ಯಳಂದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಡಾ.ಎ.ಎಂ.ಪ್ರಭುಸ್ವಾಮಿ ಮಾತನಾಡಿದರು. ಎಚ್.ವಿ.ಚಂದ್ರು, ಪಿ.ಸಿ.ಶ್ರೀಕಂಠಸ್ವಾಮಿ, ಕಿನಕಹಳ್ಳಿ ಪ್ರಭುಪ್ರಸಾದ್ ಇದ್ದರು.
ಯಳಂದೂರು: ಹನ್ನೆರಡನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರ ಆಪ್ತರಾಗಿ, ವಹಿಸಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹಡಪದ ಅಪ್ಪಣ್ಣ ಜಗತ್ತಿಗೆ ಪ್ರಾಮಾಣಿಕತೆಯ ಸಂಕೇತವಾಗಿದ್ದಾರೆ ಎಂದು ಮಂಗಲ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಡಾ.ಎ.ಎಂ. ಪ್ರಭುಸ್ವಾಮಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಮಾತನಾಡಿದ ಅವರು, ಅಪ್ಪಣ್ಣ 1160ರಲ್ಲಿ ಬಸವನಬಾಗೇವಾಡಿಯ ಮುಸುಕಿನವಾಡ ಗ್ರಾಮದಲ್ಲಿ ಜನಿಸಿದರು. ಅವರ ಉಪಲಬ್ಧ 251 ವಚನಗಳಲ್ಲಿ ಜೀವನದ ಸಾರ ಅಡಗಿದೆ ಎಂದರು.
ಹಡಪದ ಅಪ್ಪಣ್ಣ ಅವರ ಮಡದಿ ಲಿಂಗಮ್ಮ ಕೂಡ ವಚನಕಾರ್ತಿಯಾಗಿದ್ದು, ಬಸವಣ್ಣನವರು ನಿಜಸತಿ ಎಂಬ ಬಿರುದು ನೀಡಿದ್ದರು. ಅವರ 120 ವಚನಗಳೂ ಲಭ್ಯವಾಗಿವೆ. ಬಸವಣ್ಣನವರ ಕಾರ್ಯದರ್ಶಿಯಾಗಿದ್ದ ಅವರು ಮಡದಿಯೊಂದಿಗೆ ಅಲ್ಲೇ ಇದ್ದುಕೊಂಡು ಅನುಭವ ಮಂಟಪವನ್ನು ನಿಭಾಯಿಸಿದ ರೀತಿ ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ. ಕಾಯಕದ ಬಗ್ಗೆ ಇಟ್ಟಿದ್ದ ಪ್ರೀತಿ ಅಪರಿಮಿತವಾಗಿದ್ದು, ಅವರ ಶ್ರದ್ಧಾಭಕ್ತಿ ಎಲ್ಲರಿಗೂ ಆದರ್ಶವಾಗಬೇಕು. ಬಸವಣ್ಣನವರು ಬಿಜ್ಜಳನ ಮಂತ್ರಿಯಾಗಿ ಅವರು ಸಾಧಿಸಿದ ಸಾಧನೆ ಇಂದಿನ ರಾಜಕಾರಣಿಗಳಿಗೆ ದಾರಿದೀಪವಾಗಬೇಕು ಎಂದು ಹೇಳಿದರು.
ಸವಿತ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳನ್ನು ಕೆಲಸಕ್ಕೆ ದೂಡಿ ಬಾಲ ಕಾರ್ಮಿಕರಾಗಿ ಮಾಡುವ ಬದಲು ಇವರಿಗೆ ಉನ್ನತ ಶಿಕ್ಷಣವನ್ನು ನೀಡಬೇಕು. ಸಂವಿಧಾನ ನೀಡಿರುವ ಸವಲತ್ತುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಪಿ.ಸಿ.ಶ್ರೀಕಂಠಸ್ವಾಮಿ, ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಗ್ರೇಡ್-2 ತಹಸೀಲ್ದಾರ್ ಶಾಂತಿ, ಬಿಳಿಗಿರಿರಂಗನಾಥಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುಂಬಳ್ಳಿ ರಾಜಣ್ಣ, ಸಿಪಿಐ ಸುಬ್ರಹ್ಮಣ್ಯ ಸೇರಿದಂತೆ ಅನೇಕರು ಇದ್ದರು.