ಪಿ.ಜಿ ಪಾಳ್ಯ ಸಫಾರಿಯಲ್ಲಿ ಮರದ ಮೇಲೆ ವಿಶ್ರಮಿಸುತ್ತಿದ್ದ ರೀತಿಯಲ್ಲಿ ಪ್ರವಾಸಿಗರಿಗೆ ದರ್ಶನ ನೀಡಿದ ಚಿರತೆ. 
ಚಾಮರಾಜನಗರ

ಪ್ರವಾಸಿಗರಿಗೆ ಚಿರತೆ ದರ್ಶನ

ಹನೂರು: ತಾಲೂಕಿನ ಪಿ.ಜಿ.ಪಾಳ್ಯ ಸಫಾರಿಯಲ್ಲಿ ಭಾನುವಾರ ಸಂಜೆ ಪ್ರವಾಸಿಗರಿಗೆ ಮರದ ಮೇಲೆ ವಿಶ್ರಮಿಸುತ್ತಿದ್ದ ಚಿರತೆಯೊಂದು ದರ್ಶನ ನೀಡಿದೆ.
ಪಿ.ಜಿ.ಪಾಳ್ಯ ಸಫಾರಿಯಲ್ಲಿ ಹುಲಿ, ಆನೆ, ಚಿರತೆ, ಕಾಡೆಮ್ಮೆ, ಸೀಳುನಾಯಿ, ಜಿಂಕೆ ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳು ವಾಸಿಸುತ್ತಿದ್ದು, ಪ್ರವಾಸಿಗರಿಗೆ ವೀಕ್ಷಣೆಯ ತಾಣವಾಗಿದೆ. ಹಾಗಾಗಿ ಈ ಸಫಾರಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆನೆ, ಕಾಡೆಮ್ಮೆ, ಸೀಳುನಾಯಿ ಹಾಗೂ ಜಿಂಕೆ ಆಗಾಗ್ಗೆ ಕಾಣಸಿಗುತ್ತವೆ. ಆದರೆ ಚಿರತೆ ಹಾಗೂ ಹುಲಿಯ ದರ್ಶನ ಅಪರೂಪ.
ಸಂಜೆ 4ರ ವೇಳೆಯಲ್ಲಿ ಸಫಾರಿಗೆ ತೆರಳಿದ್ದ ಬೆಂಗಳೂರು ಮೂಲದ ಪ್ರವಾಸಿಗರಿಗೆ ಆಂಡಿಪಾಳ್ಯ ಗಸ್ತಿನಲ್ಲಿ ಚಿರತೆಯೊಂದು ಮರದ ಕೊಂಬೆಯ ಮೇಲೆ ನಾಲ್ಕು ಕಾಲುಗಳನ್ನು ಇರಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದ ರೀತಿಯಲ್ಲಿ ದರ್ಶನ ನೀಡಿದೆ. ದಿಟ್ಟಸಿ ನೋಡಿದರೂ ಯಾವುದೇ ರೀತಿಯಲ್ಲೂ ತೊಂದರೆ ನೀಡಲಿಲ್ಲ. ಇದರ ದೃಶ್ಯವನ್ನು ಪ್ರವಾಸಿಗರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.