ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಪಡೆದ ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಶಬರಿಯನ್ನು ಶಾಸಕ ಎಂ.ಆರ್ ಮಂಜುನಾಥ್ ಅಭಿನಂದಿಸಿದರು. ಮಹೇಶ್, ವೆಂಕಟೇಶ್, ಮಹೇಶ್, ಕೃಷ್ಣೇಗೌಡ ಇತರರಿದ್ದರು.  
ಚಾಮರಾಜನಗರ

ಹನೂರಿಗೆ ಒಲಿದ ದ್ವಿತೀಯ ಸ್ಥಾನ

ಪ್ರಮುಖ ಮುಖ್ಯಾಂಶಗಳು

  • ಫಲ ನೀಡಿದ ಅಧಿಕಾರಿಗಳು, ಶಿಕ್ಷಕರ ಶ್ರಮ
ಹನೂರು: ಕಳೆದ 2 ವರ್ಷದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆಯುತ್ತಿದ್ದ ಹನೂರು ಶೈಕ್ಷಣಿಕ ವಲಯ ಈ ಬಾರಿ ಶೇ.95.98ರಷ್ಟು ಫಲಿತಾಂಶ ಪಡೆಯುವ ಮೂಲಕ ದ್ವಿತೀಯ ಸ್ಥಾನಕ್ಕೆ ಜಿಗಿದಿದೆ.
ಶೈಕ್ಷಣಿಕ ವಲಯದಲ್ಲಿ ಈ ಬಾರಿ 1,049 ಬಾಲಕರು, 1,035 ಬಾಲಕಿಯರು ಸೇರಿದಂತೆ 2,084 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 990 ಬಾಲಕರು, 1,014 ಬಾಲಕಿಯರು ಸೇರಿದಂತೆ ಒಟ್ಟು 2,004 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 2023-24ನೇ ಸಾಲಿನಲ್ಲಿ ಶೈಕ್ಷಣಿಕ ವಲಯ ಶೇಕಡ 77.13 ಹಾಗೂ 2024-25ನೇ ಸಾಲಿನಲ್ಲಿ ಶೇ.58ರಷ್ಟು ಫಲಿತಾಂಶ ಪಡೆದು ಜಿಲ್ಲೆಯಲ್ಲಿಯೇ ಕೊನೆಯ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಶೇ.95.98ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ 2ನೇ ಸ್ಥಾನವನ್ನು ಪಡೆದಿರುವುದು ನಿಜಕ್ಕೂ ಮೆಚ್ಚುವ ಸಂಗತಿ.
ಫಲಿತಾಂಶಕ್ಕೆ ಕಾರಣ: ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮ ಪಡಿಸುವ ನಿಟ್ಟನಲ್ಲಿ ಬಿಇಒ ಮಹೇಶ್, ಅಧಿಕಾರಿಗಳು ಹಾಗೂ ಶಿಕ್ಷಕರು ಹೆಚ್ಚಿನ ಒತ್ತು ನೀಡಿ ಇನ್ನಿಲ್ಲದ ಶ್ರಮ ವಹಿಸಿದ್ದರು. ವಲಯದ 44 ಪ್ರೌಢಶಾಲೆಗಳಲ್ಲಿ ಸರ್ಕಾರದ 29 ಅಂಶಗಳ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿತ್ತು. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ಮೌಲ್ಯಮಾಪನ ಚಟುವಟಿಕೆಗಳು, ಕಲಿಕಾ ಪ್ರಗತಿಯ ಅವಲೋಕನ, ಪರಿಹಾರ ಬೋಧನೆ, ರಾತ್ರಿ ತರಗತಿ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರ ಸಭೆ, ಭಾಷವಾರು ಹಾಗೂ ಕೋರ್ ವಿಷಯವಾರು ಶಿಕ್ಷಕರಿಗೆ ನೀಲಿನಕ್ಷೆ ಆಧಾರಿತ ತರಬೇತಿ, ಮಕ್ಕಳ ಮನೆಗಳಿಗೆ ಅಧಿಕಾರಿಗಳು, ಶಿಕ್ಷಕರ ಭೇಟಿ ಸೇರಿದಂತೆ ಹಲವು ಕಾರ್ಯತಂತ್ರವನ್ನು ಕೈಗೊಳ್ಳಲಾಗಿತ್ತು. ಜತೆಗೆ ವಿಶೇಷವಾಗಿ ಶಾಸಕ ಎಂ.ಆರ್ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಭರವಸೆಯ ಬೆಳಕು ವಿನೂತನ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಧೈರ್ಯ ತುಂಬಿಸುವುದರ ಜತೆಗೆ ಸಂಪನ್ಮೂಲ ಶಿಕ್ಷಕರಿಂದ ವಿಷಯವಾರು ಅಗತ್ಯ ಮಾರ್ಗದರ್ಶನ ನೀಡಲಾಗಿತ್ತು. ಇದರ ಪರಿಣಾಮ ಶೈಕ್ಷಣಿಕ ವಲಯ ಈ ಬಾರಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಶಬರಿ ತಾಲೂಕಿನ ಟಾಪರ್: ಕೆಂಪಯ್ಯನಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಗ್ರಾಮದ ಶರವಣ ಮತ್ತು ಕನಕವಲ್ಲಿ ದಂಪತಿ ಪುತ್ರ ಶಬರಿ 625ಕ್ಕೆ 618 ಅಂಕವನ್ನು ಪಡೆಯುವುದರ ಮೂಲಕ ತಾಲೂಕಿನ ಟಾಪರ್ ಎನಿಸಿದ್ದಾನೆ.
ಶಾಸಕರಿಂದ ಅಭಿನಂದನೆ: ತಾಲೂಕಿನ ಟಾಪರ್ ಶಬರಿ ಮನೆಗೆ ಶಾಸಕ ಎಂ.ಆರ್ ಮಂಜುನಾಥ್, ಬಿಇಒ ಮಹೇಶ್ ಹಾಗೂ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಸಿಹಿ ತಿನಿಸುವುದರ ಜತೆಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕರು, ಹನೂರು ಶೈಕ್ಷಣಿಕ ವಲಯ ಈ ಬಾರಿ ಶೇ. 95.98ರಷ್ಟು ಫಲಿತಾಂಶವನ್ನು ಪಡೆಯುವುದರ ಮೂಲಕ ಜಿಲ್ಲೆಯಲ್ಲಿ 2ನೇ ಸ್ಥಾನ ಪಡೆದಿರುವುದು ಸಂತಸ ತಂದಿದೆ. ಇದಕ್ಕೆ ಅಧಿಕಾರಿಗಳು ಹಾಗೂ ಶಿಕ್ಷಕರ ಶ್ರಮ ಅಪಾರ ಎಂದು ತಿಳಿಸಿದರು.