ಪರಿಸರ ಸ್ನೇಹಿ ಕೈ ಚೀಲ ಬಳಕೆ ಕುರಿತು ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರು ಹಾಗೂ ಮಾರಾಟಗಾರರಲ್ಲಿ ಜಾಗೃತಿ ಮೂಡಿಸಲಾಯಿತು. ಎ.ಈ ರಘು, ಕಿರಣ್ ಇತರರು ಇದ್ದರು.
ಹನೂರು: ಪರಿಸರ ಸ್ನೇಹಿ ಕೈ ಚೀಲವನ್ನು ಭಕ್ತರು ಬಳಕೆ ಮಾಡುವುದರ ಜತೆಗೆ ಅಂಗಡಿಯವರೂ ಮಾರಾಟ ಮಾಡುವ ಮೂಲಕ ಮಲೆಮಹದೇಶ್ವರ ಬೆಟ್ಟವನ್ನು ಪ್ಲಾಸ್ಟಿಕ್‌ಮುಕ್ತ ಪ್ರದೇಶವಾಗಿಸಲು ಸಹಕರಿಸಬೇಕು ಎಂದು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ತಿಳಿಸಿದರು.
ಮ.ಬೆಟ್ಟದ ರಂಗಮಂದಿರದಲ್ಲಿ ಸೋಮವಾರ ಪರಿಸರ ಸ್ನೇಹಿ ಕೈ ಚೀಲಗಳ ಬಳಕೆ ಕುರಿತು ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮ.ಬೆಟ್ಟ ಲಕ್ಷಾಂತರ ಭಕ್ತರು ಭೇಟಿ ನೀಡುವ ಧಾರ್ಮಿಕ ಪುಣ್ಯ ಸ್ಥಳವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಆದ್ದರಿಂದ ಮ.ಬೆಟ್ಟದಲ್ಲಿ ಪಾವಿತ್ರ್ಯತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯ. ಈ ದಿಸೆಯಲ್ಲಿ ಈಗಾಗಲೇ ಮ.ಬೆಟ್ಟವನ್ನು ಪ್ಲಾಸ್ಟಿಕ್‌ಮುಕ್ತ ಪ್ರದೇಶವಾಗಿ ಘೋಷಿಸಲಾಗಿದೆ. ಆದರೂ ಭಕ್ತರು ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುತ್ತಿರುವುದುಬೇಸರದ ಸಂಗತಿ. ಇದರಿಂದ ಕ್ಷೇತ್ರದ ನೈರ್ಮಲ್ಯ ಹಾಳಾಗಲು ಕಾರಣವಾಗಿದೆ ಎಂದು ಹೇಳಿದರು.
ಪ್ಲಾಸ್ಟಿಕ್ ವಸ್ತುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮುಸುಕಿನ ಜೋಳ ಹಾಗೂ ಸಬ್ಬಕ್ಕಿಯಿಂದ ತಯಾರಿಸಿದ ಪರಿಸರ ಸ್ನೇಹಿ ಕೈ ಚೀಲವನ್ನು ಪರಿಚಯಿಸಲಾಗುತ್ತಿದೆ. ಬಳಸಿ ಬಿಸಾಡಿದ ಈ ಕೈ ಚೀಲ 120 ದಿನದೊಳಗೆ ಗೊಬ್ಬರವಾಗಿ ಮಾರ್ಪಡಾಗಲಿದೆ. ಜಾನುವಾರು ಗಳು ಸೇವಿಸಿದರೆ ಆಹಾರವಾಗಿ ಪರಿವರ್ತನೆಯಾಗಲಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳುವುದರ ಮೂಲಕ ಇದರ ಬಳಕೆಕೆ ಮುಂದಾಗಬೇಕು. ಹಾಗೆಯೇ ಅಂಗಡಿ ಮಳಿಗೆಗಳಲ್ಲಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಕೈ ಚೀಲವನ್ನು ತ್ಯಜಿಸಿ ಪರಿಸರ ಸ್ನೇಹಿ ಕೈ ಚೀಲವನ್ನು ಕಡ್ಡಾಯವಾಗಿ ಮಾರಾಟ ಮಾಡುವುದರ ಮೂಲಕ ಸಹಕಾರ ನೀಡಬೇಕು ಎಂದು ತಿಳಿಸಿದರು.
ಇದೇ ವೇಳೆ ಭಕ್ತರಿಗೆ ಕೈ ಚೀಲವನ್ನು ವಿತರಿಸಲಾಯಿತು. ಪಿಡಿಒ ಕಿರಣ್, ಪ್ರಾಧಿಕಾರದ ನೌಕರರು ಇತರರು ಇದ್ದರು.