ಚಾಮರಾಜನಗರ

ಶೀಘ್ರ ಪಟ್ಟಣದ ಕ್ರೀಡಾಂಗಣ ಅಭಿವೃದ್ಧಿ

ಹನೂರು: ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಜತೆಗೆ ಶೈಕ್ಷಣಿಕ ಗುರಿ ಸಾಧನೆಗೆ ಕ್ರೀಡೆ ಸಹಕಾರಿ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಪಟ್ಟಣದ ಶ್ರೀ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ 14ಮತ್ತು 17 ವರ್ಷದೊಳಗಿನ ಶಾಲಾ ಮಕ್ಕಳ ಉದ್ಘಾಟಿಸಿ ಮಾತನಾಡಿದರು. ಹನೂರು ಶೈಕ್ಷಣಿಕ ವಲಯದಲ್ಲಿನ ಮಕ್ಕಳು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಪ್ರತಿನಿಧಿಸಿರುವುದು ಮೆಚ್ಚುಗೆಯ ಸಂಗತಿ. ಇನ್ನು ಪಠ್ಯ ಎಷ್ಟು ಮುಖ್ಯವೋ ಕ್ರೀಡೆಯು ಅಷ್ಟೇ ಮುಖ್ಯ. ಕ್ರೀಡೆಯು ಮಕ್ಕಳಲ್ಲಿ ಶಿಸ್ತು ಹಾಗೂ ಏಕಾಗ್ರತೆ ಮೂಡಿಸುತ್ತದೆ. ಆತ್ಮಸ್ಥೈರ್ಯದೊಂದಿಗೆ ಗುರಿ ಸಾಧಿಸುವ ಛಲ ಬೆಳೆಸುತ್ತದೆ. ಕೌಶಲದಲ್ಲಿ ಪರಿಣಿತ ಸಾಧಿಸಬಹುದಾಗಿದೆ. ಇದು ಶೈಕ್ಷಣಿಕ ಗುರಿ ಸಾಧನೆಗೂ ಸಹಕಾರಿಯಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು. ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳ ಕ್ರೀಡಾ ಕೌಶಲ ಗುರುತಿಸಿ ಅಗತ್ಯ ತರಬೇತಿ ನೀಡಬೇಕು ಎಂದು ತಿಳಿಸಿದರು.
ಹನೂರು ಭಾಗದಲ್ಲಿ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಿರುವುದರಿಂದ ಪಟ್ಟಣದ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಬೇಕಿದೆ. ಇದು ಕ್ರೀಡಾಪಟುಗಳ ಒತ್ತಾಸೆಯು ಆಗಿದೆ. ಈ ದಿಸೆಯಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸುವುದರ ಜತೆಗೆ ಸುಸಜ್ಜಿತ ಕ್ರೀಡಾಂಗಣ ಅಭಿವೃದ್ಧಿಗೆ ಈಗಾಗಲೇ ಹೆಚ್ಚಿನ ಒತ್ತು ನೀಡಿ ರೂಪುರೇಷೆ ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ರೀಡಾಂಗಣವು ಅಭಿವೃದ್ಧಿ ಹೊಂದಲಿದೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನಾ ಕ್ರೀಡಾ ಧ್ವಜಾರೋಹಣ ನೆರವೇರಿಸಲಾಯಿತು. ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಪಥ ಸಂಚಲನ ನಡೆಸುವುದರ ಮೂಲಕ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ಬಿಇಒ ಮಹೇಶ್ ಕ್ರೀಡಾಜ್ಯೋತಿ ಬೆಳಗಿಸಿದರು. ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಪಪಂ ಉಪಾಧ್ಯಕ್ಷ ಆನಂದಕುಮಾರ್, ಪಿಎಸಿಸಿ ನಿರ್ದೇಶಕ ಮಂಜೇಶ್, ಬಿಆರ್‌ಸಿ ವೆಂಕಟೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಇದ್ದರು.