ಗುಂಡ್ಲುಪೇಟೆ ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಕಿರಿಯ ಕಾಲೇಜಿನ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ ಶಿಕ್ಷಕರಿಗೆ ಗುರುವಂದನೆ ಮೂಲಕ ಗೌರವ ಸಲ್ಲಿಸಿದರು. 
ಚಾಮರಾಜನಗರ

ಸಾಧನೆಗೆ ಗುರುವಿನ ಮಾರ್ಗದರ್ಶನ ಅಗತ್ಯ

ಗುಂಡ್ಲುಪೇಟೆ: ತಮಗೆ ವಿದ್ಯೆ ಕಲಿಸಿ ಜೀವನದ ಬಗ್ಗೆ ಮಾರ್ಗದರ್ಶನ ಮಾಡಿದ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿರುವುದು ಶ್ಲಾಘನೀಯ ಎಂದು ನಿವೃತ್ತ ಉಪಪ್ರಾಂಶುಪಾಲ ಮುತ್ತುರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ 2009 -10ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಸ್ನೇಹಸಮ್ಮಿಲನ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ತಂದೆ, ತಾಯಿ ನಂತರ ಗುರುಗಳ ಸ್ಥಾನ ಮಹತ್ವಪೂರ್ಣವಾಗಿದ್ದು, ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಅವಿನಾಭಾವ ಸಂಬಂಧವಿದೆ. ಗುರುವನ್ನೇ ಬ್ರಹ್ಮ, ವಿಷ್ಣು ಮಹೇಶ್ವರ ಎಂದು ಗೌರವಿಸಲಾಗುತ್ತದೆ. ಯಾವುದೇ ರೀತಿಯ ಷರತ್ತು ಇಲ್ಲದೆ ಪ್ರೀತಿ ತೋರುವ ತಂದೆ, ತಾಯಿಯ ನಂತರದ ಸ್ಥಾನ ಗುರುವಿನದು. ನಿಷ್ಕಲ್ಮಶ, ನಿಸ್ವಾರ್ಥ ಭಾವನೆಯಿಂದ ವಿದ್ಯಾರ್ಥಿಗಳನ್ನು ಸರಿ ಮಾರ್ಗದತ್ತ ಗುರು ಕೊಂಡೊಯ್ಯುತ್ತಾನೆ. ಆ ಕಾರಣದಿಂದ ವಿದ್ಯಾರ್ಥಿಗಳು ಜೀವನದಲ್ಲಿ ಆದರ್ಶ ಗುರುವಿನ ಮಾರ್ಗ ಅನುಸರಿಸಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.

ವಿದ್ಯಾರ್ಥಿ ಸಂಘದ ವಿನುತಾ ಮಾತನಾಡಿ, ನಮ್ಮ ಸ್ನೇಹಿತರು ವಿವಿಧೆಡೆ ಉದ್ಯೋಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅಂತಹ ಎಲ್ಲ ಸ್ನೇಹಿತರನ್ನು ಒಂದೆಡೆ ಸೇರಬೇಕು ಹಾಗೂ ಅಕ್ಷರ ಕಲಿಸಿದ ಗುರುಗಳಿಗೆ ಗೌರವ ಸಮರ್ಪಿಸಬೇಕು ಎಂಬ ಉದ್ದೇಶದಿಂದ ಹಲವು ದಿನಗಳ ಪ್ರಯತ್ನದ ಫಲವಾಗಿ ಈ ಕಾರ್ಯಕ್ರಮ ರೂಪುಗೊಂಡಿದೆ ಒಂದು ರೀತಿಯ ಸಾರ್ಥಕ ಭಾವ ಮೂಡಿದೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಳೆಯ ನೆನಪುಗಳನ್ನು ಮೆಲಕು ಹಾಕಿ ಸಂತೋಷದಿಂದ ಹಾಡಿ ಕುಣಿದರು. ಅಲ್ಲದೆ ತಮ್ಮ ನೆಚ್ಚಿನ ಗುರುಗಳಿಗೆ ಅವರ ಭಾವಚಿತ್ರವಿರುವ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಾದ ಹಾಲಿ ಉಪ ಪ್ರಾಂಶುಪಾಲ ಸಿದ್ದರಾಜು, ನಾಗಮಲ್ಲಪ್ಪ, ಸುರೇಶ್, ರಾಜೇಂದ್ರ, ಬಿ.ನಾಗರಾಜು, ಬೆಳ್ಳೇಗೌಡ, ಎಸ್.ಎಸ್.ನಾಗರಾಜು, ರಾಮಚಂದ್ರಭಟ್, ತುಳಸಮ್ಮ, ರುದ್ರಪ್ಪ, ಪುಟ್ಟಮಾದಪ್ಪ. ಮಾದೇಗೌಡ, ಮಹದೇವಯ್ಯ, ಮಂಜುನಾಥ್, ವಿಶ್ವನಾಥ್, ಶಿವವೀರಭದ್ರಪ್ಪ, ಬಸವಣ್ಣ, ಪ್ರಭಾಕರ್, ಮಲ್ಲಿಗಮ್ಮ, ಸಾವಿತ್ರಿ, ರಾಧಿಕಾ, ಸೋಮಣ್ಣ, ಮುತ್ತಣ್ಣ, ಹಳೆಯ ವಿದ್ಯಾರ್ಥಿಗಳಾದ ಪುಟ್ಟರಾಜು ಸಂತೋಷ್, ಇಂದ್ರಮ್ಮ, ವಿನುತಾ, ಲಾವಣ್ಯ, ಸ್ವಾತಿ ಇನ್ನಿತರರು ಹಾಜರಿದ್ದರು.