ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಮೊದಲನೇ ವಾರ್ಷಿಕೋತ್ಸವಕ್ಕೆ ಸಜ್ಜಾಗುತ್ತಿರುವ ಅಲ್ಲಳ್ಳಿ ಪಾರ್ವತಾಂಬೆ ದೇವಾಲಯ. 
ಚಾಮರಾಜನಗರ

10ರಂದು ಪಾರ್ವತಾಂಬೆ ದೇಗುಲ ಆರಾಧನಾ ಮಹೋತ್ಸವ

ಗುಂಡ್ಲುಪೇಟೆ: ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಫೆ.10 ರಂದು ಪಾರ್ವತಾಂಬೆ ದೇವಸ್ಥಾನದ ಪ್ರಥಮ ವರ್ಷದ ಆರಾಧನಾ ಮಹೋತ್ಸವ ನಡೆಯಲಿದ್ದು, ಇದೇ ಮೊದಲ ಬಾರಿಗೆ ಹಳ್ಳಿಕಾರ್ ಜೋಡೆತ್ತುಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಆರಾಧನಾ ಮಹೋತ್ಸವ ಅಂಗವಾಗಿ ಫೆ.9ರಂದು ರಥದ ಮನೆಯಲ್ಲಿ ಹೋಮ ಹವನ ಹಾಗೂ ಅಮ್ಮನವರಿಗೆ ವಿಶೇಷ ಪೂಜೆ ನಡೆಯಲಿದೆ. ಇದರೊಂದಿಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೋಮಹಳ್ಳಿ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಮಲ್ಲ ಸ್ವಾಮೀಜಿ ಅವರು ರಥದ ಮನೆಯನ್ನು ಉದ್ಘಾಟಿಸುವರು. ಮೂಡಗೂರು ಉದ್ದಾನೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ ಉದ್ದಾನೇಶ್ವರ ಸ್ವಾಮೀಜಿ ಪಾಲ್ಗೊಳ್ಳುವರು.
10ರಂದು ನಡೆಯುವ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಸುಮಾರು 50 ಸಾವಿರ ಭಕ್ತರು ಸೇರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಿಸಲಾಗಿದೆ. ಅಲ್ಲದೆ ಶ್ರೀ ಸಚ್ಚಿದಾನಂದ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸಚ್ಚಿದಾನಂದ, ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್, ಹಾಸ್ಯ ನಟ ಟೆನ್ನಿಸ್ ಕೃಷ್ಣ, ಜಾನಪದ ಕಲಾವಿದ ಅಮ್ಮ ರಾಮಚಂದ್ರ ಪಾಲ್ಗೊಳ್ಳುವರು.
ಉತ್ತಮ ರಾಸುಗಳಿಗೆ ಬಹುಮಾನ: ಹಸಗೂಲಿ ಜಾತ್ರೆಯನ್ನು ದನಗಳ ಜಾತ್ರೆ ಎಂದೇ ಕರೆಯಲಾಗುತ್ತದೆ. ಶ್ರೀ ಅಲ್ಲಹಳ್ಳಿ ಪಾರ್ವತಾಂಬೆ ಜಾನುವಾರುಗಳ ಪ್ರೀತಿಯ ದೇವರು. ಎಂತಹ ರೋಗಗಳಿದ್ದರೂ ಇಲ್ಲಿಗೆ ಹರಕೆ ಹೊತ್ತರೆ ಗುಣವಾಗುತ್ತದೆ ಎಂಬ ನಂಬಿಕೆಯಿದೆ. ರೋಗಮುಕ್ತವಾದ ರಾಸನ್ನು ಜಾತ್ರೆಗೆ ಕರೆತಂದು ಅವುಗಳ ಕೊಂಬುಗಳಿಗೆ ಪಂಜುಹಚ್ಚಿ ಹರಕೆ ನೀರಿಸುವ ಸಂಪ್ರದಾಯ ನಡೆಯುತ್ತಾ ಬಂದಿದೆ.

60ರಲ್ಲಿ ದೇವಾಲಯದ ಅಭಿವೃದ್ಧಿ ಹಾಗೂ ಜಾತ್ರೆ ನಿರ್ಹಹಣೆಗೆ ಟ್ರಸ್ಟ್ ರಚಿಸಿ ಮೂರನೆ ತಲೆಮಾರಿನವರು ಅಚ್ಚುಕಟ್ಟಾಗಿ ನಡೆಸಲಾಗುತ್ತಿದೆ. ಕಳೆದ ವರ್ಷ 3 ಕೋಟಿ ರೂ.ವೆಚ್ಚದಲ್ಲಿ 1,500 ಟನ್ ಕಲ್ಲಿನಿಂದ ದೇವಾಲಯ ನಿರ್ಮಿಸಲಾಗಿದೆ. ಇದೇ ಮೊದಲ ಬಾರಿಗೆ ಹಳ್ಳಿಕಾರ್ ರಾಸುಗಳ ಪ್ರದರ್ಶನ ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮಹೇಶ್, ಜಾತ್ರಾ ಸಮಿತಿ ಸದಸ್ಯ