಲುವಾಗಿ 3 ಆರೋಗ್ಯ ಸೇತು ಮೊಬೈಲ್ ಹೆಲ್ತ್ ಯೂನಿಟ್‌ಗಳು ನಾಲ್ಕೈದು ದಿನಗಳಲ್ಲಿ ಕಾರ್ಯಾರಂಭ ಮಾಡಲಿವೆ. ಜಿಲ್ಲೆಯಲ್ಲಿರುವ ದುರ್ಗಮ ಪ್ರದೇಶಗಳಿಗೆ ಮೊಬೈಲ್ ಹೆಲ್ತ್ ಯೂನಿಟ್‌ಗಳ ಅವಶ್ಯಕತೆ ಇರುವುದನ್ನು ಮನಗಂಡು ಈ ಮೊದಲೇ ಮೊಬೈಲ್ ಹೆಲ್ತ್ ಯೂನಿಟ್ ವಾಹನಗಳನ್ನು ಡಿಎಂಎ್ ಂಡ್‌ನಿಂದ ಖರೀದಿಸಲು ಕೋರಲಾಗಿತ್ತು. ಅದರಂತೆ ಸಿಕ್ಕಿರುವ 3 ವಾಹನಗಳು ಆರೋಗ್ಯ ಸೇತುವಾಗಿ ಕೆಲಸ ಮಾಡಲಿವೆ. 1 ವಾಹನವನ್ನು ಹೊರಗುತ್ತಿಗೆ ಆಧಾರದಲ್ಲಿ ಸೇವೆಗೆ ಪಡೆಯಲಾಗುವುದು. ಡಾ.ಚಿದಂಬರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಚಾಮರಾಜನಗರ
ನಮ್ಮೂರಲ್ಲಿ ಯಾರಿಗಾದರೂ ಆರೋಗ್ಯ ಹದಗೆಟ್ಟರೆ ನಾಲ್ಕು ಜನ ಡೋಲಿ ಕಟ್ಟಿಕೊಂಡು ಆಸ್ಪತ್ರೆಗೆ ಎತ್ತಿಕೊಂಡು ಹೋಗುತ್ತೇವೆ. ರಾತ್ರಿ ವೇಳೆ ಕಾಡುಪ್ರಾಣಿಗಳ ಭಯ, ಮತ್ತೊಂದೆಡೆ ರೋಗಿಯ ಆರೋಗ್ಯದ ಚಿಂತೆಯಲ್ಲಿ ಓಡೋಡಿ ಆಸ್ಪತ್ರೆಗೆ ಸೇರುವ ನಮ್ಮ ಸ್ಥಿತಿ ಯಾರಿಗೂ ಬೇಡ. ಈ ಪರಿಸ್ಥಿತಿಯನ್ನು ಆರೋಗ್ಯ ಸೇತು ಬದಲು ಮಾಡಿದರೆ ಅದಕ್ಕಿಂತ ಉತ್ತಮ ಯೋಜನೆ ಮತ್ತೊಂದಿರುವುದಿಲ್ಲ.ಪಡಸಲ, ಮೆಂದಾರೆ ಗ್ರಾಮಸ್ಥ