ಹಸುವಿನ ಸಾವಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮಾರ್ಟಳ್ಳಿ ಪಶುಪಾಲನಾ ಕಚೇರಿ ಮುಂಭಾಗ ರೈತರು ಕೈಗೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಇಲಾಖೆಯ ಡಿಡಿ ಡಾ.ಮಂಜುನಾಥ್ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಶೈಲೇಂದ್ರ, ಅರ್ಪುದರಾಜ್, ರವಿ, ಪುಟ್ಟಸ್ವಾಮಿ ಇತರರಿದ್ದರು.
ಹನೂರು: ಹಸುವಿನ ಸಾವಿಗೆ ಕಾರಣರಾದ ಪಶುಪಾಲನಾ ಇಲಾಖೆಯ ಪರೀಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶುಕ್ರವಾರ ತಾಲೂಕಿನ ಮಾರ್ಟಳ್ಳಿ ಪಶುಪಾಲನಾ ಕಚೇರಿ ಮುಂಭಾಗ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
ಕಚೇರಿ ಮುಂಭಾಗ ನೆರೆದಿದ್ದ ರೈತರು ಪಶುಪಾಲನಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ಎರಡು ದಿನಗಳ ಹಿಂದೆ ಸಮೀಪದ ಸಂದನಪಾಳ್ಯ ಗ್ರಾಮದ ರೈತ ಕೊಳಂದೈಸ್ವಾಮಿ ಎಂಬುವರ ಹಸು ಅನಾರೋಗ್ಯಕ್ಕೆ ಒಳಗಾಗಿತ್ತು. ಈ ವೇಳೆ ರೈತ ಅಗತ್ಯ ಚಿಕಿತ್ಸೆ ಕೊಡಿಸುವ ಸಲುವಾಗಿ ಪಶು ವೈದ್ಯಕೀಯ ಪರೀಕ್ಷಕ ಕ್ರಿಸ್ಟಿ ಅವರಿಗೆ ಮಾಹಿತಿ ತಿಳಿಸಿದರೂ ಸ್ಥಳಕ್ಕೆ ಆಗಮಿಸಿಲ್ಲ. ಜತೆಗೆ ಗುರುವಾರ ಮತ್ತೊಬ್ಬ ಪಶು ಪರೀಕ್ಷಕ ಬಸವರಾಜು ಅವರಿಗೆ ಫೋನ್ ಮಾಡಿದರೂ ಕರೆ ಸ್ವೀಕರಿಸಿಲ್ಲ. ಅಗತ್ಯ ಚಿಕಿತ್ಸೆ ನೀಡಿದ್ದರೆ ಹಸು ಬದುಕುಳಿಯುತ್ತಿತ್ತು. ಆದರೆ ಇವರ ನಿರ್ಲಕ್ಷ್ಯದ ಪರಿಣಾಮ ಹಸು ಮೃತಪಟ್ಟಿದೆ. ಇದಕ್ಕೆ ಇಲಾಖೆಯ ಅಧಿಕಾರಿಗಳೇ ಕಾರಣ. ಆದ್ದರಿಂದ ನಿರ್ಲಕ್ಷ್ಯ ವಹಿಸಿದ್ದ ಪಶು ಪರೀಕ್ಷಕರಿಂದ ರೈತನಿಗೆ ಹಾಲು ಕರೆಯುವ ಹಸು ಕೊಡಿಸಬೇಕು. ಮೃತ ಹಸುವಿಗೆ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು. ಜತೆಗೆ ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕಾಗಮಿಸಿದ ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಮಂಜುನಾಥ್ ಅವರು ಸಮಸ್ಯೆಯನ್ನು ಆಲಿಸಿದರು. ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಇದೇ ವೇಳೆ ರೈತರು ಮಾತನಾಡಿ, ಮಾರ್ಟಳ್ಳಿ ಸುತ್ತಮುತ್ತಲು ಹೆಚ್ಚು ಹಳ್ಳಿಗಳಿದ್ದು, ಜೀವನೋಪಾಯಕ್ಕಾಗಿ ಜಾನುವಾರುಗಳನ್ನು ಸಾಕಣೆ ಮಾಡುತ್ತಿದ್ದೇವೆ. ಆದರೆ ಇಲ್ಲಿನ ಪಶು ಆಸ್ಪತ್ರೆಯಲ್ಲಿ ರೈತರಿಗೆ ಯಾವುದೇ ಸೌಕರ್ಯ ಸಿಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಿ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜು, ರೈತ ಮುಖಂಡರಾದ ಅರ್ಪುದರಾಜ್, ಪುಟ್ಟಸ್ವಾಮಿ, ರವಿ, ಡೇವಿಡ್, ಫ್ರಾನ್ಸಿಸ್, ಪೀಟರ್, ಅಂತೋಣಿ, ಜಪಮಾಲೆ, ಸೂಸೈಮಾಣಿಕ್ಯಂ, ಲೂರ್ದುಮೇರಿ, ಕವಿತಾ, ಸ್ಟೆಲ್ಲಾಮೇರಿ ಇನ್ನಿತರರಿದ್ದರು.