ಇಂಡಿಗನತ್ತ ಶಾಲೆಯಲ್ಲಿ ಸಮತ್ವ ಟ್ರಸ್ಟ್ ವತಿಯಿಂದ 32 ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಿದ್ದಪ್ಪ ಶೆಟ್ಟಿ, ಶ್ರೀನಿವಾಸ್, ನೀಲಮ್, ರಾಘವೇಂದ್ರ ಇತರರಿದ್ದರು.
ಹನೂರು : ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಇಂಡಿಗನತ್ತ, ತೇಕಣೆ ಹಾಗೂ ಪಡಸಲನತ್ತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 32 ವಿದ್ಯಾರ್ಥಿಗಳಿಗೆ ಶುಕ್ರವಾರ ಬೆಂಗಳೂರು ಸಮತ್ವ ಟ್ರಸ್ಟ್ ವತಿಯಿಂದ ತಲಾ ಒಂದು ಸಾವಿರ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಈ ವೇಳೆ ಸಮತ್ವ ಟ್ರಸ್ಟ್‌ನ ಸಿದ್ದಪ್ಪ ಶೆಟ್ಟಿ ಮಾತನಾಡಿ, ಮ.ಬೆಟ್ಟದ ಭಾಗವು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ಈ ಭಾಗದಲ್ಲಿ ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿರುವುದು ಸಂತಸದ ಸಂಗತಿ. ಇಲ್ಲಿನ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಬಹುತೇಕ ಮಕ್ಕಳು ಬಡತನ ಕುಟುಂಬಕ್ಕೆ ಸೇರಿದ್ದಾರೆ. ಹೀಗಾಗಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಹಾಗೂ ಉತ್ತೇಜನ ನೀಡುವ ಸಲುವಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ಓದಿನ ಕಡೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮತ್ವ ಟ್ರಸ್ಟ್ ಸದಸ್ಯರಾದ ಶ್ರೀನಿವಾಸ್, ನೀಲಮ್, ಮುಖ್ಯಶಿಕ್ಷಕ ರಾಘವೇಂದ್ರ ಹಾಗೂ ಗ್ರಾಮಸ್ಥರು ಇದ್ದರು.