ಕಂಚಗಳ್ಳಿಯಲ್ಲಿ ಆಯೋಜಿಸಿದ್ದ ಟಿಆರ್‌ಐ ನಡಿಗೆ ಪೋಡಿನ ಕಡೆಗೆ ಸಮಾರಂಭದಲ್ಲಿ ಸೋಲಿಗ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು. ಗಿರಿಜಾಂಬಾ, ಕೃಷ್ಣಮೂರ್ತಿ, ಮುತ್ತಯ್ಯ, ರಂಗೇಗೌಡ ಇತರರು ಇದ್ದರು. 
ಚಾಮರಾಜನಗರ

ಗಿರಿಜನರ ಅಭ್ಯುದಯಕ್ಕಿವೆ ಸಾಕಷ್ಟು ಸೌಭ್ಯ

ಹನೂರು:

ಪ್ರತಿಯೊಬ್ಬರೂ ಶಿಕ್ಷಣ ಪಡೆದಾಗ ಮಾತ್ರ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕಿ ಗಿರಿಜಾಂಬಾ ಹೇಳಿದರು.

ಕಂಚಗಳ್ಳಿಯಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಹಾಗೂ ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ವತಿಯಿಂದ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಟಿಆರ್‌ಐ ನಡಿಗೆ ಪೋಡಿನ ಕಡೆಗೆ ಸಮಾರಂಭದಲ್ಲಿ ಮಾತನಾಡಿದರು.
ಗಿರಿಜನರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಹಲವು ಸವಲತ್ತು ಒದಗಿಸುತ್ತಿದೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಹಾಗೆಯೇ ಯಾವುದೇ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಆದ್ದರಿಂದ ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಗಿರಿಜನರ ಭಾಷೆ, ಸಂಸ್ಕೃತಿ, ಸಂಪ್ರದಾಯ, ಆರೋಗ್ಯ ಶಿಕ್ಷಣ ಹಾಗೂ ಅಭಿವೃದ್ಧಿ ಕುರಿತು ಗಿರಿಜನರೊಂದಿಗೆ ಚರ್ಚಿಸಲಾಯಿತು. ಆರೋಗ್ಯ, ಉದ್ಯೋಗ, ನಿವೇಶನ, ವಸತಿ, ಸಮರ್ಪಕ ರಸ್ತೆ, ವಾಹನ ಸೌಕರ್ಯ ದೊರಕಿಸಿಕೊಡುವುದು ಹಾಗೂ ಹಕ್ಕು ಪತ್ರ ನೀಡುವಿಕೆಯಲ್ಲಿ ಉಂಟಾಗಿರುವ ಸಮಸ್ಯೆ ಸರಿಪಡಿಸಲು ಗಮನಹರಿಸುವಂತೆ ಗಿರಿಜನರು ಮನವಿ ಮಾಡಿದರು.
ಸಮುದಾಯದ ಸಾಧಕರಾದ ಸೂಲಗಿತ್ತಿ ವೀರಮ್ಮ, ನಾಟಿ ಔಷಧ ತಜ್ಞೆ ಈರಮ್ಮ, ಎಲ್‌ಎಲ್‌ಬಿ ವಿದ್ಯಾರ್ಥಿ ಅಭಿಷೇಕ್ ಹಾಗೂ ಹಿರಿಯ ಹೋರಾಟಗಾರ ಕೊಲ್ಲೇಗೌಡ, ಹುಚ್ಚಮ್ಮ ಅವರನ್ನು ಸನ್ಮಾನಿಸಲಾಯಿತು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೊರುಕನ ನೃತ್ಯ ಪ್ರದರ್ಶಿಸಲಾಯಿತು.
ಸಂಸ್ಥೆ ಸಂಶೋಧನಾಧಿಕಾರಿ ಡಾ. ಕೃಷ್ಣಮೂರ್ತಿ, ಆದಿವಾಸಿ ಸಮನ್ವಯ ಮಂಚ್ ಸಂಯೋಜಕ ವಿ. ಮುತ್ತಯ್ಯ, ತಾಲೂಕು ಅಭಿವೃದ್ಧಿ ಸಂಘದ ಕಾರ್ಯದರ್ಶಿ ರಂಗೇಗೌಡ, ಸಂಯೋಜಕ ಮಹದೇವಸ್ವಾಮಿ, ಸಮುದಾಯ ಅಭಿವೃದ್ಧಿ ಯೋಜನೆಯ ಕಾರ್ಯಕರ್ತರಾದ ಗಿರೀಶ್, ಕುಮಾರ್, ಮಹದೇವಸ್ವಾಮಿ, ಮುಖ್ಯ ಶಿಕ್ಷಕ ಪ್ರಭುಸ್ವಾಮಿ, ಮುಖಂಡರಾದ ನಂಜಪ್ಪ, ಈರಮ್ಮ ಇತರರು ಇದ್ದರು.