ಬಂಡಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಉದ್ಘಾಟಿಸಿದರು. ಸುನೀತಾ, ಕಾವ್ಯಶ್ರೀ, ವೆಂಕಟಾಚಲ, ಮುತ್ತುರಾಜು ಇತರರು ಇದ್ದರು.
ಹನೂರು: ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತವಾಗಿ ನೀಡಲಾಗುವ ಕಾನೂನು ನೆರವನ್ನು ಅಗತ್ಯವಿರುವವರು ಪಡೆದುಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸಿ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ತಿಳಿಸಿದರು.
ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ರೋಟರಿ ಸಂಸ್ಥೆ ವತಿಯಿಂದ ತಾಲೂಕಿನ ಬಂಡಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಅಪಾರ. ಆದ್ದರಿಂದ ಪ್ರತಿಯೊಬ್ಬರೂ ಓದಿಗೆ ಹೆಚ್ಚಿನ ಒತ್ತು ನೀಡಿ ಸಾಧನೆ ಮಾಡುವುದರ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳಿವಳಿಕೆ ಹೊಂದಬೇಕು. ಇನ್ನು ಕಾನೂನು ಸೇವೆಗಳ ಪ್ರಾಧಿಕಾರ ಸರ್ಕಾರದ ಸಂಸ್ಥೆಯಾಗಿದ್ದು, ಬಡವರು, ಪರಿಶಿಷ್ಟರು, ಹಿಂದುಳಿದವರು ಹಾಗೂ ಅಂಗವಿಕಲರಿಗೆ ಉಚಿತವಾಗಿ ಕಾನೂನು ನೆರವನ್ನು ನೀಡಲಾಗುತ್ತಿದೆ. ಆದರೆ ಈ ಬಗ್ಗೆ ಕೆಲವರಿಗೆ ತಿಳಿದಿಲ್ಲ. ಆದ್ದರಿಂದ ಅಗತ್ಯವಿರುವವರಿಗೆ ಉಚಿತ ಕಾನೂನು ನೆರವಿನ ಬಗ್ಗೆ ತಿಳಿಸಿ ಕೊಡುವಂತಹ ಕೆಲಸವಾಗಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀತಾ, ಕಾವ್ಯಶ್ರೀ, ರೋಟರಿ ಸಂಸ್ಥೆಯ ವೆಂಕಟಾಚಲ, ಪ್ರಕಾಶ್, ಸರಸ್ವತಿ, ಉಷಾ, ವಿಜಯಕುಮಾರ್, ಪ್ರಾಂಶುಪಾಲ ಎಂ.ಮುತ್ತುರಾಜು, ಉಪನ್ಯಾಸಕರಾದ ನಾಗಸುಂದರ್, ನರೇಂದ್ರನಾಥ್, ಮಹೇಂದ್ರ, ರಾಜೇಶ್, ಬಸವರಾಜು, ಮಹಾದೇವಶೆಟ್ಟಿ, ಪ್ರಶಾಂತ್, ಆನಂದ್ ಇತರರು ಇದ್ದರು.