ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಆಯೋಜಿಸಿದ್ಧ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಅವರನ್ನು ಸನ್ಮಾನಿಸಲಾಯಿತು. ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಪುರುಷೋತ್ತಮ, ಪುಟ್ಟಣ್ಣ ಇತರರಿದ್ದರು. 
ಚಾಮರಾಜನಗರ

ಸಾಲೂರು ಮಠದ ಶ್ರೀಗಳ ಸಮಾಜಕ್ಕೆ ದಾರಿದೀಪ

ನಾಗೇಶ ಎಸ್
ಹನೂರು: ಸಾಲೂರು ಮಠದ ಶ್ರೀಗಳ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಸೇವೆ ಉತ್ತಮ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪಾ ತಿಳಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದದಲ್ಲಿ ಬುಧವಾರ ಶ್ರೀ ಮಲೆಮಹದೇಶ್ವರ ಸ್ವಾಮಿ ಕೃಪಾ ಎಜುಕೇಷನ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸಿದೆ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ದಿಸೆಯಲ್ಲಿ ಸಾಲೂರು ಮಠವು ಕಳೆದ ಆರೇಳು ದಶಕದಿಂದ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇಯಾದ ಗಣನೀಯ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಈ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ಸಂತಸದ ಸಂಗತಿ. ಜತೆಗೆ ಸಾಲೂರು ಶ್ರೀಗಳು ಕೈಗೊಳ್ಳುತ್ತಿರುವ ಧಾರ್ಮಿಕ ಹಾಗೂ ಸಾಮಾಜಿಕ ಸೇವೆ ನಿಜಕ್ಕೂ ಮೆಚ್ಚುವಂತದ್ದು. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಕರಿಗೆ ವಿಧೇಯಕರಾಗಿ ಶಿಸ್ತಿನಿಂದ ಇರಬೇಕು. ಓದಿನ ಕಡೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಗುರು, ಹಿರಿಯರ ಮಾರ್ಗದರ್ಶನವಿಲ್ಲದೆ ಯಾವುದೇ ಕಾರಣಕ್ಕೂ ನಿರ್ದಿಷ್ಟ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ. ಸಿದ್ಧರಿಲ್ಲದ ಸಾಮಾನ್ಯರು ದೇವರನ್ನು ತೋರಿಸಿ ಎಂದು ಹಪಹಪಿಸಿದರೂ ಮಹಾತ್ಮರು ಏಕಾಏಕಿ ತೋರಿಸಲಾರರು. ಆದ್ದರಿಂದ ಅಧ್ಯಯನ, ಅಧ್ಯಾಪನೆಯಿಂದಲೇ ಸತ್ಯದ ಸ್ವರೂಪವನ್ನು ತಿಳಿಸಿ ಕೊಡುವ ಗುರುಗಳ ಮಾರ್ಗದರ್ಶನ ಅತ್ಯವಶ್ಯಕ. ಹಾಗಾಗಿ ಪ್ರತಿಯೊಬ್ಬರೂ ಗುರುಗಳ ಮಾರ್ಗದರ್ಶನದಲ್ಲಿ ನಡೆದಾಗ ಯಶಸ್ಸು ಗಳಿಸಿ ಜೀವನದಲ್ಲಿ ಸಫಲತೆ ಸಾಧಿಸಬಹುದು ಎಂದರು.
ಶಿಕ್ಷಣ ಸಂಸ್ಥೆಯ ವಸತಿ ನಿಲಯದ ವಿದ್ಯಾರ್ಥಿಗಳ ಪರಿಕರಗಳಿಗಾಗಿ ಕರ್ನಾಟಕ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಿಂದ ಅನುದಾನ ನೀಡಲಾಯಿತು. ಈ ಸಂದರ್ಭದಲ್ಲಿ ಗುಂಡೇಗಾಲ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ, ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಕಿಶೋರ್, ಕೆಪಿಎಸ್‌ಸಿ ನಿಕಟ ಪೂರ್ವ ಅಧ್ಯಕ್ಷ ಡಾ.ಎಂ.ಮಹದೇವು, ಇಂಜಿನಿಯರ್ ಕಿರಣ್, ಬೇಡಗಂಪಣ ಸಮುದಾಯದ ಹಿರಿಯ ಮುಖಂಡ ಪುಟ್ಟಣ್ಣ, ಶಾಲಾ, ಕಾಲೇಜಿನ ಶಿಕ್ಷಕರು ಇದ್ದರು.