ಹನೂರು ತಾಲೂಕು ರಾಚಪ್ಪಾಜಿ ನಗರದಲ್ಲಿ ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ರಂಗೇಗೌಡ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕುಂದು ಕೊರತೆ ಸಭೆಯಲ್ಲಿ ಮಹದೇವಸ್ವಾಮಿ, ರಾಜಪ್ಪ, ಮಹದೇವಮ್ಮ ಇತರರಿದ್ದರು.
ಹನೂರು : ತಾಲೂಕಿನ ಸೋಲಿಗರ ಹಾಡಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ತಾಲೂಕು ಅಭಿವೃದ್ಧಿ ಸಂಘದ ಕಾರ್ಯದರ್ಶಿ ರಂಗೇಗೌಡ ಒತ್ತಾಯಿಸಿದರು.
ಹನೂರು ಕ್ಷೇತ್ರ ವ್ಯಾಪ್ತಿಯ ರಾಚಪ್ಪಾಜಿ ನಗರದಲ್ಲಿ ಮಂಗಳವಾರ ಗುಂಡಾಲ್ ಸರ್ಕಲ್ ಸೋಲಿಗರ ಅಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಕುಂದು ಕೊರತೆ ಸಭೆಯಲ್ಲಿ ಮುಖಂಡರಿಂದ ಮಾಹಿತಿ ಪಡೆದು ಮಾತನಾಡಿದರು.
ಗಿರಿಜನರ ಹಾಡಿಗಳಲ್ಲಿನ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಇದರ ವಿರುದ್ಧ ಹಿಂದೆ ಪ್ರತಿಭಟನೆಯನ್ನು ನಡೆಸಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ. ಇದರಿಂದ ಗಿರಿಜನರು ಅದರಲ್ಲೂ ಯುವಕರು ಮದ್ಯದ ಚಟಕ್ಕೆ ಒಳಗಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ಕುಟುಂಬ ಹಾಗೂ ಸಮುದಾಯದ ಮೇಲೆ ದುಷ್ಪಾರಿಣಾಮ ಬೀರುತ್ತಿದೆ. ಹಾಗಾಗಿ ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟದ್ದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದರು.
ಈ ಹಿಂದೆ ಕಾವೇರಿ ನದಿ ಪಾತ್ರದಲ್ಲಿನ ಗ್ರಾಮಗಳಾದ ರಾಚಪ್ಪಾಜಿ ನಗರ, ಗಾಣಿಗಮಂಗಲ, ದಂಟಳ್ಳಿ ಹಾಗೂ ಆಲಂಬಾಡಿ ಭಾಗದ ಗಿರಿಜನರು ಸಮುದಾಯದ ಹಕ್ಕಿನಡಿ ಮೀನನ್ನು ಹಿಡಿಯುತ್ತಿದ್ದು, ಜೀವನಕ್ಕೆ ಅನುಕೂಲವಾಗಿತ್ತು. ಆದರೀಗ ಅರಣ್ಯ ಇಲಾಖೆ ಮೀನು ಹಿಡಿಯಲು ಕಡಿವಾಣ ಹಾಕಿದ್ದು, ಸಮಸ್ಯೆಯಾಗಿ ಪರಿಣಮಿಸಿದೆ. ಇನ್ನು ವಿವಾಹವಾದ ಕುಟುಂಬಗಳಿಗೆ ಅಗತ್ಯ ದಾಖಲೆಗಳ ಕೊರತೆಯಿಂದ ಪಡಿತರ ಚೀಟಿ ಇಲ್ಲ. ಇದರಿಂದ ತೊಂದರೆ ಅನುಭವಿಸುವಂತಾಗಿದೆ ಎಂದರು.
ಹಾಡಿಯ ಕೆಲವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಚಿಕಿತ್ಸೆ ಅಗತ್ಯವಾಗಿದೆ. ಕೆಲವು ಗ್ರಾಮಗಳಲ್ಲಿ ಗಿರಿಜನರಿಗೆ ನರೇಗಾ ಯೋಜನೆಯಡಿ ಉದ್ಯೋಗ ನೀಡುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಈ ದೆಸೆಯಲ್ಲಿ ಪ್ರತಿಯೊಬ್ಬರೂ ಸಂಘಟಿತರಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಇದೇ ವೇಳೆ ಹಾಡಿಗಳಲ್ಲಿ ಅಗತ್ಯ ಮೂಲ ಸೌಕರ್ಯ, ಸಂಘದ ಬಲವರ್ಧನೆ ಹಾಗೂ ಮಕ್ಕಳ ಶಿಕ್ಷಣದ ಬಗ್ಗೆ ಚರ್ಚಿಸಲಾಯಿತು. ಜಿಲ್ಲಾ ಸೋಲಿಗ ಅಭಿವೃದ್ಧಿ ಸಂಘದ ನಿರ್ದೇಶಕ ರಾಜಪ್ಪ, ತಾಲೂಕು ಸಂಯೋಜಕ ಮಹದೇವಸ್ವಾಮಿ, ಮುಖಂಡರಾದ ಗಿರೀಶ್ ಕುಮಾರ್, ಜಡೇಯಪ್ಪ, ಶಿವು, ರವೀಂದ್ರ, ಶಿವಮಲ್ಲು, ಮಹದೇವಮ್ಮ ಹಾಗೂ ಇನ್ನಿತರರಿದ್ದರು.