ಹನೂರಿನ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಅವರನ್ನು ಸನ್ಮಾನಿಸಲಾಯಿತು. ರಾಜು, ಮಹಾದೇವ, ರವಿಚಂದ್ರ, ರಾಮಸ್ವಾಮಿ ಇತರರು ಇದ್ದರು.  
ಚಾಮರಾಜನಗರ

ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಿ

ಎ. ಆರ್. ರಘುರಾಮ
ಹನೂರು : ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದರು. ಸಮುದಾಯವು ಅಭಿವೃದ್ಧಿ ಹೊಂದಬೇಕು ಎನ್ನುವ ಉದ್ದೇಶದಿಂದ ಪ್ರತಿ ಜಿಲ್ಲೆಗೂ ಭೇಟಿ ನೀಡಿ ಜನರಿಂದ ಸಮಸ್ಯೆ ಆಲಿಸಿ ಪರಿಹರಿಸುವ ಕೆಲಸ ಮಾಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ಚಾ.ನಗರ ಜಿಲ್ಲೆಗೆ ಅದರಲ್ಲೂ ಗಡಿ ತಾಲೂಕು ಹನೂರಿಗೆ ಆಗಮಿಸಿದ್ದೇನೆ. ಸಮುದಾಯದ ಕಟ್ಟೆಕಡೆಯ ವ್ಯಕ್ತಿಗೂ ಸರ್ಕಾರದಿಂದ ಸಿಗುವ ಸವಲತ್ತುಗಳು ದೊರಕಬೇಕು ಎಂದರು.
ನಿಗಮದಿಂದ ಗಂಗಾ ಕಲ್ಯಾಣ, ಉದ್ಯಮ ಶೀಲತಾ ಯೋಜನೆ, ನೇರಸಾಲ ಸೇರಿದತೆ ಇನ್ನಿತರೆ ಸವಲತ್ತುಗಳಿವೆ. ಸಿಎಂ, ಡಿಸಿಎಂ ಅವರು ನಿಗಮದ ಬಗ್ಗೆ ಉತ್ತಮ ಒಲವನ್ನು ಹೊಂದಿದ್ದಾರೆ. ಪ್ರತಿ ಕುಟುಂಬವೂ ಇದರ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
29ರಂದು ಸಭೆ:
ಡಿ.29 ರಂದು ಬೆಂಗಳೂರಿನಲ್ಲಿ ನಿಗಮದ ಹಿರಿಯ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಅನುದಾನದ ಹಂಚಿಕೆಯಲ್ಲಿ ಪ್ರತಿ ಜಿಲ್ಲೆಗೂ ಸಮರ್ಪಕವಾಗಿ ಸಿಗುವಂತಾಗಬೇಕು. ಈ ವಿಚಾರದಲ್ಲಿ ವ್ಯತ್ಯಾಸವಿದ್ದಲ್ಲಿ ಪರಿಶೀಲಿಸಿ ಸರಿಪಡಿಸಲಾಗುವುದು. ಒಟ್ಟಿನಲ್ಲಿ ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಸವಲತ್ತುಗಳು ಸಮರ್ಪಕವಾಗಿ
ದೊರಕಬೇಕು ಎಂದು ತಿಳಿಸಿದರು.
ಭೋವಿ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೆ. ರಾಜು ಮಾತನಾಡಿ, ಜಿಲ್ಲೆಯಲ್ಲಿ ಸಮುದಾಯವು 65 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಆದರೆ ಸರ್ಕಾರದ ಅಂಕಿ ಅಂಶದ ಪ್ರಕಾರ 6 ಸಾವಿರ ಮಾತ್ರ ಇದೆ. ಇದರಿಂದ ಸಮುದಾಯದ ಜನರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಅಧ್ಯಕ್ಷರು ಪ್ರತಿಕ್ರಿಯಿಸಿ, ಗಣತಿ ವೇಳೆ ಜಾತಿಯನ್ನು ಸ್ಪಷ್ಟವಾಗಿ ನಮೂದಿಸುವಂತೆ ಸಲಹೆ ನೀಡಿದರು. ಜತೆಗೆ ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ರಾಜು, ಮುಖಂಡರಾದ ಮಹಾದೇವ, ರವಿಚಂದ್ರ, ರಾಮಸ್ವಾಮಿ, ಕೃಷ್ಣ, ರಾಕೇಶ್, ರಾಮು, ನಾಗೇಶ್, ವೆಂಕಟೇಶ್ ಹಾಗೂ ಇನ್ನಿತರರು ಇದ್ದರು.