ಗುಂಡ್ಲುಪೇಟೆ ಪಟ್ಟಣದ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಚಾಮುಲ್ ವತಿಯಿಂದ ಹಾಲು ವಿತರಿಸಲಾಯಿತು. ನಂಜುಂಡಪ್ರಸಾದ್, ಸುನಿಲ್, ಡಾ.ಮಂಜುನಾಥ್ ಇದ್ದರು.
ಗುಂಡ್ಲುಪೇಟೆ: ವಿಶ್ವ ಹಾಲು ದಿನಾಚರಣೆ ಅಂಗವಾಗಿ ಚಾಮುಲ್ ವತಿಯಿಂದ ಪಟ್ಟಣದ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಹಾಲು ವಿತರಿಸಲಾಯಿತು.
ಒಕ್ಕೂಟದ ನಿರ್ದೇಶಕರಾದ ಎಚ್.ಎಸ್.ನಂಜುಂಡ ಪ್ರಸಾದ್ ಹಾಲು ವಿತರಣೆ ಮಾಡಿ ಮಾತನಾಡಿ, 2021ರಿಂದ ಆಹಾರ ಮತ್ತು ಕೃಷಿ ಸಂಸ್ಥೆಯ ಪರವಾಗಿ ಜೂನ್ 1 ರಂದು ದೇಶಾದ್ಯಂತ ವಿಶ್ವ ಹಾಲು ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಕ್ಕಳಿಂದ ವೃದ್ದರವರೆಗೆ ಪ್ರತಿಯೊಬ್ಬರೂ ಹಾಲು ಬಳಕೆ ಮಾಡುತ್ತಿದ್ದಾರೆ. ದೇಶದ ನೂರಾರು ಕೋಟಿ ರೈತರು ಕೃಷಿಗಿಂತ ಹೆಚ್ಚಾಗಿ ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ರಾಜ್ಯ ಸರ್ಕಾರವು ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ಶಾಲೆಗಳಲ್ಲಿ ಉಚಿತವಾಗಿ ಹಾಲು ವಿತರಣೆ ಮಾಡುತ್ತಿದೆ. ನಂದಿನಿ ಮಹಾಮಂಡಲದ ಮೂಲಕ ಹೈನುಗಾರರಿಂದ ಖರೀದಿಸಿದ ಹಾಲಿನಿಂದ ಶ್ರೀಸಾಮಾನ್ಯರಿಗೆ ಬೇಕಾದ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಒಕ್ಕೂಟವು ಹೈನುಗಾರರು ಮತ್ತು ಬಳಕೆದಾರ ಹಿತ ಕಾಪಾಡುತ್ತಿದೆ. ಈ ಗುಣಮಟ್ಟದ ಉತ್ಪನ್ನಗಳಿಗೆ ನೆರೆಯ ರಾಜ್ಯಗಳು ಹಾಗೂ ವಿದೇಶಗಳಲ್ಲಿಯೂ ಹೆಚ್ಚಿನ ಬೇಡಿಕೆಯಿದ್ದು ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದೆ ಎಂದು ಹೇಳಿದರು.
ಚಾಮುಲ್ ನಿರ್ದೇಶಕ ಎಂ.ಪಿ.ಸುನಿಲ್, ಮಾರುಕಟ್ಟೆ ವಿಭಾಗದ ರಾಘವೇಂದ್ರರಾವ್, ಆರೋಗ್ಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್, ಮಕ್ಕಳ ವೈದ್ಯ ಡಾ.ಮಹೇಶ್, ನಂದಿನಿ ಉತ್ಪನ್ನಗಳ ಮಾರಾಟಕೇಂದ್ರಗಳ ಮಾಲೀಕರಾದ ಬೈರೇಶ್ ಗಾಣಿಗ್, ಶರತ್, ವೃಷಭೇಂದ್ರ ಮತ್ತಿತರರಿದ್ದರು.